Belagavi NewsBelgaum NewsKannada NewsKarnataka NewsNationalPoliticsTravel

*ಸಂಸದ ಕಡಾಡಿಗೆ ದೋಷ ಪೂರಿತ ಟಿಕೆಟ್ ನೀಡಿದ ಸ್ಪೈಸ್ ಜೆಟ್: ಬಡ್ಡಿ ಸಮೇತ ಹಣ ವಾಪಸ್ ನೀಡಲು ಆದೇಶ*

ಪ್ರತಿಶತ 9 ರ ಬಡ್ಡಿ ಸಮೇತ ಮರು ಸಂದಾಯಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದಿಂದ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೋಷಪೂರಿತ ಏರ್ ಟಿಕೆಟ್ ನೀಡಿದ ಸ್ಪೈಸ್ ಜೆಟ್ ವಿಮಾನ ಸಂಸ್ಥೆಯ ವಿರುದ್ಧ ಸಂಸದರಾದ ಈರಣ್ಣ ಕಡಾಡಿ ಅವರು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರ ಹಿನ್ನೆಲಯಲ್ಲಿ ಗ್ರಾಹಕರ ವ್ಯಾಜ್ಯಗಳ ಆಯೋಗವು ಏರ್ ಟಿಕೆಟ್ ಮೊತ್ತ ರೂ.10,927/- ಪ್ರತಿಶತ ವಾರ್ಷಿಕ ಶೇಕಡ 9 ರೊಂದಿಗೆ ಬಡ್ಡಿ ಸಮೇತ ಮರು ಸಂದಾಯ ಮಾಡುವಂತೆ ಆಯೋಗದ ವತಿಯಿಂದ ಆದೇಶ ನೀಡಲಾಗಿರುತ್ತದೆ.

ಸಂಸದ ಈರಣ್ಣ ಕಡಾಡಿ ದಿನಾಂಕ: 09.10.2020 ರಂದು ದೆಹಲಿಯಿಂದ ಬೆಂಗಳೂರಿಗೆ ಮತ್ತು ದಿನಾಂಕ: 09.11.2020 ರಂದು ಬೆಂಗಳೂರಿನಿಂದ ದೆಹಲಿಗೆ ರೂ.5,004/- ಮತ್ತು ರೂ.5,923/- ಗಳ ವಿಮಾನಯಾನದ ಟಿಕೆಟ್ ಖರೀದಿಸಿ ಪ್ರಯಾಣಿಸಿದ್ದರು. ತದನಂತರ ಸದರಿ ಮೊತ್ತವನ್ನು ಮರು ಸಂದಾಯ ಮಾಡಲು ಕೋರಿ, ಸಂಸದರು ಸಕ್ಷಮ ಸೆಕ್ರೆಟರಿಯೇಟ್‌ಗೆ ಟಿಕೆಟ್ ಸಲ್ಲಿಸಿದಾಗ, ಸಕ್ಷಮ ಪ್ರಾಧಿಕಾರ, ಸಂಸದರ ಮನವಿಯನ್ನು ತಿರಸ್ಕರಿಸಿ ಸದರಿ ಟಿಕೆಟ್‌ಗಳು “ಕೂಪನ್ ಟಿಕೆಟ್” ಇರುವುದರಿಂದ ಮರು ಸಂದಾಯ ಮಾಡಲಾಗುವುದಿಲ್ಲವೆಂದು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಗ್ರಾಹಕ ಸಂಸದರು ವಿಮಾನ ಸಂಸ್ಥೆಯ ನಿಷ್ಠಾಳಜಿ ಮತ್ತು ಸೇವಾ ನ್ಯೂನ್ಯತೆಯಿಂದ ತಾವು ಮುಜುಗರಕ್ಕೊಳ ಪಡಬೇಕಾಯಿತು ಮತ್ತು ತಮಗಾದ ತೊಂದರೆಗಳಿಗೆ ಪರಿಹಾರ ನೀಡಲು ಆದೇಶ ಕೋರಿ ಬೆಳಗಾವಿಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು.

ದೂರು ಸ್ವೀಕರಿಸಿದ ಆಯೋಗ, ಸೈಸ್ ಜೆಟ್ ಮತ್ತು “ಈಸ್ ಮೈಟ್ರಿಪ್” ಸೇವಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿ, 1ನೇ ಎದುರುದಾರ ವಿಮಾನಯಾನ ಸಂಸ್ಥೆ ಹಾಜರಾಗದೇ ಇರುವುದರಿಂದ ಸಂಸ್ಥೆಯ ವಿರುದ್ಧ “ಏಕತರ್ಫಿ” ಆದೇಶಿಸಿ 2ನೇ ಎದುರುದಾರ ಸಂಸ್ಥೆ ತನ್ನ ವಕೀಲರ ಮುಖಾಂತರ ಹಾಜರಾಗಿ ದೂರಿಗೆ ಪ್ರತಿವಾದ ಸಲ್ಲಿಸಿ, “ಈಸ್ ಮೈಟ್ರಿಪ್” ಕೇವಲ ಟಿಕೆಟ್ ಬುಕ್ಕಿಂಗ್‌ನ ಮಧ್ಯವರ್ತಿ ಸಂಸ್ಥೆಯಾಗಿ ಮಾತ್ರ ಸೇವೆ ನೀಡಿದ್ದು, ಈ ಪ್ರಕರಣದಲ್ಲಿ ತನ್ನಿಂದ ಯಾವುದೇ ಸೇವಾ ನ್ಯೂನ್ಯತೆಯಾಗಿರುವುದಿಲ್ಲವೆಂದು ವಾದ ಮಂಡಿಸಿತ್ತು.

ಈ ಪ್ರಕರಣದ ವಿವಾದಾಂಶಗಳನ್ನು ಪರಿಶಿಲಿಸಿದ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷರಾದ ಮಹಾಂತೇಶ ಶಿಗ್ಲಿ ಹಾಗೂ ಗಿರೀಶ ಗೌಡ ಪಾಟೀಲ ಸದಸ್ಯರನ್ನು ಒಳಗೊಂಡ ಜಿಲ್ಲಾ ಆಯೋಗ, ದೂರುದಾರರು 1ನೇ ಎದುರುದಾರ ವಿಮಾನ ಸೇವಾ ಸಂಸ್ಥೆಯು ದೋಷಯುಕ್ತ / ತಪ್ಪಿನಿಂದ ಕೂಡಿದ ಟಿಕೆಟ್ ನೀಡಿ ಗ್ರಾಹಕರಿಗೆ ಸೇವಾ ನ್ಯೂನ್ಯತೆಯುಂಟು ಮಾಡಿದೆ ಎಂದು ಪರಿಗಣಿಸಿ, ದೂರುದಾರರು ಖರೀದಿಸಿದ ಒಟ್ಟು ಟಿಕೆಟ್ ಮೊತ್ತ

ರೂ.10,927/- ಗಳನ್ನು ದಿನಾಂಕ: 09.11.2020 ರಿಂದ ಅನ್ವಯಿಸುವಂತೆ ಪ್ರತಿಶತ ವಾರ್ಷಿಕ ಶೇಕಡ 9% ರಂತೆ ಆಕರಿಸಿ ಮರು ಸಂದಾಯ ಮಾಡಬೇಕು. 

ಅಲ್ಲದೇ, ದೂರುದಾರರಿಗೆ ಆದ ಮಾನಸಿಕ ಕ್ಷೆಬೆಗೆ ರೂ.10,000/- ಮತ್ತು ಪ್ರಕರಣದ ವೆಚ್ಚ ರೂ.5,000/- ಗಳನ್ನು ಭರಿಸುವಂತೆ ಆದೇಶಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button