
ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಕಾಂಗ್ರೆಸ್ ಮುಖಂಡ, ಮಾಜಿ ಮೇಯರ್ ಶರಣು ಮೋದಿ ವಿರುದ್ಧ ಮಹಿಳಾ ಅಧಿಕಾರಿಯೊಬ್ಬರು ಕಿರುಕುಳ ಆರೋಪ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ಅರ್ಚನಾ ಕಮಲಾಪುರಕರ, ಮಾಜಿ ಮೇಯರ್ ಶರಣು ಮೋದಿ ವಿರುದ್ಧ ಕಿರುಕುಳ ಆರೋಪ ಮಾಡಿದ್ದಾರೆ.
ತಾನು ಈ ಹಿಂದೆ ಪರವಾನಗಿ ಇಲ್ಲದ ಹತ್ತಕ್ಕೂ ಹೆಚ್ಚು ನೀರಿನ ಘಟಕಗಳನ್ನು ಸೀಜ್ ಮಾಡಿದ್ದೆ. ನಿನ್ನೆ ಐಎಸ್ ಐ ಹಾಗೂ ಪರವಾನಗಿ ಪಡೆಯದ ಮೂರು ನೀರಿನ ಘಟಕಗಳನ್ನು ಸೀಜ್ ಮಾಡಿದ್ದೇನೆ. ಈ ಘಟನೆ ಬೆನ್ನಲ್ಲೇ ನಿನ್ನೆ ಸಂಜೆ ಕಾಂಗ್ರೆಸ್ ಮುಖಂಡ, ಮಾಜಿ ಮೇಯರ್ ಶರಣು ಮೋದಿ ಕರೆ ಮಾಡಿ ನನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾಕೆ ನೀರಿನ ಘಟಕ ಸೀಜ್ ಮಾಡಿದ್ದೀರಿ? ನಿಮ್ಮ ವೈಯಕ್ತಿಕ ಹಿತಾಸಕ್ತಿಯಾದರೂ ಏನು ಎಂದು ಕೇಳಿದ್ದಾರೆ. ಒಬ್ಬ ಮಹಿಳಾ ಅಧಿಕಾರಿಗೆ ಈ ರೀತಿ ಫೋನ್ ಮಾಡಿ ಕಿರುಕುಳ ನೀಡಿದರೆ ನಾವು ಕೆಲಸ ಮಾದಲು ಹೇಗೆ ಸಾಧ್ಯವಾಗುತ್ತೆ? ನಮಗೆ ಸೂಕ್ತ ಭದ್ರತೆ ನೀಡಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಸೂಕ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ