Kannada NewsKarnataka NewsPolitics

*ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲು ಶಾ ಸೂಚಿಸಿದ್ದಾರೆ: ವಿಜಯೇಂದ್ರ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿಗೆ ಆಗಮಿಸಿದ  ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ  ರಾಜ್ಯ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಬೇಕು ಎಂಬ ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು. 

ಅಮಿತ್ ಶಾ ಜೊತೆಗಿನ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾತ್ರ ಮಾಡುತ್ತಿದ್ದು ಅದಕ್ಕೆ ತಕ್ಕಂತೆ ತೀರ್ಮಾನಗಳನ್ನ ಮಾಡುತ್ತಿದೆ. ನಿನ್ನೆ ವಸತಿ ಇಲಾಖೆಯಡಿ ಅಲ್ಪಸಂಖ್ಯಾತರಿಗೆ ಶೇ 10 ಇದ್ದ ಮೀಸಲಾತಿಯನ್ನು ಶೇ 15ಕ್ಕೆ ಏರಿಸಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳು ಒಡೆದು ಆಳುವ ನೀತಿಯನ್ನ ಅನುಸರಿಸುತ್ತಿದ್ದಾರೆ.  ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನರೇ ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದರು.

ಸದ್ಯ ಎಲ್ಲೆಡೆ ಸುದ್ದಿಯಾಗುತ್ತಿರುವ ಕಾಂಗ್ರೆಸ್ಸಿನ ಬಿ.ಆರ್.ಪಾಟೀಲ್ ಅವರ ಆರೋಪದ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ, ಅದರ ಹೈಕಮಾಂಡಿನ ಎಟಿಎಂ ಆಗಿ ಬದಲಾಗಿದೆ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ 40% ಕಮಿಷನ್ ಎಂದು ಆರೋಪ ಮಾಡಿದ್ದರು, ಈಗ ಅವರ ಪಕ್ಷದವರೇ ಆರೋಪ ಮಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಲಂಚ ಇಲ್ಲದೇ ಯಾವುದೇ ಕೆಲಸ ಆಗಲ್ಲ, ರಾಜ್ಯದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್ ಎಂಬ ನಿಯಮದ ಆಧಾರದ ಮೇಲೆ ಅಭಿವೃದ್ಧಿ ಮಾಡುತ್ತಿದ್ದು ಯಾವುದೇ ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಯೋಜನೆ ಮಾಡಲ್ಲ. ಎಲ್ಲರಿಗೂ ನ್ಯಾಯ ಕೊಡಿಸುತ್ತಾರೆ. ಅಲ್ಲದೇ, ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ರೈತರಿಗೆ 6 ಸಾವಿರ ಜಮಾ ಆಗುತ್ತಿದ್ದು ಇದು ಕೇವಲ ಹಿಂದೂಗಳಿಗೆ ಮಾತ್ರ ಅಲ್ಲ, ಹೀಗೆ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಸರ್ವರಿಗೂ ಮೀಸಲಾಗಿದೆ ಎಂದು ಹೇಳಿದ್ದಾರೆ.

Related Articles

Back to top button