
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಕಲಬುರ್ಗಿ, ಯಾದಗಿರಿ, ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಕೊಡಗು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ.
ಈ ನಡುವೆ ಹವಾಮಾನ ಇಲಾಖೆ ಚಂಡಮಾರುತದ ಎಚ್ಚರಿಕೆ ನೀಡಿದ್ದು, ಮೋಚಾ ಸೈಕ್ಲೋನ್ ನಿಂದಾಗಿ ಮಳೆಯ ಪ್ರಮಾಣ ರಾಜ್ಯದಲ್ಲಿಯೂ ಹೆಚ್ಚಾಗಲಿದೆ ಎಂದು ತಿಳಿಸಿದೆ.
ಮೇ 6ರಂದು ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳಲಿದ್ದು, ಮೇ7ರಂದು ಚಂಡಮಾರುತ ಬಂಗಾಳಕೊಲ್ಲಿ ಹಾಗೂ ಇತರ ಭಾಗಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ 48 ಗಂಟೆಗಳಲ್ಲಿ ಭಾರತದ ಕೆಲವು ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮೇ 8ರಂದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಳ್ಳಲಿದ್ದು ಹಾಗಾಗಿ ಚಂಡಮಾರುತ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಕೇಂದ್ರೀಕೃತವಾಗಲಿದೆ. ಉತ್ತರ ಬಂಗಾಳಕೊಲ್ಲಿಯಿಂದ ಕೇಂದ್ರ ಬಂಗಾಳಕೊಲ್ಲಿಕಡೆ ಚಂಡಮಾರುತ ಚಲಿಸುವ ವೇಳೆ ಚಂಡಮಾರುತ ತೀವ್ರಗೊಲ್ಳುವ ಸಾಧ್ಯತೆ ಇದೆ. ಇದು ಭಾರತದ ಕರಾವಳಿ ಭಾಗಗಳ ಮೇಲೆ ಪರಿಣಾಮ ಬೀರಲಿದೆ. ಮೀನುಗಾರರು, ಸಮುದ್ರ ತೀರದಲ್ಲಿರುವವರು ಸಮುದ್ರಕ್ಕೆ ಇಳಿಯದೇ ಎಚ್ಚದಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ.