Uncategorized

*ವಿಎಚ್ ಪಿ ಪ್ರಮುಖ ಕೇಶವ ಹೆಗಡೆ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ವಿಶ್ವ ಹಿಂದು ಪರಿಷತ್ತಿನ ಹಿರಿಯ ಮುಖಂಡ, ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ (63) ಬುಧವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.


ಶಂಕರಪುರದಲ್ಲಿರುವ ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿದ್ದ ಕೇಶವ ಹೆಗಡೆ ಅವರಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೃದಯಾಘಾತವಾಗಿತ್ತು. ಕೂಡಲೆ ಅವರನ್ನು ಸಮೀಪದಲ್ಲಿರುವ ರಂಗದೊರೈ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗಾಗಲೇ ಕೊನೆಯ ಉಸಿರೆಳೆದಿದ್ದರು.


ಪಾರ್ಥಿವ ಶರೀರವನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವ ಶಿಲ್ಪ ಸಭಾಂಗಣದಲ್ಲಿ ಬುಧವಾರ ರಾತ್ರಿ ತನಕ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದ ಬಳಿಕ ಹುಟ್ಟೂರಿಗೆ ಪಾರ್ಥೀವ ಶರೀರವನ್ನು ಕರತರಲಾಗುತ್ತಿದೆ.


ಮೂಲತಃ ಶಿರಸಿಯ ತಟ್ಟಿಸರ ಮಣ್ಣಿಮನೆಯ ಕೇಶವ ಹೆಗಡೆ ಅವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದವರು‌. ನಂತರ ಪೂರ್ಣಾವಧಿ ಪ್ರಚಾರಕರಾಗಿ ತಮ್ಮನ್ನು ತೊಡಗಿಸಿಕೊಂಡ ಕೇಶವ ಹೆಗಡೆ ಅವರನ್ನು ಬಳಿಕ ವಿಶ್ವ ಹಿಂದೂ ಪರಿಷತ್‌ಗೆ ನಿಯೋಜನೆ ಮಾಡಲಾಗಿತ್ತು. ರಾಮಮಂದಿರ ಹೋರಾಟ ಸೇರಿ ವಿಹಿಂಪದ ಎಲ್ಲ ಹೋರಾಟ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಖರ ಮಾತು ಹಾಗೂ ನೇರ ನುಡಿಯಿಂದ ಸಂಘಟನಾ ವಲಯದಲ್ಲಿ ಗುರುತಾಗಿದ್ದರು. ಮೃತರು ಓರ್ವ ಸಹೋದರ, ಐವರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಕೇಶವ ಹೆಗಡೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ನಗರದ ಸಾಮ್ರಾಟ ಎದುರಿನ‌ ನೆಮ್ಮದಿಯ ಸದ್ಗತಿಯಲ್ಲಿ ಅವಕಾಶ ಮಾಡಲಾಗಿದೆ.


ಗುರುವಾರ ಬೆಳಿಗ್ಗೆ 6ರಿಂದ‌11ರ ತನಕ ಸಾರ್ವಜನಿಕ ದರ್ಶನ, ಬಳಿಕ ಶ್ರದ್ದಾಂಜಲಿ ಸಭೆ, ನಂತರ ಅಂತ್ಯಕ್ರಿಯೆ ನಡೆಯಲಿದೆ. ವಿಶ್ವ ಹಿಂದೂ ಪರಿಷತ್ ರಾಷ್ಟ್ರ ಪ್ರಮುಖರು, ಆರ್ ಎಸ್ ಎಸ್ ಪ್ರಮುಖರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು‌ ಮೂಲಗಳು ತಿಳಿಸಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button