Kannada NewsKarnataka News

ಕಿತ್ತೂರು ರಾಣಿ ಚೆನ್ನಮ್ಮಾಜಿ

ಅ.3ರಿಂದ 3 ದಿನ ಕಿತ್ತೂರು ಉತ್ಸವ, ತನ್ನಿಮಿತ್ತ ಈ ಲೇಖನ

ಸ.ರಾ. ಸುಳಕೂಡೆ
ಭಾರತವು ಒಂದು ಖಂಡವಾಗಿ ಮತ್ತು ಅತ್ಯುನ್ನತ ನಾಗರಿಕತೆಗೂ ಹೆಸರಾಗಿತ್ತು. ಅಂದಿನ ಅಖಂಡ ಭಾರತವು ಸರ್ವರೀತಿಯಿಂದಲೂ ತನ್ನ ಹಿರಿಮೆ-ಗರಿಮೆಗಳಿಂದ ಪ್ರಸಿದ್ಧಿ ಪಡೆದುಕೊಂಡಿತ್ತು. ಆದರೆ ಅಂದಿನ ಆಳರಸರ ನಡುವಿನ ತಿಕ್ಕಾಟ ಮತ್ತು ಹಗೆತನದಿಂದಾಗಿ ಆ ಹಿರಿಮೆ-ಗರಿಮೆಗಳು ಇಕ್ಕಟ್ಟಿಗೆ ಸಿಲುಕಿದ್ದು ಮತ್ತು ಪರಕೀಯರ ದಾಳಿಗಳಿಂದ ಮಂಕಾಗಿ ಹೋದದ್ದು ಇಂದಿಗೂ ಮರೆಯಲಾಗದ ವಿಸ್ಮೃತಿಯಾಗಿಯೇ ಉಳಿದಿದೆ.

ವ್ಯಾಪಾರಕ್ಕಾಗಿ ಬಂದ ಬ್ರಿಟೀಷರು ಭಾರತದ ಆಳರಸರೊಳಗಿದ್ದ ದ್ವೇಷ ಮತ್ತು ವೈರಭಾವ ಹಾಗೂ ಒಡಕನ್ನು ಅರಿತುಕೊಂಡು, ಒಬ್ಬರ ವಿರುದ್ದ ಮತ್ತೊಬ್ಬರನ್ನು ಎತ್ತಿಕಟ್ಟಿ ಪಿತೂರಿ ಮಾಡಿ, ಭಾರತ ಸಾಮ್ರಾಜ್ಯದ ಅಧಿಪತ್ಯಕ್ಕೆ ಒಡೆಯರಾಗಿಯೂ ಹೊರಹೊಮ್ಮಿದರು. ಬ್ರಿಟೀಷರ ಒಡೆದಾಳುವ ನೀತಿಯಿಂದಾಗಿ ಭಾರತದ ಒಂದೊಂದು ಸಂಸ್ಥಾನಗಳು ಅವರೊಂದಿಗೆ ಒಪ್ಪಂದ ಮಾಡಿಕೊಂಡು, ಅವರ ಸಂಚಿನಲ್ಲಿ ಭಾಗಿಯಾಗಿ ಅವರ ಆಡಳಿತಕ್ಕೆ ಬೆಂಬಲವಾಗಿ ನಿಂತವು. ಭಾರತೀಯರು ತಮ್ಮ ಸ್ವಾಭಿಮಾನವನ್ನು ಮರೆತು ಗುಲಾಮಗಿರಿಗೆ ಒಳಗಾಗಿ, ಬ್ರಿಟೀಷರ ಎಲ್ಲ ಕುತಂತ್ರಗಳನ್ನು ಒಪ್ಪಿಕೊಂಡು ಬದುಕುವುದನ್ನು ಕರಗತ ಮಾಡಿಕೊಂಡರು.

ಬ್ರಿಟೀಷರು ತಮ್ಮ ಅಧಿಪತ್ಯ ವಿಸ್ತರಣೆಗೆ ಪೂರಕವಾಗುವ ಹಲವು ಹತ್ತು ಕಾನೂನು ಕಟ್ಟಳೆಗಳನ್ನು ಜಾರಿಗೆ ತಂದರು. ಅದರಲ್ಲಿ ಗಂಡು ಸಂತಾನ ಹೊಂದದ ಸಂಸ್ಥಾನಿಕರು ಬ್ರಿಟೀಷರ ಪೂರ್ವಾನುಮತಿ ಇಲ್ಲದೆ ದತ್ತು ತೆಗೆದುಕೊಳ್ಳದಿರುವುದು ಒಂದು ಪ್ರಮುಖ ಕಾನೂನಾಗಿತ್ತು. ಈ ಕಾನೂನನ್ನು ಮುಂದೆ ಮಾಡಿಕೊಂಡು ಬ್ರಿಟೀಷರು ಅನೇಕ ಸಂಸ್ಥಾನಗಳನ್ನು ತಮ್ಮ ಕೈ ವಶಕ್ಕೆ ತೆಗೆದುಕೊಂಡರು.

ಕಿತ್ತೂರು ಸಂಸ್ಥಾನದ ರಾಜರಿಗೆ ಗಂಡು ಮಕ್ಕಳಿಲ್ಲದ ಕಾರಣ ದತ್ತು ತೆಗೆದುಕೊಂಡದ್ದನ್ನು ಕಾನೂನು ಬಾಹಿರವೆಂದು ಬ್ರಿಟೀಷರು ಪರಿಗಣಿಸಿ ಕಿತ್ತೂರು ಸಂಸ್ಥಾನವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಲು ಮುಂದಾದರು. ಕಿತ್ತೂರಿನ ಆಳರಸರು ದತ್ತು ತೆಗೆದುಕೊಂಡಿದ್ದನ್ನು ಮಾನ್ಯ ಮಾಡದೇ ಕಿತ್ತೂರು ಸಂಸ್ಥಾನವನ್ನು ಸ್ವಾಧೀನ ಪಡಿಸಿಕೊಳ್ಳಲು ಯುದ್ದದ ಭೀತಿ ಸೃಷ್ಟಿಸಿದರು.

ಇಂಥ ಕುತಂತ್ರದ ಹುನ್ನಾರಕ್ಕೆ ವಿರೋಧ ವ್ಯಕ್ತಪಡಿಸಿದ ರಾಣ ಚನ್ನಮ್ಮಾಜಿಯು ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಪಣಕಿಟ್ಟು ಹೋರಾಡಲು ಮುಂದಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವೇ ಆಗಿದೆ. “ಕಿತ್ತೂರು ನಮ್ಮದು, ನೀವು ನಮ್ಮ ಸ್ವಾಧೀನವೆಂಬುವ ನುಡಿಕೇಳಿ ಆದಳು ರಾಣ ಕೆರಳಿದ ಸಿಂಹಿಣ , ನಾಡಿಗೆ ನಾಡೇ ಹೊತ್ತಿದ್ದಿತು ಕಾಳ್ಗಿಚ್ಚ್ಚಿನಂಗ, ನಾಡಾಭಿಮಾನ ಹೆಡೆಯೆತ್ತಿ ನಿಂತ ಹಾವಿನಂಗ. ಕಿತ್ತೂರು ಸಂಸ್ಥಾನವನ್ನು ಕಬಳಿಸಲು ಬ್ರಿಟೀಷರು ಹೂಡಿದ ಕುತಂತ್ರಕ್ಕೆ ನಾಡಿಗೆ ನಾಡು ಸಜ್ಜಾಗಿ ಎದರಿಸಲು ಮುಂದಾದದ್ದು ರಾಷ್ಟ್ರಾಭಿಮಾನದ ಹೆಗ್ಗುರುತೇ ಆಗಿದೆ ಎಂದು ಜನಪದ ಕವಿ ಹೇಳಿದ್ದು ಇಂದಿಗೂ ರೋಮಾಂಚನಕಾರಿಯಾಗಿದೆ.

ಕಿತ್ತೂರಿನ ಸ್ವಾಭಿಮಾನಕ್ಕೆ ಧಕ್ಕೆ ತರುವ ಕಾರ್ಯದೊಳಗೆ ನಿರತರಾಗಿದ್ದ ಬ್ರಿಟೀಷ್ ಅಧಿಕಾರಿ ಥ್ಯಾಕರೆಯ ಕುತಂತ್ರವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಕಿತ್ತೂರು ರಾಣ ಚೆನ್ನಮ್ಮಾಜಿ ನಿರ್ವಹಿಸಿದ ರಾಜ್ಯತಾಂತ್ರಿಕ ತಂತ್ರಗಾರಿಕೆ ಮತ್ತು ದಿಟ್ಟತನವು ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ.

ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯ ಸ್ವಾಭಿಮಾನಕ್ಕೆ ಚೆನ್ನಮ್ಮಾಜಿ ತಳೆದ ನಿಲುವು ರಾಜಧರ್ಮದಲ್ಲಿಯೇ ಮುತ್ಸದ್ಧಿತನಕ್ಕೆ ಒಂದು ಉತ್ಕೃಷ್ಟ ಮಾದರಿಯಾಗಿದೆ. ಸ್ವಾತಂತ್ರ್ಯಕ್ಕಿಂತಲೂ ಮಿಗಿಲಾದದ್ದು ಮತ್ತೊಂದು ಇಲ್ಲವೆಂದು, ಪ್ರಜೆಗಳ ಅಭಿಲಾಷೆಗೆ ತನ್ನ ಪ್ರಾಣವನ್ನೇ ಪಣಕಿಟ್ಟು ಹೋರಾಟಕ್ಕಿಳಿದ ರಾಣಿ ಚೆನ್ನಮ್ಮಾಜಿಯನ್ನು ಜನಪದ ಕವಿ ಕೆರಳಿದ ಸಿಂಹಿಣ ಎಂದು ಬಣ ಸಿದ್ದು ಅತ್ಯಂತ ಯೋಗ್ಯವೇ ಆಗಿದೆ. ಹಾಗೆ “ಜನನಿ ಮತ್ತು ಜನ್ಮಭೂಮಿಗಳೆರಡು ಸ್ವರ್ಗಕ್ಕಿಂತಲೂ ಮಿಗಿಲಾದವು ಎಂಬ ಮಾತಿನಂತೆ ಚೆನ್ನಮ್ಮಾಜಿ ನಾಡಿನ ಸ್ವಾತಂತ್ರ್ಯಕ್ಕಾಗಿ ಸರ್ವತ್ಯಾಗಕ್ಕೂ ಸಿದ್ಧಳಾದದ್ದು ಅಭಿಮಾನದ ಸಂಗತಿಯಾಗಿದೆ.

ಭಾರತ ಸ್ವತಂತ್ರ್ಯ ಸಂಗ್ರಾಮಕ್ಕೆ ಅರ್ಥಪೂರ್ಣ ಮುನ್ನುಡಿ ಬರೆದಿರುವ ವೀರರಾಣ ಕಿತ್ತೂರು ಚೆನ್ನಮ್ಮಾಜಿ ನಾಡವರ ಸ್ವಾತಂತ್ರ್ಯದ ಬೆಳಕಾಗಿ, ದೇಶಕ್ಕೆ ಮಾದರಿಯಾಗಿದ್ದಾರೆ.
ಗಂಡನ ಕಳಕೊಂಡ ಬೆಂಡಾಗಿ
ಚೆನ್ನಮ್ಮನ ಪಾದಕ ಬಿದ್ದ ಸೈನೆಲ್ಲ
ಗಂಡಾಗಿ ರಣಕ ಇಳಿದಾಳು ನಂಡಾನ್ನ
ಜಯ ಜಯಕಾರ ಅಂದಾರು – ಹೊಂದ್ಯಾರು
ಪುಂಡ ಬಂಡಾಯ ಹಿಂಡಾಕ ||
ಚೆನ್ನಮ್ಮ ದಂಡಿನೊಳಗೆ ಹೋಗತಾಳೋ
ಶರಣೆಂದು ಕತ್ತಿ ಹಿಡಿದಾಳೋ |
ಮಲ್ಲಸರ್ಜ ನಿನ್ನ ಪುಣ್ಯ ಇರಲೆಂದು
ಗಂಡನ ಕತ್ತಿ ಹಿಡಿದಾಳೋ | ಚೆನ್ನವ್ವ
ಸಾಹೇಬನ ಚಂಡ ಚಟ್ಟನೆ ಹೊಡೆದಾಳೋ ||

ಪ್ರಬಲರಾದ ಬ್ರಿಟೀಷರ ದುಷ್ಟ ಶಕ್ತಿಯೊಂದಿಗೆ ಪ್ರಾಣದ ಹಂಗಿಲ್ಲದೇ ಹೋರಾಟಕ್ಕೆ ಇಳಿದು ಮೊದಲ ಹಂತದಲ್ಲಿ ಜಯಶಾಲಿಯಾದ ರಾಣಿ ಚೆನ್ನಮ್ಮಾಜಿಯ ಧೈರ್ಯ ಸಾಹಸಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದ ಸಂಗತಿಗಳಲ್ಲಿ ಪ್ರಮುಖವಾಗಿದೆ.

ರಾಣಿ ಚೆನ್ನಮ್ಮಾಜಿಯು ಎದುರಿಸಿದ ರಾಜಕೀಯ ಬಿಕ್ಕಟ್ಟು ಕ್ಷಾತ್ರತೇಜಕ್ಕೆ ಸವಾಲಿನದಾಗಿತ್ತು. ಇಂಥ ಸವಾಲನ್ನು ಸ್ವೀಕರಿಸಿದ ರಾಣಿ ಚೆನ್ನಮ್ಮಾಜಿಯು ಕಿತ್ತೂರಿನ ಪ್ರಜೆ ಮತ್ತು ಸೈನಿಕ ಬಲದೊಳಗೆ ಅಪಾರ ನಂಬಿಕೆಯನ್ನಿಟ್ಟುಕೊಂಡು ಹೋರಾಡಿ ಯಶಸ್ಸು ಸಾಧಿಸಿದ್ದು, ಧೀರ ಇತಿಹಾಸದಲ್ಲಿ ಮರೆಯಲಾಗದ ಸಂಗತಿಯಾಗಿದೆ. ಕಿತ್ತೂರು ಚೆನ್ನಮ್ಮಾಜಿಗೆ ಬೆಂಬಲವಾಗಿ ನಿಂತ ಕಿತ್ತೂರಿನ ಬಂಟರ ತಂಡವು, ಸ್ವಾಭಿಮಾನಕ್ಕೆ ಬೆಳಕಾಗಿ ಮಾದರಿಯಾಗಿದೆ.

ಭಾರತದ ಪ್ರಬಲ ಸಂಸ್ಥಾನಗಳು ಬ್ರಿಟೀಷ ಅಧಿಪತ್ಯವನ್ನು ಒಪ್ಪಿಕೊಂಡು ತೆಪ್ಪಗಿದ್ದ ಕಾಲದಲ್ಲಿ ಕಿತ್ತೂರಿನಂತಹ ಸಣ್ಣ ಸಂಸ್ಥಾನವು ಬಂಡಾಯ ಹೂಡಿದ್ದು ಮತ್ತು ಯುದ್ಧದಲ್ಲಿ ಯಶಸ್ಸು ಕಂಡದ್ದು ರಾಣ ಚೆನ್ನಮ್ಮಾಜಿಯಲ್ಲಿದ್ದ ಸ್ವಾಭಿಮಾನ ಮತ್ತು ನಾಡಪ್ರೇಮವನ್ನು ದೃಢಪಡಿಸುತ್ತದೆ. ಕಿತ್ತೂರಿನ ಜನತೆ ಸ್ವಾತಂತ್ರ್ಯದ ಮಹತ್ವವನ್ನು ಚೆನ್ನಾಗಿ ಅರಿತಿದ್ದರಿಂದಲೇ ಅವರು ಹೋರಾಟದ ದಾರಿ ತುಳಿಯಲು ಯಾವುದೇ ತರಹದ ಮೀನಾಮೇಷ ಮಾಡದಿರುವುದೇ ಸಾಕ್ಷಿಯಾಗಿದೆ.
ಕಪ್ಪ ಕಾಣಿಕೆ ಬೇಡಾಕ ಬಂದೀರಿ
ನಮ್ಮ ವಂಶಕ್ಕೆ ಹುಟ್ಟಿರೇನು?
ಹಣ ಕೊಟ್ಟ ನಿಮ್ಮ ಸಂತೈಸಲಾಕ
ಬೆನ್ನಿಗೆ ಬಿದ್ದ ಅಣ್ಣತಮ್ಮರೇನು?
ಹಿಂದುಸ್ತಾನವ ಬಿಟ್ಟು ಎದ್ದೇಳಿ
ಇಲದಿದ್ರ ಜೀವಂತ ಹಿಡಿತಂದು ಸುಡುಸುವೆನು.

ಗಂಗಾತನಯ ಕವಿ ಬನಹಟ್ಟಿಯ ಅಪ್ಪಣ್ಣನವರು ದಾಖಲಿಸಿರುವ ಈ ಪದವು ಚೆನ್ನಮ್ಮಾಜಿಯ ರಾಜ ತಾಂತ್ರಿಕತೆಯ ನೈಪುಣ್ಯತೆ ಮತ್ತು ಮುತ್ಸದಿತನವನ್ನು ಬಿಂಬಿಸುತ್ತದೆ. ಬ್ರಿಟೀಷರೇ ಹಿಂದುಸ್ತಾನ ಬಿಟ್ಟು ಎದ್ದೇಳಿ ಎಂಬ ಈ ಕವಿಯ ಆಶಯವು ಅಂದಿನ ಕಿತ್ತೂರಿನ ಸರ್ವ ಸಾಮಾನ್ಯರ ಆಶಯವಾಗಿತ್ತು ಎಂಬುದು ಗಮನಾರ್ಹ ಸಂಗತಿ. ಕಿತ್ತೂರು ಸಂಸ್ಥಾನದ ದೊರೆ ಮಲ್ಲಸರ್ಜನ ಸಾವಿನ ನಂತರ ಪ್ರಚಲಿತಕ್ಕೆ ಬಂದ ವಿದ್ಯಮಾನಗಳಲ್ಲಿ ಕಿತ್ತೂರು ಸಂಸ್ಥಾನದ ರಾಷ್ಟ್ರದ್ರೋಹಿಗಳ ಪಾತ್ರವು ಪ್ರಮುಖವಾಗಿದೆ. ಸೇಡಿನ ಮತ್ತು ದುರಾಸೆಯ ಬೆನ್ನು ಹತ್ತಿದ ಮಲ್ಲಪ್ಪಶೆಟ್ಟಿಯವರಂತಹರಿಂದಲೇ ಕಿತ್ತೂರ ನಾಡು ಗುಲಾಮಗಿರಿಗೆ ಮತ್ತು ದಬ್ಬಾಳಿಕೆಗೆ ಸಿಲುಕಿಕೊಂಡಿತ್ತೆಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಸಂಸ್ಥಾನದ ಒಳ ಆಡಳಿತದಲ್ಲಿ ಇದ್ದ ಸ್ವಾರ್ಥಿಗಳು, ದತ್ತಕ ಪ್ರಕರಣವನ್ನು ಮುಂದಿಟ್ಟುಕೊಂಡು ಲಾಭ ಪಡೆಯಲು ಮುಂದಾದರು. ಇದಲ್ಲದೆ ಕಿತ್ತೂರಿನ ಸೈನಿಕರ ಯುದ್ಧ ನೈಪುಣ್ಯತೆಯನ್ನು ವಿಫಲಗೊಳಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದು ಉಂಡ ಮನೆಗೆ ದ್ರೋಹ ಬಗೆಯುವ ಹೇಯ ಕೃತ್ಯಕ್ಕೂ ಇಳಿದದ್ದು ನಾಚಿಕೆ ಪಡುವ ಸಂಗತಿಯಾಗಿದೆ.

ಯಾವುದೇ ನಾಡು ಏಳಿಗೆಯು ಪಥದೊಂದಿಗೆ ತನ್ನ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಬೇಕಾದರೆ ಅಲ್ಲಿಯ ಜನತೆ ರಾಜ್ಯ ಕಾರ್ಯದಲ್ಲಿ ನಿಷ್ಠೆಯನ್ನು ಹೊಂದಿ ಸಾಮರಸ್ಯ ಮತ್ತು ಗೌರವದೊಂದಿಗೆ ಹೋರಾಡುವ ಬದ್ಧತೆಯನ್ನು ಸಹ ಬೆಳೆಸಿಕೊಂಡಿರಬೇಕಾಗುತ್ತದೆ. ಯಾವ ನಾಡಿನಲ್ಲಿ ಬಹು ಸಂಖ್ಯಾತರು ನಾಡಿಗಾಗಿಯೇ ದುಡಿಯಲು ಸನ್ನದ್ದರಾಗಿರುತ್ತಾರೆಯೋ, ಅವರ ಮುಂದೆ ಸತತ ಹೋರಾಟದ ಗುರಿ ಇರುತ್ತದೆ. ಅವರೆಲ್ಲರೂ ತಮ್ಮ ಪ್ರಾಣಕ್ಕಿಂತ ನಾಡಿನ ಹಿತವನ್ನೇ ಪರಮೋಚ್ಚ ಮೌಲ್ಯವನ್ನಾಗಿರಿಸಿಕೊಂಡವರಾಗಿರುತ್ತಾರೆ.

ಕಿತ್ತೂರು ಸಂಸ್ಥಾನದ ಬಹುಪಾಲು ಜನರು, ಸ್ವಾಭಿಮಾನ ಸ್ವಾತಂತ್ರಕ್ಕೆ ಬದ್ಧರಾಗಿದ್ದರಿಂದಲೇ ಸಂಸ್ಥಾನ ಪತನಗೊಂಡು ಬ್ರಿಟೀಷರ ಪಾರುಪತ್ಯ ಚಾಲ್ತಿಗೆ ಬಂದರೂ, ಹೋರಾಟದ ಕಿಚ್ಚು ಆರದಂತೆ ನೋಡಿಕೊಂಡಿದ್ದು ವಿಶೇಷ. ಕಿತ್ತೂರಿನ ಸಾಮಾನ್ಯ ಜನತೆಯು ಬ್ರಿಟೀಷರ ಆಡಳಿತದ ನಿರ್ದೇಶನಗಳನ್ನು ಪಾಲಿಸದೇ ಕಿತ್ತೂರು ಸಂಸ್ಥಾನಕ್ಕೆ ನಿಷ್ಠೆ ಹೊಂದಿ ಬ್ರಿಟೀಷರ ವಿರುದ್ಧ ದಂಗೆ ಎದ್ದುದು ಇತಿಹಾಸವೇ ಆಗಿದೆ.

ಹೀಗಾಗಿ ಕಿತ್ತೂರು ನಾಡಿನ ಜನತೆ ಇಂದಿಗೂ ದೇಶಪ್ರೇಮ ಮತ್ತು ಸ್ವಾತಂತ್ರ್ಯದ ಮೌಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಮತ್ತು ಸ್ವಾಭಿಮಾನಕ್ಕಾಗಿ ಬದುಕುವುದೇ ಪೌರುಷವೆಂದು ನಂಬಿದ ಕಿತ್ತೂರು ನಾಡಿನ ಜನತೆಯ ಸ್ವಾತಂತ್ರ್ಯ ಪ್ರೇಮ ಇಂದಿಗೂ ಅನುಕರಣ ಯವಾಗಿದೆ. ಅದರಂತೆ ರಾಣಿ ಚೆನ್ನಮ್ಮಾಜಿಯ ಅಂದಿನ ಹೋರಾಟವು ಇಂದಿನ ಹಲವು ಅನ್ಯಾಯಗಳಿಂದ ಮುಕ್ತಗೊಳ್ಳುವ ಹೋರಾಟಕ್ಕೂ ದಿಕ್ಸೂಚಿಯಾಗಿದೆ.

ಕಿತ್ತೂರು ದೇಶಕ ಬಂದೈತಿ ಕಂಟಕ
ಬನ್ನಿರೋ ಗೆಳೆಯರೇ ಬನ್ನಿರೋ
ಸಂಘಟಿತರಾಗಿ ಸ್ವಾತಂತ್ರ್ಯ ಉಳಿಸಿ
ಗಂಡಾಗಿ ಬಾಳೋಣ ಬನ್ನಿರೋ.
ಸಂಸ್ಥಾನಿಕ ಸತ್ತೆ ಮತ್ತು ವಸಾಹತು ಸತ್ತೆಯ ಸಂಘರ್ಷದೊಳಗೆ ಸ್ವಾಭಿಮಾನವನ್ನು ತಾಳಿದ ಕಿತ್ತೂರು ಜನತೆ ಸ್ವಾತಂತ್ರ್ಯಕ್ಕಾಗಿ ತಮ್ಮ ಆಸ್ತಿ-ಪಾಸ್ತಿ ಎಲ್ಲವನ್ನು ತ್ಯಜಿಸಿ ನಿಂತರು, ಹೀಗಾಗಿ ಅಲ್ಲಿ ಸಂಘರ್ಷದ ಮೌಲ್ಯಗಳು ಅರಳಿದ ಕಾರಣ, ಸಾಮಾನ್ಯರೊಳಗೆ ಸಾಮಾನ್ಯರಾಗಿದ್ದ ರಾಣ ಚನ್ನಮ್ಮಾಜಿಯ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ನಿಂತಿದ್ದು ಯಾರೂ ಮರೆಯಲಾರರು. ರಾಣಿ ಚೆನ್ನಮ್ಮಾಜಿಯ ಮರಣಾನಂತರ ಪ್ರಾಣದ ಹಂಗು ತೊರೆದು ಸ್ವಾತಂತ್ರ್ಯದ ಹೋರಾಟಕ್ಕೆ ಮುಂಚೂಣಿಯಲ್ಲಿ ನಿಂತು ಸ್ವಾತಂತ್ರ್ಯ ಚಳುವಳಿಯನ್ನು ಮುನ್ನೆಡೆಸಿದ್ದು ರಾಯಣ್ಣನ ಸ್ವಾತಂತ್ರ್ಯದ ಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ.

ಕಿತ್ತೂರು ಸಂಸ್ಥಾನವನ್ನು ಮರು ಸ್ಥಾಪಿಸಲು ಪಣತೊಟ್ಟ ರಾಯಣ್ಣನಿಗೆ ಜನತೆ ನೀಡಿದ ಬೆಂಬಲ ಅಭೂತಪೂರ್ವವಾಗಿತ್ತು. ಬಿಚ್ಚುಗತ್ತಿ ಚೆನ್ನಬಸಪ್ಪ, ಅಮಟೂರ ಬಾಳಪ್ಪ, ವಡ್ಡರ ಯಲ್ಲಣ್ಣ, ಜಿಡ್ಡಿಮಣ ಫಕೀರಾ, ಹಸಬಿ ಗಜವೀರರಂತಾ ಕೆಚ್ಚೆದೆಯ ಬಂಟರೊಂದಿಗೆ ಸಾವಿರಾರು ಯೋಧರು ಸ್ವಯಂ ಪ್ರೇರಿತರಾಗಿ ರಾಯಣ್ಣನು ಹೂಡಿದ ಸ್ವಾತಂತ್ರ್ಯ ಹೋರಾಟಕ್ಕೆ ಕೈ ಜೋಡಿಸಿದ್ದು ನಾಡಪ್ರೇಮಕ್ಕೆ ಸಾಕ್ಷಿಯಾಗಿದೆ.

ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಇವರೆಲ್ಲರೂ ರಾಜ ಗದ್ದುಗೆಯ ಆಶೆಯನ್ನಿಟ್ಟುಕೊಂಡವರಲ್ಲ. ಅವರಿಗೆ ಯಾವುದೇ ಅಧಿಕಾರ ಪಡೆದುಕೊಳ್ಳುವ ಆಶೆಯೂ ಇರಲಿಲ್ಲ. ಅವರ ಮುಖ್ಯ ಧ್ಯೇಯವು ರಾಣಿ ಚೆನ್ನಮ್ಮಾಜಿಯ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಹೋರಾಟವನ್ನು ಸಾಫಲ್ಯಗೊಳಿಸಿ ಕಿತ್ತೂರು ಸಂಸ್ಥಾನವನ್ನು ಮರು ಸ್ಥಾಪಿಸಿ, ಚೆನ್ನಮ್ಮಾಜಿ ಸ್ವೀಕರಿಸಿದ ದತ್ತಕ ಪುತ್ರನನ್ನು ರಾಜನನ್ನಾಗಿಸುವ ಉದ್ದೇಶವಾಗಿತ್ತು. ಇದನ್ನು ನೆರವೇರಿಸಲು ಸಂಗೊಳ್ಳಿ ರಾಯಣ್ಣ ರಾಣ ಚೆನ್ನಮ್ಮಾಜಿಗೆ ನೀಡಿದ್ದ ವಚನವು ನಾಡಿನ ಜನತೆಯ ಧೀರತ್ವಕ್ಕೆ ಇನ್ನೊಂದು ಹೆಸರಾಗಿದೆ.
ಗೆದ್ದು ಕಿತ್ತೂರ ಉದ್ದ ಬೀಳುವೆ ತಾಯಿ
ಕದ್ದ ಮಾತಲ್ಲ ನಿಮ್ಮಾಣೆ !
ಕದ್ದ ಮಾತಲ್ಲ ನಿಮ್ಮಾಣೆ ಇರದಿರಕ
ಬಿದ್ದ ಹೋಗುವೆ ರಣದಾಗೋ ||
ಬ್ರಿಟೀಷರ ವಿರುದ್ಧ ನಿರ್ಣಾಯಕ ಯುದ್ಧ ಸಾರಿದ ಸಂಗೊಳ್ಳಿ ರಾಯಣ್ಣ ಮತ್ತು ಅವನ ಸಹಚರ ಬಂಟರು, ನಾಡದ್ರೋಹಿಗಳ ಪಿತೂರಿಗೆ ಒಳಗಾದರು. ಆದರೆ ಅವರ ಬಲಿದಾನವು ವ್ಯರ್ಥವಾಗಲಿಲ್ಲ. ಕಿತ್ತೂರಿನ ಜನತೆಯಲ್ಲಿ ಇವರ ಬಲಿದಾನವು ಸ್ವಾತಂತ್ರ್ಯದ ಕಿಚ್ಚನ್ನು ಪ್ರಖರವಾಗಿಸಲು ಸಹಕಾರಿಯಾಗಿ ನಿಂತಿತು.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದೊಳಗೆ ರಾಣಿ ಚೆನ್ನಮ್ಮಾಜಿಯು ಧೀರೊಕ್ಕ ಶಕ್ತಿಯಾಗಿ ಕಂಗೊಳಿಸಲು ಈ ಹೋರಾಟವು ಬಲ ತಂದಿತು. ಬ್ರಿಟೀಷರ ಬಂಧನದಲ್ಲಿದ್ದರೂ ಕಿತ್ತೂರಿನ ಸಂಸ್ಥಾನದ ಜನತೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕಿಚ್ಚು ಹೊತ್ತಿಸಿದ ರಾಣಿ ಚೆನ್ನಮ್ಮಾಜಿಯ ತ್ಯಾಗ ಮತ್ತು ಬಲಿದಾನ ಅನನ್ಯವಾಗಿ, ಅನುಕರಣ ಯವಾಗಿವೆ. ರಾಣಿ ಚೆನ್ನಮ್ಮಾಜಿ ತನ್ನ ಕೊನೆ ಉಸಿರು ಇರುವವರೆಗೂ ನಾಡಿನ ಬಿಡುಗಡೆಗಾಗಿ ಹಂಬಲಿಸಿದ್ದು, ಇಂದಿಗೂ ಮನನೀಯವಾಗಿದೆ.

ಭರತ ಭೂಮಿಯ ಒಳಗ ಕನ್ನಡದ ನೆಲದೊಳಗ
ಸ್ವಾತಂತ್ರ್ಯದ ಕಿಡಿ ಹೊತ್ತಿತ ಮೊದಲ ಕಿತ್ತೂರದೊಳಗೆ ||ಕೋಲ||
ಜನಪದ ಕವಿಯು ಈ ಪದದೊಳಗೆ ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯ ಸಂಗ್ರಾಮದ ಪ್ರಖರತೆ ಮತ್ತು ಕಿತ್ತೂರು ಪ್ರಜೆಗಳ ಸ್ವಾತಂತ್ರ್ಯ ಪ್ರೇಮವನ್ನು ಎತ್ತಿ ಹಿಡಿದಿದ್ದಾನೆ. ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯ ಹರಣದ ಸಂದರ್ಭದಲ್ಲಿ ಚೆನ್ನಮ್ಮಾಜಿ ಪ್ರಸ್ತುತಗೊಳಿಸಿದ ವೀರಾವೇಶದ ಮಾತುಗಳು ಸ್ವಾತಂತ್ರ್ಯ ಮತ್ತು ಪ್ರಜಾಶಕ್ತಿಯ ಶಕ್ತ ಧ್ವನಿಯಾಗಿ ಇಂದಿಗೂ ಜನಜನಿತಗೊಂಡಿವೆ. ಆ ಮಾತುಗಳು ಇಂತಿವೆ.

“ಎಷ್ಟೋ ಕಾಲದಿಂದ ಕಿತ್ತೂರು ಸ್ವಾಭಿಮಾನದಿಂದ ತಲೆ ಎತ್ತಿ ನಿಂತಿದೆ, ಕಿತ್ತೂರು ಸಣ್ಣ ಸಂಸ್ಥಾನವಾಗಿರಬಹುದು ಅದರೆ ಇಲ್ಲಿನ ಸೈನಿಕರು ಬಾಡಿಗೆ ಸಿಪಾಯಿಗಳಲ್ಲ, ಒಬ್ಬನೇ ಸಿಪಾಯಿ ಬ್ರಿಟೀಷರ ಹತ್ತು ಸೈನಿಕರನ್ನು ಸದೆ ಬಡೆಯುವ ಸಾಮರ್ಥ್ಯ ಹೊಂದಿದ್ದಾನೆ. ಇವರೆಲ್ಲರ ರಕ್ತ ನರನಾಡಿಗಳಲ್ಲಿ ಕಿತ್ತೂರಿನ ಸ್ವಾತಂತ್ರ್ಯದ ಬಗ್ಗೆ ಅಭಿಮಾನ ಉಕ್ಕಿ ಹರಿಯುತ್ತಿದೆ. ಎಂಥ ಕಠಿಣ ಪ್ರಸಂಗ ಬಂದರೂ ನಾವು ಬ್ರಿಟಿಷರಿಗೆ ತಲೆಬಾಗಿ ಗುಲಾಮರಾಗಿ ಬದುಕುವುದಿಲ್ಲ. ಅದಕ್ಕಿಂತಲೂ ಸಾಯುವುದೇ ಮೇಲೆಂದೂ ಕಿತ್ತೂರಿನ ಜನತೆ ಅರಿತುಕೊಂಡಿದ್ದಾರೆ. ಇಂಥ ಧೀರೋಕ್ತ ಉದ್ದೇಶಕ್ಕಾಗಿ ಪ್ರಾಣವನ್ನೇ ಪಣಕಿಟ್ಟ ರಾಣ ಚೆನ್ನಮ್ಮಾಜಿ ಬದುಕು ಮತ್ತು ಹೋರಾಟ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ. ಅಂತೆ ಜನಪದ ಕವಿಯು ಕಿತ್ತೂರು ರಾಣ ಚೆನ್ನಮ್ಮಾಜಿ ಅಮರಳಾಗಿ ಇಂದಿಗೂ ಕ್ಷಾತ್ರ ತೇಜಕ್ಕೆ ಮಾದರಿಯಾಗಿದ್ದಾಳೆಂದು ಹಾಡಿ ಹರಿಸಿದ್ದು ಹೀಗಿದೆ.
ಕನ್ನಡ ವೀರನಾರಿಯರ
ಅಮರ ಕಥಾಸಾರ
ಹುರುಪಿನಲಿ ಹೇಳ್ಯಾರ
ಮುಳುಗಲಾರದವರ ಹೆಸರ
ಚೆನ್ನಮ್ಮಾ ವೀರ ಕಿತ್ತೂರ
ರಾಣ ಜಗದ ಜಾಹೀರಾ
ಕೀರ್ತಿ ಝೇಂಕಾರ
ಚೆನ್ನಮ್ಮ ರಾಣಿ ಅವಳೆ ಅಮರ
ವೀರರಾಣಿ ಚೆನ್ನಮ್ಮಾಜಿಯು ಬ್ರಿಟೀಷರ ವಿರುದ್ಧ ಹೂಡಿದ ಸಮರವು ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ. ಸ್ವಾಭಿಮಾನಕ್ಕಾಗಿಯೇ ಬದುಕುವುದೆಂದರೆ ಸ್ವಾತಂತ್ರ್ಯವನ್ನು ಪ್ರಾಣಕ್ಕಿಂತಲೂ ಮಿಗಿಲೆಂದು ನಡೆದು ತೋರಿಸುವುದಾಗಿದೆ. ಸ್ವಾಭಿಮಾನ-ಸ್ವಾತಂತ್ರ್ಯವನ್ನೇ ಬದುಕಿನ ಸಾರ್ಥಕತೆ ಎಂದು ಹೋರಾಡಿದ ರಾಣಿ ಚೆನ್ನಮ್ಮಾಜಿಯ ಆಚಾರ ವಿಚಾರಗಳು ಸರ್ವಕಾಲಕ್ಕೂ ಮಾನ್ಯವೇ ಆಗಿವೆ ಹಾಗೂ ಇಂದಿನ ಸರ್ವ ಸ್ವಾತಂತ್ರ್ಯದ ಹೋರಾಟಕ್ಕೂ ದಿಕ್ಸೂಚಿಯಾಗಿದೆ.

ಇಂದು ದೇಶವು ತನ್ನ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಥಮ ಸ್ವಾತಂತ್ರ್ಯ ಸಮರದ ಕಹಳೆಯನ್ನು ನಿನಾದಿಸಿದ ವೀರ ರಾಣಿ ಕಿತ್ತೂರು ಚೆನ್ನಮ್ಮಾಜಿಯ ಅಸದಳವಾದ ನಾಡಪ್ರೇಮ – ಭಕ್ತಿ, ಸರ್ವತ್ರವೂ ಪಸರಿಸಬೇಕಿದೆ. ದೇಶದ ಐಕ್ಯತೆಯೊಂದಿಗೆ ಸರ್ವ ಜನಾಂಗವೂ ಒಂದಾಗಿ- ಚೆಂದಾಗಿ, ಕೂಡಿ ಬಾಳುವ ಪಣಕ್ಕೆ ಹೆಗಲಿಗೆ ಹೆಗಲು ಕೊಡಬೇಕಿದೆ.

ದೇಶದ ಜನರು ನಾವೆಲ್ಲರೂ ಭಾರತೀಯರು, ಭಾರತದ ಅಸ್ಮಿಯತೆಯೇ ಮತ್ತು ಸ್ವಾತಂತ್ರ್ಯ ನಮ್ಮೆಲ್ಲರ ಬದುಕಿನ ಜೀವಾಳವೆಂಬ ಅಖಂಡತೆಯ ಧ್ವನಿಗೆ ಸ್ಪಂದಿಸುವುದೇ ಸ್ವಾತಂತ್ರ್ಯ ಅಮೃತದ ಸಂದೇಶದೊಂದಿಗೆ ರಾಣಿ ಚೆನ್ನಮ್ಮಾಜಿಯ ರಾಷ್ಟಪ್ರೇಮಕ್ಕೂ ಮಾದರಿಯಾಗಬೇಕಾಗಿದೆ.

https://pragati.taskdun.com/latest/channamma-kittur-utsav-cm-basavaraja-bommai-inaugarate-state-level-festival-on-23/

ಚನ್ನಮ್ಮನ ಕಿತ್ತೂರು ಉತ್ಸವ : ರಾಜ್ಯಮಟ್ಟದ ಉತ್ಸವಕ್ಕೆ ಸಿಎಂ 

ಬಸವರಾಜ ಬೊಮ್ಮಾಯಿ ಚಾಲನೆ

ಗಂಧದ ಗುಡಿ ಚಲನಚಿತ್ರಕ್ಕೆ ತೆರಿಗೆ ವಿನಾಯ್ತಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

https://pragati.taskdun.com/latest/tax-exemption-for-gandhad-gudi-movie-chief-minister-basavaraja-bommai/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button