Kannada NewsKarnataka News

ಕೆಎಲ್‌ಇ ಮಧುಮೇಹ ಕೇಂದ್ರಕ್ಕೆ ಅತ್ಯುತ್ತಮ ಕೇಂದ್ರ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ಚಿಕ್ಕಮಕ್ಕಳ ಮಧುಮೇಹ ಚಿಕಿತ್ಸೆ ಹಾಗೂ ನಿಯಂತ್ರಣದಲ್ಲಿ ನಿರಂತರವಾಗಿ ಗುಣಮಟ್ಟ ಕಾಯ್ದುಕೊಂಡು ಮಕ್ಕಳ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸುತ್ತಿರುವುದಕ್ಕೆ ಜರ್ಮನಿಯ ಸ್ವೀಟ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ವಿಶ್ವದ ಮಾನ್ಯತೆ ಪಡೆದಿದೆ.

ವಿಶ್ವದ ೫೯ ದೇಶಗಳ ೧೫೨ ಕೇಂದ್ರಗಳಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಮಧುಮೇಹ ಕೇಂದ್ರವು ಬೆಸ್ಟ್ ಇಂಪ್ರುವಮೆಂಟ್ ಪ್ರೈಜ್ ಎಂಬ ಪ್ರಥಮ ಬಹುಮಾನ ಪಡೆದಿದ್ದು, ದ್ವಿತೀಯವಾಗಿ ಕ್ಯಾಲಿಪೋರ್ನಿಯಾದ ಸ್ಟ್ಯಾನಫೋರ್ಡ ವಿಶ್ವವಿದ್ಯಾಲಯ ಪ್ರಶಸ್ತಿಗೆ ಭಾಜನವಾಗಿದೆ.

ಅಂತರಾಷ್ಟ್ರೀಯ ಚಿಕ್ಕಮಕ್ಕಳ ಮತ್ತು ತರುಣರ ಮಧುಮೇಹ ಸಂಸ್ಥೆ, ಯುರೋಪಿನ ಅಂತರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನ ಹಾಗೂ ಚಿಕ್ಕಮಕ್ಕಳ ಟೈಪ್ -೧ ಮಧುಮೇಹ ನಿಯಂತ್ರಣದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಸ್ವೀಟ ಎಂಬ ಸಂಸ್ಥೆಯು ಕೊಡಮಾಡುವ ಚಿಕ್ಕಮಕ್ಕಳ ಮಧುಮೇಹ ಅತ್ಯುತ್ತಮ ಚಿಕಿತ್ಸಾ ಕೇಂದ್ರ ಎಂದು ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಕೊರೊನಾ ಮಹಾಮಾರಿಯ ಪ್ರಯುಕ್ತ ದಿ. ೯ ಅಕ್ಟೋಬರ ೨೦೨೦ರಂದು ಆನಲೈನ್ ಮೂಲಕ ನಡೆದ ಸಮಾರಂದಲ್ಲಿ ಪ್ರಶಸ್ತಿಯನ್ನು ಕೊಡಮಾಡಲಾಯಿತು. ಮಧುಮೇಹ ಕೇಂದ್ರದ ಚಿಕ್ಕಮಕ್ಕಳ ಮಧುಮೇಹ ತಜ್ಞವೈದ್ಯರಾದ ಡಾ. ಸುಜಾತಾ ಜಾಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಉಪಸ್ಥಿತರಿದ್ದರು.

ಚಿಕ್ಕಮಕ್ಕಳ ಮಧುಮೇಹ ಕೇಂದ್ರವು ಮಕ್ಕಳ ದಾಖಲೆಗಳ ಸರಿಯಾದ ನಿರ್ವಹಣೆ, ಗುಣಮಟ್ಟ ಕಾಯ್ದುಕೊಳ್ಳುವಿಕೆ, ಚಿಕ್ಕಮಕ್ಕಳ ಮಧುಮೇಹ ತಜ್ಞವೈದ್ಯರು, ನರ್ಸಿಂಗ ಸಿಬ್ಬಂದಿ, ಡೈಟಿಸಿಯನ್, ಆಪ್ತಸಮಾಲೋಚಕರು, ಸಮಾಜ ಸೇವಕರನ್ನೋಳಗೊಂಡ ಕೇಂದ್ರ ರಾಷ್ಟ್ರೀಯ ಮಟ್ಟದ ಮಧುಮೇಹ ಜಾಗೃತಿ ಶಿಕ್ಷಣವನ್ನು ನೀಡುವಲ್ಲಿ ತಲ್ಲೀನವಾಗಿ. ಇದನ್ನೆಲ್ಲ ಗಣನೆಗೆ ತೆಗೆದುಕೊಂಡು ಸ್ವೀಟ್ ಪ್ರಶಸ್ತಿಯನ್ನು ನೀಡಲಾಗಿದೆ.

ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಮಧುಮೇಹ ಪೀಡಿತ ಮಕ್ಕಳ ಆರೈಕೆಯಲ್ಲಿ ಅತ್ಯಂತ ನಿಗಾ ವಹಿಸುತ್ತಿರುವದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಾವು ಗುರುತಿಸಿಕೊಂಡಿದ್ದೇವೆ. ಮಧುಮೇಹವು ಮಕ್ಕಳಲ್ಲಿ ಸವಾಲಾಗಿ ಪರಿಣಮಿಸಿದ್ದು, ಅದನ್ನು ನಾವು ತಡೆಗಟ್ಟಲು ಕಾರ‍್ಯಮಗ್ನರಾಗಿದ್ದೇವೆ. ನಮ್ಮ ಮಧುಮೇಹ ಕೇಂದ್ರವು ಅತ್ಯುತ್ತಮವಾಗಿ ಕಾರ‍್ಯನಿರ್ವಹಿಸುತ್ತ ಅದರ ಕುರಿತು ಶಿಕ್ಷಣ ನೀಡುತ್ತಿರುವದು ಅತ್ಯಂತ ಶ್ಲಾಘನೀಯ.

ಮಧುಮೇಹ ಕೇಂದ್ರವು ಪ್ರಶಸ್ತಿಯನ್ನು ಪಡೆದಿರುವದಕ್ಕೆ ಕಾಹೇರನ ಕುಲಪತಿ ಡಾ. ವಿವೇಕ ಸಾವೋಜಿ, ಕುಲಸಚಿವರಾದ ಡಾ. ವಿ ಎ ಕೋಠಿವಾಲೆ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಕೇಂದ್ರದ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button