Kannada NewsKarnataka NewsLatest

*ನಾಳೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಸಿಎಂ ಭೇಟಿ ಹಿನ್ನೆಲೆ: ಭಕ್ತರಿಗೆ ಮಹತ್ವದ ಸೂಚನೆ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡು ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಜೂನ್ 12ರಂದು ಶುಕ್ರವಾರ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ದೇವರ ದರ್ಶನ ಸಮಯದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಸಿಎಂ ಜೋಸೆಫ್ ವಿಜಯ್ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರು ದೇವಸ್ಥಾನದ ಸುತ್ತಮುತ್ತ ಹಾಗೂ ಮುಖ್ಯಮಂತ್ರಿಗಳು ಸಂಚರಿಸುವ ಮಾರ್ಗದುದ್ದಕ್ಕೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಸಾರ್ವಜನಿಕರು ಹಾಗೂ ದೂರದೂರುಗಳಿಂದ ಬರುವ ಭಕ್ತಾದಿಗಳಿಗೆ ದರ್ಶನದ ವೇಳೆ ಅನಾನುಕೂಲವಾಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆಯು ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ.

Home add -Advt

ಜೋಸೆಫ್ ವಿಜಯ್ ಅವರು ಕೇವಲ ದೇವಿಯ ದರ್ಶನ ಮತ್ತು ವಿಶೇಷ ಪೂಜೆಗಾಗಿ ಮಾತ್ರ ಕೊಲ್ಲೂರಿಗೆ ಆಗಮಿಸುತ್ತಿದ್ದು, ಪೂಜೆಯ ಬಳಿಕ ನಾಳೆಯೇ ತಮಿಳುನಾಡಿಗೆ ಹಿಂದಿರುಗಲಿದ್ದಾರೆ. ವಿವಿಐಪಿ ಭೇಟಿ ಮತ್ತು ವಿಶೇಷ ಭದ್ರತಾ ಹಿತದೃಷ್ಟಿಯಿಂದ ಜೂನ್ 12ರ ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಭಕ್ತಾದಿಗಳು ದೇವಸ್ಥಾನಕ್ಕೆ ಬರುವುದನ್ನು ಮತ್ತು ದರ್ಶನ ಪಡೆಯುವುದನ್ನು ತಪ್ಪಿಸುವುದು ಸೂಕ್ತ ಎಂದು ತಿಳಿಸಲಾಗಿದೆ.

ಭಕ್ತಾದಿಗಳಿಗೆ ಯಾವುದೇ ಸಮಯದಲ್ಲಿ ದೇವಸ್ಥಾನ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲ. ಆದರೆ, ಸಿಎಂ ಭೇಟಿಯ ಭದ್ರತಾ ತಪಾಸಣೆಗಳ ಕಾರಣದಿಂದಾಗಿ ಸಾಮಾನ್ಯ ದರ್ಶನದ ವೇಳೆ ಭಕ್ತರಿಗೆ ಅನಾನುಕೂಲ ಹಾಗೂ ವಿಳಂಬವಾಗಬಹುದು.

ಮುಖ್ಯಮಂತ್ರಿಗಳ ವಾಹನ ಸಂಚಾರದ ಕಾನ್ವಾಯ್ ಸಾಗುವ ಹಾದಿ, ದೇವಸ್ಥಾನದ ಮುಖ್ಯ ಪ್ರವೇಶ ದ್ವಾರಗಳು ಹಾಗೂ ಮೂಕಾಂಬಿಕಾ ದೇವಸ್ಥಾನದ ಒಳಗಿನ ಆವರಣದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಗುಂಪು ಸೇರುವುದು ಅಥವಾ ಜನಸಂದಣಿ ಉಂಟುಮಾಡುವುದನ್ನು ನಿಷೇಧಿಸಲಾಗಿದೆ.

ಹೈ-ಪ್ರೊಫೈಲ್ ಬಂದೋಬಸ್ತ್ ಇರುವುದರಿಂದ ಕೊಲ್ಲೂರಿಗೆ ಬರುವ ಸಾರ್ವಜನಿಕರು ಹಾಗೂ ಭಕ್ತಾದಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಮತ್ತು ಅನಾನುಕೂಲಗಳನ್ನು ತಪ್ಪಿಸಲು ತಮ್ಮ ದರ್ಶನದ ಸಮಯವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ತಿಳಿಸಿದೆ.


Related Articles

Back to top button