Kannada NewsKarnataka NewsLatest

*ಪ್ರವಾಸಿಗರೇ ಗಮನಿಸಿ: ಈ ತಾಣಗಳಲ್ಲಿ ಹೈ ಅಲರ್ಟ್ ಘೋಷಣೆ; ಜಿಲ್ಲಾಡಳಿತದಿಂದ ಮಹತ್ವದ ಸೂಚನೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಅದರಲ್ಲಿಯೂ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಅಬ್ಬರ ಜೋರಾಗಿದೆ. ಸಮುದ್ರದಲ್ಲಿ ಬೃಹತ್ ಅಲೆಗಳು ಮೇಲೇಳುತ್ತಿದ್ದು, ಬಿರುಗಾಳಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳ ಪ್ರವಾಸಿ ತಾಣಗಳ್ಲಲಿ ಹೈ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಎಲ್ಲಾ ಪ್ರಮುಖ ಬೀಚ್​ಗಳಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಹೈಅಲರ್ಟ್ ಘೋಷಿಸಿದ್ದು, ಕಡಲ ತೀರದ ಮನರಂಜನಾ ಚಟುವಟಿಕೆಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧ ವಿಧಿಸಿದೆ.

Home add -Advt

ಮಂಗಳೂರಿನ ಪ್ರಸಿದ್ಧ ಪಣಂಬೂರು ಬೀಚ್ , ತಣ್ಣೀರುಬಾವಿ ಹಾಗೂ ಸೋಮೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲಾ ಬೀಚ್‌ಗಳಲ್ಲಿ ಜನಪ್ರಿಯ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಇನ್ನು ಮುಂದೆ ಮುಂಗಾರು ಮುಗಿಯುವವರೆಗೆ ಪ್ರವಾಸಿಗರ ಅತ್ಯಂತ ಆಕರ್ಷಣೆಯಾಗಿದ್ದ ತೇಲುವ ಸೇತುವೆ , ಬೋಟಿಂಗ್, ಜೆಟ್ ಸ್ಕೀ (Jet Ski) ಹಾಗೂ ಪ್ಯಾರಾ ಸೈಲಿಂಗ್ ಸೇರಿದಂತೆ ಯಾವುದೇ ಸಾಹಸ ಹಾಗೂ ಮನರಂಜನಾ ಕ್ರೀಡೆಗಳಿಗೆ ಅವಕಾಶ ಇರುವುದಿಲ್ಲ. ಪ್ರವಾಸಿಗರ ಜೀವಕ್ಕೆ ಅಪಾಯ ಎದುರಾಗಬಾರದು ಎನ್ನುವ ಕಾರಣಕ್ಕೆ ಈ ಕಠಿಣ ನಿಯಮವನ್ನು ಜಾರಿಗೊಳಿಸಲಾಗಿದೆ.

ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಪ್ರವಾಸಿಗರು ಯಾವುದೇ ಕಾರಣಕ್ಕೂ ನೀರಿಗೆ ಇಳಿಯದಂತೆ ತಡೆಯಲು ದಡದಲ್ಲೇ ಸುರಕ್ಷತಾ ಹಗ್ಗಗಳನ್ನು ಕಟ್ಟಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ನಿಯಮ ಉಲ್ಲಂಘಿಸಿ ಯಾರಾದರೂ ಸಮುದ್ರಕ್ಕೆ ಇಳಿಯಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಅನಾಹುತಗಳನ್ನು ತಪ್ಪಿಸಲು ಲೈಫ್ ಗಾರ್ಡ್ ಸಿಬ್ಬಂದಿ, ಕರಾವಳಿ ಕಾವಲುಪಡೆ ಹಾಗೂ ಸ್ಥಳೀಯ ಪೊಲೀಸರು ಬೀಚ್‌ಗಳಲ್ಲಿ ದಿನದ 24 ಗಂಟೆಯೂ ಹದ್ದಿನ ಕಣ್ಣಿಟ್ಟು ನಿರಂತರ ಕಾವಲು ಕಾಯುತ್ತಿದ್ದಾರೆ.

ಬೀಚ್ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರದೇ ಇದ್ದರೂ, ಕಡಲಿಗೆ ಇಳಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕರಾವಳಿಗೆ ಬರುವ ಪ್ರವಾಸಿಗರು ಕೇವಲ ದಡದ ಸುರಕ್ಷಿತ ಜಾಗದಲ್ಲಿ ಕುಳಿತು ಮುಂಗಾರು ಮಳೆಯ ಅಬ್ಬರದ ಅಲೆಗಳನ್ನು ವೀಕ್ಷಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಇಲಾಖೆಯ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಅಧಿಕಾರಿಗಳೊಂದಿಗೆ ಸಹಕರಿಸಲು ಕೋರಲಾಗಿದೆ.

Related Articles

Back to top button