Karnataka NewsLatestPolitics

*ಮನ್ರೇಗಾ ವೇತನ ಅನುಪಾತ ಕನಿಷ್ಠ 80:20ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸಚಿವ ಈಶ್ವರ ಖಂಡ್ರೆ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಒದಗಿಸುವ ಮನ್ರೇಗಾ (ವಿಬಿ ಜಿ ರಾಮ್ ಜಿ) ವೇತನ ಅನುಪಾತವನ್ನು ಕನಿಷ್ಠ 80:20ಕ್ಕಾದರೂ ಹೆಚ್ಚಿಸುವಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ್ದ ಸುದ್ದಿಗಾರರೊಂದಿಗೆ ಅವರು, ಯುಪಿಎ ಸರ್ಕಾರ 2006ರಲ್ಲಿ ಜಾರಿ ಮಾಡಿದ ಮನ್ರೇಗಾ ಅಡಿಯಲ್ಲಿ ಒದಗಿಸಲಾಗುವ ಉದ್ಯೋಗಕ್ಕೆ ನೀಡುವ ಕೂಲಿಯ 90ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು, ರಾಜ್ಯ ಸರ್ಕಾರಗಳು ಕೇವಲ 10ರಷ್ಟು ಭರಿಸುತ್ತಿದ್ದವು. ಆದರೆ ಈಗ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ಜುಲೈ 1ರಿಂದ ಜಾರಿ ಮಾಡುತ್ತಿರುವ ವಿಬಿ ಜಿ ರಾಮ್ ಜಿಯಲ್ಲಿ ಕೇಂದ್ರ ಸರ್ಕಾರ 60:40 ಅನುಪಾತದಡಿ ಹಣ ಒದಗಿಸುತ್ತಿದ್ದು ಇದು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಹೊರೆಯಾಗುತ್ತದೆ. ಹೀಗಾಗಿ ಈ ಅನುಪಾತವನ್ನು ಹಿಂದೆ ಇದ್ದಂತೆ 90:10ಮುಂದುವರಿಸ ಬೇಕು ಇಲ್ಲವೆ ಕನಿಷ್ಠ 80:20ಕ್ಕಾದರೂ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

Home add -Advt

ಇದರ ಜೊತೆಗೆ ವರ್ಷದಲ್ಲಿ 60 ದಿನಗಳ ಕಾಲ ಉದ್ಯೋಗ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿಲುವು ಸರಿಯೂ ಅಲ್ಲ, ಸಮರ್ಥನೀಯವೂ ಅಲ್ಲ. ಆಧುನಿಕ ಯುಗದಲ್ಲಿ ಕೃಷಿ ಕಾರ್ಯಕ್ಕೆ ಯಂತ್ರೋಪಕರಣಗಳು ಬಂದಿದ್ದು, ಬಹುತೇಕ ಗ್ರಾಮೀಣ ಭೂರಹಿತ ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿಲ್ಲ, ಹೀಗಾಗಿ ಅವರಿಗೆ ಆಸರೆಯಾಗಿರುವ ಉದ್ಯೋಗ ಖಾತ್ರಿಗೆ ರಜೆ ನೀಡುವ ಪ್ರಸ್ತಾಪ ಕೈಬಿಡಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದರು.

ಬರುವ 28 ಮತ್ತು 29ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅಧ್ಯಕ್ಷತೆಯಲ್ಲಿ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ತಾವು ವೇತನ ಅನುಪಾತ ಹೆಚ್ಚಿಸುವಂತೆ ಹಾಗೂ 60 ದಿನಗಳ ಬಿಡುವು ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸುವುದಾಗಿ ತಿಳಿಸಿದರು.

ಮನ್ರೇಗಾದ ನೂತನ ಸ್ವರೂಪವಾದ ವಿಬಿ ಜಿ ರಾಮ್ ಜಿ ಅಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಇಂತಹ ಕೆಲಸ ಮಾತ್ರ ಮಾಡಬೇಕು ಎಂದು ನಿರ್ಬಂಧ ವಿಧಿಸುವುದು ಸರಿಯಲ್ಲ. ರಾಜ್ಯಗಳಿಗೆ ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಬೇಕು ಎಂದು ಪ್ರತಿಪಾದಿಸಿದರು.

ಜೂನ್ 9ರಂದು ಕೇಂದ್ರ ಸಚಿವರೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ತಾವು ರಾಜ್ಯ ಸರ್ಕಾರ ಕನಿಷ್ಠ ವೇತನ ಹೆಚ್ಚಳ ಮಾಡುತ್ತಿದ್ದು, ಇದಕ್ಕೆ ಅನುಗುಣವಾಗಿ ವಿಬಿ ಜೀ ರಾಮ್ ಜೀ ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿದ್ದು, ಕೇಂದ್ರ ಸಚಿವರು ಇದಕ್ಕಾಗಿಯೇ ಒಂದು ವೇತನ ಆಯೋಗ ರಚಿಸಲಾಗಿದ್ದು, ಶೀಘ್ರ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

Related Articles

Back to top button