*ಬಹುಭಾಷಾ ಕವಿಗೋಷ್ಠಿಯಲ್ಲಿ ಕಾವ್ಯ ವಾಚಿಸಿದ ರವಿ ಕೊಟಾರಗಸ್ತಿ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ನವದೆಹಲಿಯಲ್ಲಿ ಆಯೋಜಿಸಿದ್ದ ಸಾಹಿತ್ಯ ರಂಗದಲ್ಲೇ ಪ್ರತಿಷ್ಠಿತ ಕಾರ್ಯಕ್ರಮವಾದ ‘ಏಷ್ಯಾದ ಅತಿದೊಡ್ಡ ಸಾಹಿತ್ಯೋತ್ಸವ’ದಲ್ಲಿ ಬೆಳಗಾವಿಯ ಹಿರಿಯ ಸಾಹಿತಿ, ಕವಿ ಮತ್ತು ನಿವೃತ್ತ ಅಧಿಕಾರಿ ರವಿ ಕೊಟಾರಗಸ್ತಿ ಪಾಲ್ಗೊಂಡರು.
ಮಾರ್ಚ್ 8ರಂದು ಖ್ಯಾತ ಹಿಂದಿ ಸಾಹಿತಿ ವಿನೋದ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ‘ಎಸೆಂಬಲ್ ಆಫ್ ಇಮೇಜ್ ರಿದಮ್ ಆ್ಯಂಡ್ ಬ್ಯೂಟಿ: ಮಲ್ಟಿಲಿಂಗ್ವಲ್ ಪೋಯಿಟ್ರಿ ರೀಡಿಂಗ್ಸ್’ ವಿಷಯ ಕುರಿತ ರಾಷ್ಟ್ರಮಟ್ಟದ ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡ ವಿಷಯದಲ್ಲಿ ಎರಡು ವಿಶಿಷ್ಟ ಕಥಾಹಂದರವುಳ್ಳ ಕಾವ್ಯ ವಾಚಿಸಿದರು.
ಮಕ್ಕಳ ಲಾಲನೆ-ಪೋಷಣೆಯಲ್ಲಿ ಹೆತ್ತವರ ಪಾತ್ರವೇನು? ಪ್ರಸ್ತುತ ಕಾಲಘಟ್ಟದಲ್ಲಿ ಹಳಿ ತಪ್ಪುತ್ತಿರುವ ಯುವಜನಾಂಗವನ್ನು ಸನ್ಮಾರ್ಗಕ್ಕೆ ತರುವುದು ಹೇಗೆ? ಹೆತ್ತವರು-ಮಕ್ಕಳ ನಡುವಿನ ಭಿನ್ನಮತ ಸರಿಪಡಿಸುವ ಬಗೆ ಮೇಲೆ ಬೆಳಕು ಚೆಲ್ಲಿದರು. ಕಾಡಿನಲ್ಲಿ ಬೇಟೆಯಾಡುತ್ತ ಜೀವನ ಸಾಗಿಸುತ್ತಿದ್ದ ವಾಲ್ಮೀಕಿ ಪಾಪ-ಪುಣ್ಯಗಳ ತುಲನಾತ್ಮಕ ನಿರ್ಣಯ ಕೈಗೊಂಡು, ಆಧ್ಯಾತ್ಮಿಕ ತಪಸ್ಸಿನ ಮೂಲಕ ಆದಿಕವಿಯಾಗಿ ರೂಪುಗೊಂಡ ಬಗೆ, ಅವರು ರಚಿಸಿದ ರಾಮಾಯಾಣ ಎಂಬ ಮಹಾಕಾವ್ಯದ ಬಗ್ಗೆ ವಿವರಿಸಿದರು.
ರವಿ ಅವರೊಂದಿಗೆ ಡೊಂಗ್ರಿ, ಗುಜರಾತಿ, ಹಿಂದಿ, ಕಾಶ್ಮೀರಿ, ಓಡಿಯಾ, ಸಾಂಸ್ಕೃತಿಕ ಮತ್ತು ತಮಿಳು ಭಾಷೆಗಳಲ್ಲೂ ಕವಿಗಳು ಕಾವ್ಯ ವಾಚಿಸಿದರು. ‘ನಾನು ಈವರೆಗೆ ದಸರಾ ಕವಿಗೋಷ್ಠಿ, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು, ಮುಂಬೈ, ಕಾಸರಗೋಡು, ದೆಹಲಿಯಲ್ಲಿ ನಡೆದ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಆದರೆ, ಈ ಸಾಹಿತ್ಯೋತ್ಸವ ಎಲ್ಲಕ್ಕಿಂತ ಹೊಸ ಅನುಭವ ತಂದುಕೊಟ್ಟಿತು. ಹೆಚ್ಚಿನ ಸಾಹಿತ್ಯ ಕೃಷಿಗೆ ಸ್ಫೂರ್ತಿ ತುಂಬಿತು’ ಎಂದು ರವಿ ಕೋಟಾರಗಸ್ತಿ ಹೇಳಿದ್ದಾರೆ.
‘ಬಹುಸಂಸ್ಕೃತಿ, ಬಹುಧರ್ಮದ ಮಧ್ಯೆಯೂ ಏಕತೆ ಹೊಂದಿದ ದೇಶ ಭಾರತ. ಈ ಸಾಹಿತ್ಯೋತ್ಸವದಲ್ಲೂ ಸಣ್ಣ ರಾಜ್ಯದಿಂದ ದೊಡ್ಡ ರಾಜ್ಯಗಳ ಕಲಾತ್ಮಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಅನಾವರಣಗೊಂಡಿತು. ಗ್ರಾಮೀಣ ಭಾಗದಿಂದ ಬೆಳೆದುಬಂದ ನನ್ನಂಥವನಿಗೆ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದೇ ಸೌಭಾಗ್ಯ’ ಎಂದು ತಿಳಿಸಿದ್ದಾರೆ.
‘ಈ ಸಾಹಿತ್ಯೋತ್ಸವದಲ್ಲಿ ಕರ್ನಾಟಕದಿಂದ ಆಯ್ದ ದಿಗ್ಗಜ ಸಾಹಿತಿಗಳು ಪಾಲ್ಗೊಂಡಿದ್ದರು. ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಅನಂತ ಪಟ್ನಾಗರ(ಹಿಂದಿ), ಬಾವೇಶಕುಮಾರ ಎಂ.ವಾಲಾ(ಗುಜರಾತಿ) ರವಿ ಕೊಟಾರಗಸ್ತಿ (ಕನ್ನಡ), ಸತಿಹಾ ಸರೋರಮಣಿ(ತಮಿಳು), ಹಿಂದಿ-ಗುಜರಾತಿ ಖ್ಯಾತ ಸಾಹಿತಿ ವಿನೋದ ಜೋಶಿ, ಶ್ವೇತಪದ್ಮಾ ಸತ್ಪತಿ(ಸಂಸ್ಕೃತ), ಪ್ರತಿಧಾರ ಸಮಾಲ(ಓಡಿಯಾ), ನೇಹಾ ಶರ್ಮಾ(ಡೊಂಗ್ರಿ), ಮಂಜುರ್ ಆಕಾಶ(ಕಾಶ್ಮೀರಿ) ಪಾಲ್ಗೊಂಡಿದ್ದರು.