ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಭಾರತೀಯ ಜನತಾಪಾರ್ಟಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಲಖನ್ ಜಾರಕಿಹೊಳಿ ಮಂಗಳವಾರ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಬಿಜೆಪಿಯಿಂದ 2ನೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಲಖನ್ ಮುಂದಾಗಿದ್ದರು. ಅವರಿಗೆ ಟಿಕೆಟ್ ನೀಡುವಂತೆ ಕೆಎಂಎಫ್ ಅಧ್ಯಕ್ಷರೂ ಶಾಸಕರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಬಹಿರಂಗವಾಗಿಯೇ ಮನವಿ ಮಾಡಿದ್ದರು. ಶಾಸಕ ರಮೇಶ ಜಾರಕಿಹೊಳಿ ಕೂಡ ಈ ಸಂಬಂಧ ಮುಖ್ಯಮಂತ್ರಿಗಳ ಮನವೊಲಿಸುವ ಪ್ರಯತ್ನ ಮಾಡಿದ್ದರು.
ಲಖನ್ ಜಾರಕಿಹೊಳಿ ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ರಮೇಶ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ನಂತರದಲ್ಲಿ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಲೋಕಸಭೆಗೆ ಆಯ್ಕೆಯಾಗಲು ಲಖನ್ ಪ್ರಯತ್ನ ಸಾಕಷ್ಟಿದೆ. ಹಾಗಾಗಿ ಅವರಿಗೆ ವಿಧಾನಪರಿಷತ್ ಟಿಕೆಟ್ ನೀಡಬೇಕು ಎಂದು ಬಾಲಚಂದ್ರ ಮನವಿ ಮಾಡಿದ್ದರು.
ಆದರೆ ಬಿಜೆಪಿ ಏಕೈಕ ಅಭ್ಯರ್ಥಿ ಕಣಕ್ಕಿಳಿಸುವ ತೀರ್ಮಾನದಿಂದ ಹಿಂದೆ ಸರಿದಿಲ್ಲ. ಇದರಿಂದಾಗಿ ಜಾರಕಿಹೊಳಿ ಸಹೋದರರು ಬಿಜೆಪಿ ಮೇಲೆ ಮುನಿಸಿಕೊಂಡಿದ್ದಾರೆ. ಬಿಜೆಪಿಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ. ಭಾನುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿಯಲ್ಲಿ ನಡೆದ ಜನಸ್ವರಾಜ್ ಸಮಾವೇಶಕ್ಕೂ ಜಾರಕಿಹೊಳಿ ಸಹೋದರರು ಗೈರಾಗಿದ್ದರು.
ಲಖನ್ ಜಾರಕಿಹೊಳಿ ಮಂಗಳವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ವಾಹನಗಳಲ್ಲಿ ಅಭಿಮಾನಿಗಳು ಬೆಳಗಾವಿಗೆ ಆಗಮಿಸಲಿದ್ದಾರೆ. ಸಾವಿರಾರು ಪಂಚಾಯಿತಿ ಸದಸ್ಯರ ಉಪಸ್ಥಿತಿಯಲ್ಲಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಲಖನ್ ಜಾರಕಿಹೊಳಿ ಅವರ ಆಪ್ತರು ತಿಳಿಸಿದ್ದಾರೆ.
ಲಖನ್ ನಾಮಪತ್ರ ಸಲ್ಲಿಸುವ ವೇಳೆ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಉಪಸ್ಥಿತರಿರಲಿದ್ದಾರೋ ಎನ್ನುವುದು ಗೊತ್ತಾಗಿಲ್ಲ.
ನಾಳೆಯೇ ಬಿಜೆಪಿಯ ಮಹಾಂತೇಶ ಕವಟಗಿಮಠ ಹಾಗೂ ಕಾಂಗ್ರೆಸ್ ನ ಚನ್ನರಾಜ ಹಟ್ಟಿಹೊಳಿ ಸಹ ನಾಮಪತ್ರ ಸಲ್ಲಿಸುವರು.
ಎರಡೂ ಜನಸ್ವರಾಜ್ ಸಮಾವೇಶದಿಂದ ಜಾರಕಿಹೊಳಿ ಸಹೋದರರು ದೂರ; ಬಿಜೆಪಿಯಲ್ಲಿ ಹೆಚ್ಚಿದ ಆತಂಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ