*ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮಾವ ಗುರುಸಿದ್ದಪ್ಪ ಹೆಬ್ಬಾಳಕರ ನಿಧನ*

ಪ್ರಗತಿವಾಹಿನಿ ಸುದ್ದಿ: ಖಾನಾಪುರ: ಖಾನಾಪುರ ನಗರದ ಸಮಾದೇವಿ ಗಲ್ಲಿಯ ನಿವಾಸಿ ಹಾಗೂ ಹಿರಿಯ ಗುತ್ತಿಗೆದಾರರು ಆಗಿದ್ದ ಗುರುಸಿದ್ದಪ್ಪ ಹೆಬ್ಬಾಳಕರ (95) ಅವರು ಬುಧವಾರ ಬೆಳಿಗ್ಗೆ 10 ಗಂಟೆಗೆ ವೃದ್ಧಾಪ್ಯದಿಂದ ನಿಧನರಾಗಿದ್ದಾರೆ.
ಗುರುಸಿದ್ದಪ್ಪ ಹೆಬ್ಬಾಳಕರ ಅವರು ಸಾಮಾಜಿಕ ಕಾರ್ಯಕರ್ತ ರವೀಂದ್ರ ಹೆಬ್ಬಾಳಕರ ಅವರ ತಂದೆ ಹಾಗೂ ಪ್ರಸ್ತುತ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಲಕ್ಷ್ಮೀ ಹೆಬ್ಬಾಳಕರ ಅವರ ಮಾವ.
ಅಂತ್ಯಕ್ರಿಯೆ ಇಂದು ಬುಧವಾರ ಸಂಜೆ 4 ಗಂಟೆಗೆ ಖಾನಾಪುರದ ಕೆ.ಎಸ್.ಆರ್.ಟಿ.ಸಿ. ಹೊಸ ಬಸ್ ನಿಲ್ದಾಣದ ಹಿಂದಿನ ಲಿಂಗಾಯತ ರುದ್ರಭೂಮಿಯಲ್ಲಿ ನಡೆಯಿತು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಅರಣ್ಯ ಗುತ್ತಿಗೆದಾರರಾಗಿದ್ದ ಮೃತರು ಸ್ಥಳೀಯ ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಹಾಗೂ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರಿಗೆ ಸಚಿವೆ ಲಕ್ಷ್ಮೀ ಅವರ ಪತಿ ರವೀಂದ್ರ ಹೆಬ್ಬಾಳಕರ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ.
ತಾಲ್ಲೂಕಿನ ಜನರಿಗೆ ಜಿ.ಎಸ್ ಹೆಬ್ಬಾಳಕರ ಎಂದೇ ಚಿರಪರಿಚಿತರಾಗಿದ್ದ ಗುರುಸಿದ್ಧಪ್ಪ ಅವರ ನಿಧನಕ್ಕೆ ಸ್ಥಳೀಯ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅರವಿಂದ ಪಾಟೀಲ, ಪ.ಪಂ ಅಧ್ಯಕ್ಷೆ ಮೀನಾಕ್ಷಿ ಬೈಲೂರಕರ, ಸ್ಥಾಯಿ ಸಮಿತಿಯ ಅಧ್ಯಕ್ಷ ಅಪ್ಪಯ್ಯ ಕೋಡೊಳಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಹಾಂತೇಶ ರಾಹೂತ ಸೇರಿದಂತೆ ತಾಲ್ಲೂಕಿನ ಗಣ್ಯರು ಕಂಬನಿ ಮಿಡಿದಿದ್ದಾರೆ.