
ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಾಯಿ ದಾಳಿಯಿಂದ ಮೃತಪಟ್ಟಿದ್ದ ಬಾಲಕಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋಧೋಳ್ಳಿ ಗ್ರಾಮದ ಅದ್ವಿತಾ ನಾರಾಯಣ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಮಂಜೂರು ಮಾಡಿದ್ದಾರೆ.
2023ರ ಫೆಬ್ರವರಿ 24 ರಂದು ಅದ್ವಿತಾ ಮನೆಯ ಕಟ್ಟೆಯ ಮೇಲೆ ಕುಳಿತಾಗ ಹಿಂದುಗಡೆಯಿಂದ ನಾಯಿ ಬಂದು ಕುತ್ತಿಗೆ ಭಾಗಕ್ಕೆ ಕಚ್ಚಿದ ಪರಿಣಾಮ ಮಗುವಿನ ಮೆದುಳಿಗೆ ಸೊಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.
ಮಗುವಿನ ಪಾಲಕರು ತೀರಾ ಹಿಂದುಳಿದವರಾಗಿದ್ದು, ಆಸ್ಪತ್ರೆಯ ಚಿಕಿತ್ಸೆಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಮಗುವಿನ ಸಾವು ಆ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿದ್ದು, ತುಂಬಾ ನಷ್ಟದಲ್ಲಿರುವ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸಚಿವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.
ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು ಎಂದು ಮೃತ ಬಾಲಕಿ ಕುಟುಂಬಸ್ಥರು ಸಚಿವರಿಗೆ ಮನವಿ ಸಲ್ಲಿಸಿದ್ದರು. ಮೃತ ಬಾಲಕಿಯ ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಧನ ದೊರಕಿಸಿಕೊಟ್ಟಿದ್ದಾರೆ.