*ಇಲಾಖೆಗೆ ಕೆಟ್ಟ ಹೆಸರು ಬರದಂತೆ ಕೆಲಸ ಮಾಡಬೇಕು; ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಮ್ಮ ಗುರಿ ಸಧೃಡ ಭಾರತ, ಸದೃಢ ಕರ್ನಾಟಕ ನಿರ್ಮಾಣ. ನಾವು ಮಕ್ಕಳ ಜೀವ ಮತ್ತು ಜೀವನದ ಜೊತೆ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಎಲ್ಲರೂ ಸೂಕ್ತ ರೀತಿಯಿಂದ, ಕೆಲಸ ನಿರ್ವಹಿಸಬೇಕು. ಇಲಾಖೆಗೆ ಕೆಟ್ಟ ಹೆಸರು ಬರದಂತೆ ಕೆಲಸ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು. ಪ್ರತಿಯೊಬ್ಬರೂ ಆಯಾ ಜಿಲ್ಲೆಯ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲಾಖೆಯ ಕಾರ್ಯವೈಖರಿಯ ಕುರಿತು ಸ್ಪಷ್ಟವಾದ ಮಾಹಿತಿ ನೀಡಬೇಕು. ಜನಪ್ರತಿನಿಧಿಗಳಿಗೆ ಗೌರವ ಕೊಟ್ಟು ಕೆಲಸ ನಿರ್ವಹಿಸಬೇಕು. ಆಹಾರದ ಗುಣಮಟ್ಟದ ಬಗ್ಗೆ ಗಮನಕೊಡಬೇಕು. ಯಾವುದೇ ಒಂದು ಮಗುವಿಗೂ ಕೂಡ ಕಳಪೆ ಆಹಾರ ಹೋಗಕೂಡದು. ಎಲ್ಲೂ ಸಮಸೆಯಾಗಬಾರದು. ಎಂದು ಸಚಿವರು ಸ್ಪಷ್ಟವಾಗಿ ಸೂಚಿಸಿದರು.
ನಾವು ಮಂತ್ರಿಗಳು ಇಂದು ಇರಬಹುದು, 5 ವರ್ಷದ ಬಳಿಕ ಬದಲಾಗಬಹುದು. ಆದರೆ ಅಧಿಕಾರಿಗಳು ನಿರಂತರವಾಗಿ ಇರುವವರು. ಯಾವುದೇ ಗೊಂದಲ ಸೃಷ್ಟಿಯಾಗದಂತೆ ಕೆಲಸ ನಿರ್ವಹಿಸಬೇಕು. ಏನೇ ಸಮಸ್ಯೆಗಳಿದ್ದರೂ ತಕ್ಷಣ ನನ್ನ ಗಮನಕ್ಕೆ ತರಬೇಕು ಹಗೂ ಸರಿಪಡಿಸಿಕೊಳ್ಳಬೇಕು. ಆಹಾರದ ಗುಣಮಟ್ಟ ತೃಪ್ತಿಕರವಾಗಿಲ್ಲ ಎಂದರೆ ಅಂತಹ ಪೂರೈಕೆದಾರರನ್ನು ರದ್ದುಪಡಿಸೋಣ. ಆಹಾರದ ಪ್ರಮಾಣ ಮತ್ತು ಗುಣಮಟ್ಟ ಎರಡೂ ಸರಿಯಾಗಿರಬೇಕು. ಗ್ಯಾಸ್, ತರಕಾರಿಯ ಹಣ ಮತ್ತು ಸಂಬಳ ಎಲ್ಲವೂ ಸರಿಯಾಗಿ ಹೋಗಬೇಕು. ನಿರಂತರವಾಗಿ ಅಂಗನವಾಡಿ ಕಾರ್ಯಕರ್ತರ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಬೇಕು ಎಂದು ಸಚಿವರು ಸೂಚಿಸಿದರು.
ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಎಲ್ಲರಿಗೂ ಕಡ್ಡಾಯವಾಗಿ ತಲುಪಬೇಕು. ವಾಹನಗಳ ಬಾಕಿ ಬಾಡಿಗೆ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಇಲಾಖೆಗೆ ಒಳ್ಳೆಯ ರೀತಿಯ ಹೆಸರು ಬರುವಂತೆ ಎಲ್ಲರೂ ಸೇರಿ ಕೆಲಸ ಮಾಡಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ ಪ್ರಕಾಶ್, ನಿರ್ದೇಶಕಿ ಅರ್ಚನ, ವಿಶೇಷ ಕರ್ತವ್ಯಾಧಿಕಾರಿ ನಿಶ್ಚಲ ಬಿ.ಹೆಚ್ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ