Kannada News

ಬೆಳಗಾವಿಗೆ ಆಗಮಿಸಿದ ಯಡಿಯೂರಪ್ಪ: ಸಧ್ಯಕ್ಕೆ ಜಿಲ್ಲೆ ವಿಭಜನೆ ಇಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಸಂಜೆ  ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಿ, ಗೌರವ ವಂದನೆ ಸಲ್ಲಿಸಲಾಯಿತು.
ಇದೇ ವೇಳೆ, ಗೋಕಾಕ ನಾಗರಿಕರು ಗೋಕಾಕ ಜಿಲ್ಲೆ ಆಗಲೇ ಬೇಕು ಎಂದು ಘೋಷಣೆ ಕೂಗಿದರು. ಈ ಸರಕಾರ ಗೋಕಾಕದ ಋಣದಲ್ಲಿದೆ. ಹಾಗಾಗಿ ಗೋಕಾಕನ್ನು ಜಿಲ್ಲೆ ಮಾಡುವ ಮೂಲಕ ಋಣವನ್ನು ತೀರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯನ್ನು ವಿಭಜಿಸುವುದಾದರೆ ಮೊದಲು ಗೋಕಾಕ ಜಿಲ್ಲೆ ಮಾಡಬೇಕು. ನಂತರ ಯಾವುದೇ ಜಿಲ್ಲೆ ಮಾಡಿಕೊಳ್ಳಲಿ ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಧ್ಯ ಜಿಲ್ಲೆ ವಿಭಜನೆ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ. ಅಂತಹ ಸಂದರ್ಭ ಬಂದಾಗ ಪರಿಶೀಲಿಸುವುದಾಗಿ ತಿಳಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಸರಕಾರಿ ಈಗಾಗಲೆ ಪ್ರವಾಹ ಪರಿಹಾರಕ್ಕಾಗಿ ಮೂರು ಸಾವಿರ ಕೋಟಿ ರೂಗಳಿಗಿಂತ ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ. ಎಲ್ಲ ರೀತಿಯ ಕೆಲಸಗಳನ್ನು ಕೈಗೊಳ್ಳಲಾಗಿದೆ. ಅವುಗಳ ಸ್ಥಿತಿ ಗತಿ ಪರಿಶೀಲಿಸಲು ಆಗಮಿಸಿದ್ದೇನೆ. ಸೂಕ್ತ ಮಾರ್ಗದರ್ಶನ ನೀಡುತ್ತೇನೆ. ಪರಿಹಾರ ಕಾರ್ಯಕ್ಕೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂದು ತಿಳಿಸಿದರು.
ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಶಾಸಕರು, ಬಿಜೆಪಿ ಪ್ರಮುಖರು, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತರಾದ ಬಿ‌.ಎಸ್.ಲೋಕೇಶ್ ಕುಮಾರ್, ಐಜಿಪಿ ರಾಘವೇಂದ್ರ ಸುಹಾಸ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.
ಅಲ್ಲಿಂದ ಮುಖ್ಯಮಂತ್ರಿಗಳು ಪ್ರವಾಹ ಪರಿಹಾರ ಕಾಮಗಾರಿಗಳ ಕುರಿತು ಪರಿಶೀಲನಾ ಸಭೆ ನಡೆಸಲು ಜಿಲ್ಲಾ ಪಂಚಾಯಿತಿ ಸಭಾಭವನಕ್ಕೆ ತೆರಳಿದರು.

Related Articles

Back to top button