*ನನ್ನ ರಾಜಕೀಯ ಜೀವನದ ಪ್ರಮುಖ ಪಾತ್ರ ಸಹಕಾರಿ ಕ್ಷೇತ್ರದ್ದು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್*
ಪ್ರಗತಿವಾಹಿನಿ ಸುದ್ದಿ; ಉಡುಪಿ: ನನ್ನ ರಾಜಕೀಯದ ಏಳಿಗೆಯ ಹಿಂದೆ ಸಹಕಾರಿ ಕ್ಷೇತ್ರದ ಪಾತ್ರ ಪ್ರಮುಖವಾದದ್ದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಕಾಪು ತಾಲೂಕಿನ ಪಣಿಯೂರಿನ ಬೆಳಪು ವ್ಯವಸಾಯ ಸಹಕಾರ ಸಂಘದ ಅಮೃತ ಮಹೋತ್ಸವ ಸಂಭ್ರಮಾಚರಣೆ ಹಾಗೂ ‘ಸಹಕಾರಿ ಮಹಲ್’ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಸಹಕಾರ ತತ್ವ ಅತ್ಯಂತ ಬಲವಾಗಿ ಬೇರೂರಿದೆ. ಇಡೀ ದೇಶವೇ ಸಹಕಾರ ತತ್ವದ ಮೇಲೆ ನಿಂತಿದೆ ಎಂದು ಹೇಳಿದರು.
ಸಹಕಾರ ಸಂಘಗಳು ಬೆಳೆದಷ್ಟು ಆರ್ಥಿಕ ಚಟುವಟಿಕೆಗಳು ಬೆಳೆಯುತ್ತವೆ, ರಾಜ್ಯ, ದೇಶ ಬೆಳೆಯುತ್ತವೆ. ನಾಯಕತ್ವ ಗುಣ ಬೆಳೆಸುವ ತಾಕತ್ತು ಸಹಕಾರಿ ಸಂಘಗಳಿಗಿವೆ ಎಂದು ಹೇಳಿದರು. ನಾನು ಸೇರಿದಂತೆ ರಾಜ್ಯದ ಬಹುತೇಕ ರಾಜಕಾರಣಿಗಳು ಸಹಕಾರ ಸಂಘಗಳ ಮೂಲಕವೇ ಬೆಳೆದು ಬಂದವರು. ನಾನು ಸಹಕಾರಿ ಸಕ್ಕರೆ ಕಾರ್ಖಾನೆಯೊಂದರ ನಿರ್ದೇಶಕಿಯಾಗಿ, ಅಲ್ಲಿಂದಲೇ ಗುರುತಿಸಿಲ್ಪಟ್ಟವಳು. ಈಗ ಕೂಡ ಸಹಕಾರ ಸಂಘವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದೇನೆ ಎಂದು ಸಚಿವರು ಹೇಳಿದರು.
ಸಹಕಾರ ಸಂಘ ಬೆಳೆಯುವುದಕ್ಕೆ ಜನರ ವಿಶ್ವಾಸ ಮುಖ್ಯ. ಸಹಕಾರ ಸಂಘಗಳು ಒಮ್ಮೆ ಜನರ ವಿಶ್ವಾಸವನ್ನು ಕಳೆದುಕೊಂಡರೆ ಮತ್ತೆ ಗಳಿಸಿಕೊಳ್ಳುವುದು ಕಷ್ಟ. ಹಾಗಾಗಿ ಪ್ರಾಮಾಣಿಕ ಸದಸ್ಯರು ಮುಖ್ಯ ಎಂದರು.
ಉಡುಪಿ ಜಿಲ್ಲೆಯಲ್ಲಿ ಸಹಕಾರ ಸಂಸ್ಥೆಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಕೇಳಿದ್ದೇನೆ. ಸಹಕಾರ ಚಳವಳಿ ಜಿಲ್ಲೆಯಲ್ಲಿ ಗಟ್ಟಿಯಾಗಿ ಬೇರೂರಿದೆ ಎಂದು ತಿಳಿದುಕೊಂಡಿದ್ದೇನೆ. ಎಲ್ಲರೂ ಸೇರಿ ಸಹಕಾರ ತತ್ವವನ್ನು ಇನ್ನಷ್ಟು ಗಟ್ಟಿಗೊಳಿಸೋಣ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ನಬಾರ್ಡ್ನ ಮುಖ್ಯ ಮಹಾ ಪ್ರಬಂಧಕರಾದ ಟಿ.ರಮೇಶ್, ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ