*ಲಿಂಗಾಯತರು ಎಂದೂ ಹಿಂದೂ ಧರ್ಮವನ್ನು ಟೀಕಿಸಿಲ್ಲ: ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತ ದೇಶದಲ್ಲಿ ಇರುವ ನಾವೆಲ್ಲಾ ಪ್ರಾದೇಶಿಕವಾಗಿ ಹಿಂದೂಗಳೇ. ಹಿಂದೂ ಎನ್ನುವುದು ಒಂದು ಧರ್ಮ ಅಲ್ಲ. ಅದೊಂದು ಜೀವನ ಪದ್ಧತಿ. ಲಿಂಗಾಯತರು ಎಂದೂ ಹಿಂದೂ ಧರ್ಮವನ್ನು ಟೀಕಿಸಿಲ್ಲ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಅವರು ಬೆಳಗಾವಿಯ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಸಂಘಟನೆ ಸಂಯುಕ್ತವಾಗಿ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ನಡೆದ ಸಂವಾದದಲ್ಲಿ ಉತ್ತರಿಸುತ್ತಿದ್ದರು.
.ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಲಿಂಗಾಯತವು ಹಿಂದೂ ಧರ್ಮದವರನ್ನು ಯಾಕೆ ಟೀಕಿಸುತ್ತಿರಿ ಎಂಬುದಕ್ಕೆ ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ. ಅದು ಒಂದು ಜೀವನ ಪದ್ಧತಿ. ಅದನ್ನೆ ನಮ್ಮ ದೇಶದ ಪ್ರಧಾನಿ ಕೂಡ ಹೇಳಿದ್ದಾರೆ. ಹಿಂದೂಸ್ಥಾನದಲ್ಲಿ ಇರುವವರೆಲ್ಲಾ ಪ್ರಾದೇಶಿಕವಾಗಿ ಹಿಂದೂಗಳೇ. ಆದರೆ, ಜೀವನಪದ್ಧತಿ ಬೇರೆ ಬೇರೆ. ಆದರೆ, ಲಿಂಗಾಯತ ಒಂದು ಪ್ರತ್ಯೇಕ ಧರ್ಮ. ಲಿಂಗಾಯತರು ಯಾರನ್ನೂ ಟೀಕಿಸಲಿಲ್ಲ ಮತ್ತು ವಿರೋಧಿಸಲಿಲ್ಲ. ಆದರೆ, ಅಲ್ಲಿನ ಕಂದಾಚಾರ, ಮೂಢನಂಬಿಕೆ, ಮೇಲು-ಕೀಳು, ಮೂಢಾಚರಣೆ ವಿರೋಧಿಸಿದರು ಎಂದು ಸ್ಪಷ್ಟಪಡಿಸಿದರು.
ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಕ್ಕಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ.ಸಿದ್ದರಾಮ ಸ್ವಾಮೀಜಿ, ಜಸ್ಟಿಸ್ ನಾಗಮೋಹನದಾಸ್ ಆಯೋಗ ನೀಡಿದ್ದ ವರದಿಯನ್ನು ಕರ್ನಾಟಕ ಸರ್ಕಾರ ಒಪ್ಪಿ ಕೇಂದ್ರಕ್ಕೆ ಕಳಿಸಿದೆ. ಈಗ ಅದಕ್ಕೆ ಒಪ್ಪಿಗೆ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ನಾವೆಲ್ಲಾ ಒತ್ತಾಯ ಮಾಡುತ್ತಿದ್ದೇವೆ ಎಂದರು.
ರಾಜಕಾರಣಿಗಳು ಮತ್ತು ಸಾರ್ವಜನಿಕರು ಲಿಂಗಾಯತ ಧರ್ಮ ಅರ್ಥ ಮಾಡಿಕೊಂಡರೆ ಗೊಂದಲ ನಿವಾರಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಲಿಂಗಾಯತ ಧರ್ಮವನ್ನು ಸಾರ್ವತ್ರೀಕರಣಗೊಳಿಸುವುದಕ್ಕಾಗಿ ಈ ಅಭಿಯಾನ ನಡೆಸುತ್ತಿದ್ದೇವೆ. ಆದ್ದರಿಂದ ರಾಜಕಾರಣಿಗಳು ಹಂತ ಹಂತವಾಗಿ ಬದಲಾವಣೆ ಆಗಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.
ಲಿಂಗಾಯತ ರಾಜಕಾರಣಿಗಳು ಯಾಕೆ ಒಂದಾಗುತ್ತಿಲ್ಲ ಎಂಬ ಪ್ರಶ್ನೆಗೆ ಆಡಿ ಹಂದಿಗುಂದದ ಶಿವಾನಂದ ಸ್ವಾಮೀಜಿ ಉತ್ತರಿಸಿ, ಅವರೆಲ್ಲಾ ಅಧಿಕಾರಕ್ಕಾಗಿ ಒಂದಾಗುವುದೇ ಹೆಚ್ಚು. ಆದರೆ, ಜನಸಮುದಾಯ ಎಚ್ಚೆತ್ತುಕೊಂಡರೆ ನಿಶ್ಚಿತವಾಗಿ ರಾಜಕಾರಣಿಗಳು ಲಿಂಗಾಯತ ಧರ್ಮಕ್ಕಾಗಿ ಒಂದಾಗುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾತೆ ವಾಗ್ದೇವಿ ಅವರು, ಬಸವ ತತ್ವ ಎಲ್ಲರಿಗೂ ಬೇಕಾದದ್ದು, ಅದರಲ್ಲೂ ವಿದ್ಯಾರ್ಥಿಗಳಿಗೆ ಅತೀ ಅವಶ್ಯವಾಗಿದೆ. ಶೀಲವಂತಿಕೆ, ಕ್ಷಮಾ, ಕರುಣೆ ಈ ಮೂರು ಗುಣಗಳು ಇದ್ದಾಗ ಮಾತ್ರ ಒಬ್ಬ ಆದರ್ಶಕ ಶಿಕ್ಷಕ ಎನಿಸಿಕೊಳ್ಳುತ್ತಾನೆ. ಈ ಮೂರು ಗುಣಗಳು ವಚನ ಸಾಹಿತ್ಯದಲ್ಲಿ ಕಾಣುತ್ತೇವೆ. ಹಾಗಾಗಿ, ಪಠ್ಯದಲ್ಲಿ ವಚನ ಸಾಹಿತ್ಯವನ್ನು ಅಳವಡಿಸಬೇಕು ಎಂದರು.
ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಇದೆಯೇ ಎಂಬ ಪ್ರಶ್ನೆಗೆ, 1871ಕ್ಕೂ ಮೊದಲು ದಾಖಲೆಗಳಲ್ಲಿ ಲಿಂಗಾಯತ ಧರ್ಮ ಎನ್ನುವುದೇ ಇತ್ತು. 1881ರಲ್ಲಿ ಕೆಲವರ ಕುತಂತ್ರದಿಂದ ಲಿಂಗಾಯತದೊಂದಿಗೆ ಹಿಂದೂ ಪದ ಸೇರ್ಪಡೆ ಆಗಿದೆ. ಹಾಗಾಗಿ, ನಮ್ಮದು ಸ್ವತಂತ್ರ ಧರ್ಮ ಅದಕ್ಕೆ ಮಾನ್ಯತೆ ಸಿಗುವುದಕ್ಕೆ ನಮ್ಮ ಹೋರಾಟ. ಮಾನ್ಯತೆ ಸಿಕ್ಕರೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ಸಿಕ್ಕು, ಎಲ್ಲ ಸೌಲಭ್ಯಗಳು ದೊರೆಯುತ್ತವೆ. ಆಗ ಈ ಮೀಸಲಾತಿ ಹಂಬಲ, ಅವಶ್ಯಕತೆಯೂ ಇರುವುದಿಲ್ಲ ಎಂದು ಡಾ.ಸಿದ್ದರಾಮ ಸ್ವಾಮೀಜಿ ಹೇಳಿದರು.
ಬಸವ ತತ್ವದಲ್ಲಿ ಕರ್ಮ ಸಿದ್ಧಾಂತಕ್ಕೆ ಪ್ರಾಧಾನ್ಯತೆ ಇಲ್ಲ. ಲಿಂಗದೀಕ್ಷೆ ಪಡೆದ ಬಳಿಕ ಅವರ ಕರ್ಮ ಎಲ್ಲಾ ಕಳೆದು ನಾಶವಾಗುತ್ತದೆ. ಹೀಗಾಗಿ, ಕರ್ಮ ಸಿದ್ಧಾಂತ, ಪುನರ್ವ ಜನ್ಮ ಸಿದ್ಧಾಂತವನ್ನು ಲಿಂಗಾಯತರು ಒಪ್ಪುವುದಿಲ್ಲ ಎಂದು ಡಾ.ಸಿದ್ಧರಾಮ ಸ್ವಾಮೀಜಿ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದರು.
ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಭಾರತೀಯ ಸಂಸ್ಕೃತಿ ಉಳಿಸುವುದು ಹೇಗೆ ಎಂಬ ಪ್ರಶ್ನೆಗೆ ನಿಶ್ಚಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಉತ್ತರಿಸಿ, ವಿದೇಶಿ ಸಂಸ್ಕೃತಿಗಿಂತ ನಮ್ಮಲ್ಲಿನ ವೈದಿಕ ಸಂಸ್ಕೃತಿಯಲ್ಲಿ ಇರುವ ಅಂಧಕಾರ, ಕಂದಾಚಾರ, ಮೂಢನಂಬಿಕೆ ಇವುಗಳಿಂದ ದೂರ ಬಂದು ಬಸವ ಸಂಸ್ಕೃತಿಯತ್ತ ಯುವಕರು ಪರಿವರ್ತನೆ ಆಗಬೇಕು ಎಂದು ಕರೆ ನೀಡಿದರು.
ರ್ಯಾಂಕ್ ಹೋಲ್ಡರ್ಸ್ ಇದ್ದೇವೆ ಆದರೆ, ಮಾನವೀಯ ಮೌಲ್ಯಗಳನ್ನು ತಿಳಿಸಲು ಹಿಂದೆ ಬಿದ್ದಿದ್ದೇವೆ ಎಂಬ ಪ್ರಶ್ನೆಗೆ, ವಿದ್ಯೆಯಲ್ಲಿ ಎಷ್ಟೇ ಪರಿಣಿತಿ ಹೊಂದಿದರೂ ಮಾನವೀಯ ಮೌಲ್ಯ ಇರದಿದ್ದರೆ ಆ ವಿದ್ಯೆಗೆ ಬೆಲೆ ಇಲ್ಲ. ಇತ್ತಿಚೆಗೆ ಹೆಚ್ಚಾಗಿರುವ ಕೋಮುಗಲಭೆಗಳ ಹಿಂದೆ ಇರುವವರು ಆಶಿಕ್ಷಿತರಲ್ಲ. ಮೌಲ್ಯಗಳನ್ನು ತಿಳಿಹೇಳುವ ಕಾರ್ಯ ಬಾಲ್ಯದಿಂದಲೇ ಶಿಕ್ಷಕರಿಂದ ಆಗಬೇಕು. ಶಿಕ್ಷಕರು ಸಚ್ಚಾರಿತ್ರ್ಯವಂತರಾಗಬೇಕು. ಆಗ ಈ ದೊಂಬಿ, ಗಲಭೆಗಳು ಸಂಭವಿಸುವುದಿಲ್ಲ ಎಂದು ಡಾ.ಸಿದ್ದರಾಮ ಸ್ವಾಮೀಜಿ ಹೇಳಿದರು.
ಬಸವ ಕ್ರಾಂತಿ ಜಗತ್ತಿನಲ್ಲೆ ಅದ್ಭುತ ಕ್ರಾಂತಿ. ತದನಂತರ
ಕಲ್ಯಾಣ ಕ್ರಾಂತಿ ಆಯಿತು. ಆಗ ವಚನ ಸಾಹಿತ್ಯ ಸಂರಕ್ಷಣೆಗೆ ಶರಣರು ಚದುರಿದರು. ಅದಾದ ಬಳಿಕ 200 ವರ್ಷ ಗುಪ್ತಗಾಮಿನಿಯಾಗಿ ವಚನ ಸಾಹಿತ್ಯ ಉಳಿಯಿತು. ಮತ್ತೆ ಪ್ರೌಢದೇವರಾಯನ ಉತ್ತೇಜನದಿಂದ 101 ವಿರಕ್ತರಿಂದ 15ನೇ ಶತಮಾನದಲ್ಲಿ ವಚನ ಸಾಹಿತ್ಯ ಮತ್ತೆ ಪ್ರೌಢಾವಸ್ಥೆಗೆ ಬಂತು. 12ನೇ ಶತಮಾನದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಲಿಂಗಾಯತ ಧರ್ಮ 300 ವರ್ಷ ಗುಪ್ತಗಾಮಿನಿ ಆಗಿ ಉಳಿದಿತ್ತು. ಆ ಅವಧಿ ಲಿಂಗಾಯತರಿಗೆ ಖಗ್ರಾಸ ಗ್ರಹಣ ಆಗಿತ್ತು. ಅದೇರೀತಿ ಎಡೆಯೂರು ಸಿದ್ಧಲಿಂಗೇಶ್ವರರ ನೇತೃತ್ವದಲ್ಲಿ 700 ಶರಣರಿಂದಾಗಿ ಮತ್ತಷ್ಟು ಪ್ರಚಾರ ಪಡೆಯಿತು ಎಂದು ವಿವವರಿಸಿದರು.
ಹಾವನೂರು ಮತ್ತು ವೆಂಕಟಸ್ವಾಮಿ ಆಯೋಗ ಲಿಂಗಾಯತ ಒಳಪಂಗಡಗಳನ್ನು ಛಿದ್ರ ಛಿದ್ರ ಮಾಡಿತು..ಜನಗಣತಿಯಲ್ಲಿ ಏನು ಬರೆಸಬೇಕು ಎಂಬ ಪ್ರಶ್ನೆಗೆ ಯಾರು ಬಸವ ತತ್ವ ಒಪ್ಪಿಕೊಂಡಿದ್ದಾರೊ ಅವರು ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಬೇಕು. ಜಾತಿ ಕಾಲಂನಲ್ಲಿ ಅವರ ಜಾತಿಯನ್ನು ಬರೆಸಬೇಕು. ಕಾಲಂನಲ್ಲಿ ಲಿಂಗಾಯತ ಧರ್ಮ ಇಲ್ಲದಿದ್ದರೆ 11ನೇ ಕ್ರಮಾಂಕದಲ್ಲಿ ಇತರೆ ಕಾಲಂನಲ್ಲಿ ಲಿಂಗಾಯತ ಧರ್ಮ ಅಂತಾ ಬರೆಸಬೇಕು. ಜಾತಿ ಕಾಲಂನಲ್ಲಿ ಅವರ ಜಾತಿ ಬರೆಸಬೇಕು. ಅವರು ಏನು ಬರೆದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು.
ಅಂತರ್ಜಾತಿ ವಿವಾಹ ಒಪ್ಪಿಕೊಳ್ಳುತ್ತಿರಾ ಎಂಬ ಪ್ರಶ್ನೆಗೆ ಎರಡೇ ಜಾತಿ ಹೆಣ್ಣು-ಗಂಡು ಅಷ್ಟೇ. ಅಂತರ್ಜಾತಿ ಎಂಬುದಿಲ್ಲ. ಲಿಂಗದೀಕ್ಷೆ ಪಡೆದು ಬಸವತತ್ವ ಪಾಲಿಸುತ್ತಿರೋ ಅವರೆಲ್ಲಾ ಯಾರು ಬೇಕಾದರೂ ಮದುವೆ ಆಗಬಹುದು. ಪ್ರೇಮಕ್ಕೂ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ. ಇದಕ್ಕೆ 12ನೇ ಶತಮಾನದಲ್ಲಿ ಬಸವಣ್ಣ ಶಾಸನ ಮಾಡಿದ್ದಾರೆ.
ಎಐ ಮೂಲಕ ಯಾವ ಆಧ್ಯಾತ್ಮಿಕ ಮತ್ತು ವಚನ ಸಾಹಿತ್ಯವನ್ನು ಯಾವ ರೀತಿ ಮಕ್ಕಳಿಗೆ ತಿಳಿಸಬಹುದು ಎಂಬುದಕ್ಕೆ ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ, ಎಐ ಎಂಬುದು ಒಂದು ತಂತ್ರಾಂಶ ಅಷ್ಟೇ ಅದರಿಂದ ಮಾಹಿತಿ ಪಡೆಯಬಹುದೇ ಹೊರತು. ಗುರುವಿನ ಸನ್ನಿಧಾನ ಪಡೆಯಲು ಸಾಧ್ಯವಿಲ್ಲ. ಹಾಗಾಗಿ, ಗುರುವಿನ ಸಾನ್ನಿಧ್ಯದಿಂದ ಸಾನಿಧ್ಯ, ಸಾಧನೆ ಮತ್ತು ದೀಕ್ಷೆ ಪಡೆಯಬಹುದು ಎಂದರು.
ಲಿಂಗಾಯತ ಸೂಕ್ತವೋ ಬಸವ ಧರ್ಮ ಹೆಸರು ಸೂಕ್ತವೋ ಎಂಬ ಪ್ರಶ್ನೆಗೆ ಡಾ.ಸಿದ್ಧರಾಮ ಸ್ವಾಮೀಜಿ,
ಬಸವಣ್ಣನವರು ಸ್ಥಾಪಿಸಿದ್ದಕ್ಕೆ ಬಸವಧರ್ಮ ಎನ್ನುತ್ತಾರೆ, ಶರಣರು ವ್ಯಾಪಕವಾಗಿ ಪ್ರಚಾರರ ಮಾಡಿದ್ದಕ್ಕೆ ಶರಣ ಧರ್ಮ ಅಂತಾ ಕರೆಯುತ್ತಾರೆ. ಎರಡೂ ಹೆಸರಿನಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಅದಕ್ಕೆ ಉದಾಹರಣೆ ಎಂದರೆ ಬುದ್ಧ ಸ್ಥಾಪಿಸಿದ ಧರ್ಮಕ್ಕೆ ಬೌದ್ಧ ಧರ್ಮ ಎಂದರು. ಲಿಂಗಾಯತಕ್ಕೆ ಬಸವಣ್ಣನೇ ಕತೃ ಸರ್ವಜ್ಞ ಕೂಡ ಹೇಳಿದ್ದಾರೆ. ವ್ಯಾಪಕವಾಗಿ ಪ್ರಚಲಿತದಲ್ಲಿ ಇರುವ ಲಿಂಗಾಯತ ಎನ್ನುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟರು.
ಲಿಂಗಾಯತ ಧರ್ಮಕ್ಕಿಂತ ಯಾವ ಧರ್ಮ ಇತ್ತು ಎಂಬುದಕ್ಕೆ ಭಾಲ್ಕಿಯ ಡಾ.ಪಟ್ಟದ್ದೇವರು, ಅದಕ್ಕಿಂತ ಮುಂಚೆ ಇರುವುದು ಶೈವ ಧರ್ಮ ಇತ್ತು. ಅಲ್ಲಿ ವರ್ಣಾಶ್ರಮ ವ್ಯವಸ್ಥೆ ಇತ್ತು. ಬೇಧ- ಭಾವ, ವೈದಿಕ ಧರ್ಮಾಚರಣೆ ಇತ್ತು. ಅದನ್ನೆಲ್ಲಾ ತೊಡೆದು ಹಾಕಿ ಸಮಾನತೆ ತರುವ ನಿಟ್ಟಿನಲ್ಲಿ.
ಬ್ರಾಹ್ಮಣರಾಗಿ ಹುಟ್ಟಿ ಲಿಂಗಾಯತ ಧರ್ಮ ಯಾಕೆ ಹುಟ್ಟು ಹಾಕಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಡಾ.ಸಿದ್ದರಾಮ ಸ್ವಾಮೀಜಿ, ಬ್ರಾಹ್ಮಣತ್ವದಲ್ಲಿ ಬೇಧಭಾವ, ಅಸಮಾನತೆ, ಅಸ್ಪೃಶ್ಯತೆ, ಮೂಢನಂಬಿಕೆ ಇವೆಲ್ಲವುಗಳನ್ನೂ ತೊಡೆದು ಹಾಕಿ, ಎಲ್ಲರಿಗೂ ಸಮಾನತೆ ತರುವ ನಿಟ್ಟಿನಲ್ಲಿ ಲಿಂಗಾಯತ ಧರ್ಮ ಸ್ಥಾಪಿಸಿದರು. ಹೆಣ್ಣು ಮಕ್ಕಳಿಗೆ ಸಮಾನತೆ ಕೊಟ್ಟರು. ಜಗತ್ತಿನಲ್ಲೆ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟ ದಾರ್ಶನಿಕ ಬಸವಣ್ಣ ಎಂದರು.
ಅನ್ಯ ಸಂಸ್ಕೃತಿಯತ್ತ ವಾಲುತ್ತಿರುವ ಇಂದಿನ ಲಿಂಗಾಯತ ಯುವಕರನ್ನು ಸೆಳೆಯುವುದು ಹೇಗೆ ಎಂಬ ಪ್ರಶ್ನೆಗೆ ಬಾಲ್ಯದಿಂದಲೇ ವಚನ ಸಾಹಿತ್ಯದ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಕಂಠಪಾಠ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ಏರ್ಪಡಿಸಿ ಅವರಲ್ಲಿ ವಚನ ಸಾಹಿತ್ಯದ ಪ್ರಜ್ಞೆ ಮೂಡಿಸಬೇಕು. ಅಂದಾಗ ಅವರು ಅನ್ಯ ಸಂಸ್ಕೃತಿಯತ್ತ ಆಕರ್ಷಿತರಾಗುವುದನ್ನು ತಡೆಗಟ್ಟಬಹುದು. ಮಠಾಧೀಶರು, ಬಸವ ಸಂಘಟನೆಗಳು ಹೆಚ್ಚೆಚ್ಚು ಆ ಕೆಲಸ ಮಾಡಬೇಕಿದೆ ಎಂದು ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಇದಕ್ಕೂ ಮೊದಲು ನಾಗನೂರು ರುದ್ರಾಕ್ಷಿ ಮಠದಲ್ಲಿ ಎಲ್ಲ ಶ್ರೀಗಳು ಅನುಭವ ಮಂಟಪದ ಬೃಹತ್ ತೈಲಚಿತ್ರವನ್ನು ಅನಾವರಣಗೊಳಿಸಿದರು.
ಮಾತೆ ವಾಗ್ದೇವಿ ತಾಯಿಯವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಸಂವಾದ ಕಾರ್ಯಕ್ರಮವನ್ನು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಇದೇ ವೇಳೆ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ವಿರಚಿತ ವಚನ ಪರಿಮಳ ಗ್ರಂಥವನ್ನು ಸ್ವಾಮೀಜಿಗಳು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಬಸವಗುರುಕುಲ ಸ್ವಾಮೀಜಿ, ಯಮಕನಮರಡಿಯ ಸಿದ್ಧಬಸವ ದೇವರು, ಧಾರವಾಡದ ಬಸವಾನಂದ ಶ್ರೀಗಳು, ಬೆಳಗಾವಿಯ ಮಾತಾ ಕುಮುದಿನಿ ತಾಯಿಯವರು, ಶೇಗುಣಸಿ ವಿರಕ್ತಮಠದ ಶಂಕರ ಸ್ವಾಮೀಜಿ, ಅರಭಾವಿಯ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉಪಸ್ಥಿತರಿದ್ದರು. ಜಾಗತಿಕ ಲಿಂಗಾಯತ ಮಹಾಸಭೆಯ ಬಸವರಾಜ ರೊಟ್ಟಿ, ಎಸ್.ಜಿ.ಸಿದ್ನಾಳ, ಚಂದ್ರಶೇಖರ ಗುಡಸಿ, ಅಶೋಕ ಮಳಗಲಿ ಉಪಸ್ಥಿತರಿದ್ದರು. ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಪ್ರಾಸ್ತಾವಿಕ ನುಡಿ ಜೊತೆಗೆ ಸಂವಾದ ಕಾರ್ಯಕ್ರಮ ನಿರ್ವಹಿಸಿದರು. ರಾಜಶೇಖರ ಪಾಟೀಲ ನಿರೂಪಿಸಿದರು.