*ಸೊರಬ ಕ್ಷೇತ್ರದ ಜನರಿಗೆ ಬೆಂಗಳೂರಿನ ಮನೆಯಲ್ಲಿ ಆತಿಥ್ಯ ನೀಡಿದ ಸಚಿವ ಮಧು ಬಂಗಾರಪ್ಪ*

ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು : ಸೊರಬ ಕ್ಷೇತ್ರದಿಂದ ಬೆಂಗಳೂರಿಗೆ ಆಗಮಿಸಿದ್ದ ನೂರಾರು ಜನರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಸದಾಶಿವನಗರದ ‘ಶ್ರೀ ಅಮ್ಮ’ ಗೃಹ ಕಚೇರಿಯಲ್ಲಿ ಆತ್ಮೀಯವಾಗಿ ಭೇಟಿಯಾಗಿ, ಅವರ ಸಮಸ್ಯೆಗಳನ್ನು ಆಲಿಸಿದರು.
ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರೊಂದಿಗೆ ಸಚಿವರು ಕೆಲಕಾಲ ಮಾತುಕತೆ ನಡೆಸಿದರು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದಿದ್ದು, ಅವುಗಳ ಕುರಿತು ಸೂಕ್ತವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಧು ಬಂಗಾರಪ್ಪ ಅವರು, “ಇದು ನಿಮ್ಮ ಮನೆ. ಯಾವುದೇ ಸಂಕೋಚ ಬೇಡ. ನಾನು ನಿಮ್ಮ ಸೇವಕ ಅಷ್ಟೇ” ಎಂದು ಹೇಳಿದರು.

2003ರಲ್ಲಿ ‘ಶ್ರೀ ಅಮ್ಮ’ ನಿಲಯದ ಗೃಹಪ್ರವೇಶ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಸೊರಬ ಕ್ಷೇತ್ರದ ಜನರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದನ್ನು ಈ ವೇಳೆ ಕೆಲವರು ಸ್ಮರಿಸಿದರು.
ಸಚಿವರು ಆಗಮಿಸಿದ್ದವರಿಗೆ ಉಪಹಾರದ ವ್ಯವಸ್ಥೆ ಮಾಡಿಸಿದ್ದರು. ಬಳಿಕ ಎಲ್ಲರೂ ವಿಧಾನಸೌಧಕ್ಕೆ ತೆರಳಲು ವಾಹನದ ವ್ಯವಸ್ಥೆಯನ್ನೂ ಮಾಡಿಸಿ, ಮಧ್ಯಾಹ್ನ ಊಟದ ಬಳಿಕ ಸುರಕ್ಷಿತವಾಗಿ ಊರಿಗೆ ಮರಳುವಂತೆ ತಿಳಿಸಿದರು.
ಸಚಿವರೊಂದಿಗೆ ಕ್ಷೇತ್ರದ ಜನರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಜನರೊಂದಿಗೆ ಸಚಿವರು ಆತ್ಮೀಯವಾಗಿ ಸಮಯ ಕಳೆದರು.




