ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಸುಪ್ರೀಂ ಮೆಟ್ಟಿಲೇರಿದ ಬಿಜೆಪಿ

ಪ್ರಗತಿವಾಹಿನಿ ಸುದ್ದಿ; ಭೋಪಾಲ್​: ಮಧ್ಯಪ್ರದೇಶ ಬಜೆಟ್​ ಅಧಿವೇಶನ ಮಾ.26ಕ್ಕೆ ಮುಂದೂಡಲ್ಪಟ್ಟ ಹಿನ್ನಲೆಯಲ್ಲಿ ವಿಶ್ವಾಸಮತ ಸಾಬೀತು ಮಾಡಲು ಕಮಲ್​ ನಾಥ್ ನೇತೃತ್ವದ ಕಾಂಗ್ರೆಸ್ ಸಾರ್ಕಾರಕ್ಕೆ 10 ದಿನ ಕಾಲಾವಕಾಶ ದೊರೆತಿದೆ. ಈ ನಡುವೆ ಬಿಜೆಪಿ ಮುಂದಿನ 48 ಗಂಟೆ ಒಳಗೆ ವಿಶ್ವಾಸಮತ ಯಾಚನೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ.

ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಸೇರಿ 9 ಬಿಜೆಪಿ ಶಾಸಕರು ಸುಪ್ರಿಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ.

ಶನಿವಾರ ಮಧ್ಯಪ್ರದೇಶದ ರಾಜ್ಯಪಾಲ ಲಾಲ್​ಜೀ ಟಂಡನ್ ರನ್ನು ಭೇಟಿಯಾಗಿದ್ದ ಬಿಜೆಪಿ ನಾಯಕರು, ಸಿಎಂ ಕಮಲನಾಥ್ ಅವರಿಗೆ ಸೋಮವಾರ ಸದನದಲ್ಲಿ ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತು ಪಡಿಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದರು. ಅಂತೆಯೇ ಇಂದು ವಿಶ್ವಾಸ ಮತಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಅಧಿವೇಶನವನ್ನು ಸ್ಪೀಕರ್​ ಮುಂದೂಡಿದ್ದಾರೆ.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಸ್ತುತ 228 ಶಾಸಕರಿದ್ದಾರೆ. ಬಹುಮತಕ್ಕೆ 115 ಸ್ಥಾನಗಳ ಅವಶ್ಯಕತೆ ಇದೆ. ಬಿಎಸ್​ಪಿಯ ಇಬ್ಬರು ಶಾಸಕರು, ಸಮಾಜವಾದಿ ಪಕ್ಷದ ಓರ್ವ ಶಾಸಕ ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 121 ಸದಸ್ಯರ ಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಆದರೆ, ಇದೀಗ ಪಕ್ಷೇತರರು ಸೇರಿದಂತೆ ಕಾಂಗ್ರೆಸ್​ನ 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಹಾಲಿ ಕಾಂಗ್ರೆಸ್​ನಲ್ಲಿ ಕೇವಲ 92 ಶಾಸಕರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button