*ಅರಬ್ಬಿ ಸಮುದ್ರದಲ್ಲಿ ಬಿಗ್ ಆಪರೇಷನ್*: *3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ, ಐವರು ಪಾಕ್ ಪ್ರಜೆಗಳ ಬಂಧನ*

ಪ್ರಗತಿವಾಹಿನಿ ಸುದ್ದಿ: ಸಮುದ್ರದ ಮಧ್ಯೆ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮಾದಕವಸ್ತು ಪತ್ತೆಯಾಗಿದೆ. ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಎಟಿಎಸ್ ನಡೆಸಿದ ಕಾರ್ಯಾಚರಣೆಯಲ್ಲಿ 526 ಕೆಜಿಗೂ ಹೆಚ್ಚು ಮಾದಕವಸ್ತು ವಶಪಡಿಸಿಕೊಳ್ಳಲಾಗಿದ್ದು, ಐವರು ಪಾಕ್ ಪ್ರಜೆಗಳನ್ನು ಬಂಧಿಸಲಾಗಿದೆ.
ವಶಪಡಿಸಿಕೊಂಡ ಸರಕಿನಲ್ಲಿ ಹೆರಾಯಿನ್ ಹಾಗೂ ಮೆಥಾಂಫೆಟಮೈನ್ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 3,000 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಸೆಪ್ಟೆಂಬರ್ 25ರಂದು ಲಕ್ಷದ್ವೀಪದ ಪಶ್ಚಿಮ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗುಪ್ತಚರ ಮಾಹಿತಿ ಆಧರಿಸಿ ಅನುಮಾನಾಸ್ಪದ ದೋಣಿಯ ಚಲನವಲನದ ಮೇಲೆ ಭಾರತೀಯ ಕರಾವಳಿ ಕಾವಲು ಪಡೆ ಸಮುದ್ರ ಹಾಗೂ ವಾಯು ಮಾರ್ಗದ ಮೂಲಕ ನಿರಂತರ ನಿಗಾ ಇರಿಸಿತ್ತು.
ದೋಣಿಯ ಚಲನವಲನದ ಕುರಿತು ಮಾಹಿತಿ ದೃಢಪಟ್ಟ ಬಳಿಕ ಕರಾವಳಿ ಕಾವಲು ಪಡೆ ಬೆನ್ನಟ್ಟಿ ದೋಣಿಯನ್ನು ತಡೆದಿದೆ. ಬಳಿಕ ಸಿಬ್ಬಂದಿ ದೋಣಿಗೆ ಬೋರ್ಡಿಂಗ್ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮಾದಕವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ದೋಣಿ ಹಾಗೂ ಅದರಲ್ಲಿದ್ದ ಐವರು ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಮಾದಕವಸ್ತು ಮತ್ತು ದೋಣಿಯನ್ನು ಸಶಸ್ತ್ರ ಭದ್ರತೆಯೊಂದಿಗೆ ಮುಂಬೈಗೆ ಕರೆತರಲಾಗಿದೆ.
ಮುಂಬೈನಲ್ಲಿ ವಿವಿಧ ತನಿಖಾ ಸಂಸ್ಥೆಗಳು ಜಂಟಿಯಾಗಿ ವಿಚಾರಣೆ ನಡೆಸಲಿವೆ. ಮಾದಕವಸ್ತುವಿನ ಮೂಲ, ಮಾಲೀಕತ್ವ ಹಾಗೂ ಸರಕು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಗುಜರಾತ್ ಎಟಿಎಸ್ ಹಾಗೂ ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಅನುಮಾನಾಸ್ಪದ ದೋಣಿಯ ಚಲನವಲನದ ಕುರಿತು ಮಾಹಿತಿ ಸಂಗ್ರಹಿಸಲಾಗಿತ್ತು. ನಂತರ ಸಮುದ್ರ ಹಾಗೂ ವಾಯು ಕಣ್ಗಾವಲಿನ ಮೂಲಕ ದೋಣಿಯನ್ನು ಪತ್ತೆಹಚ್ಚಲಾಗಿದೆ.
ಕಳ್ಳಸಾಗಣೆ ಹಿಂದೆ ಕಾರ್ಯನಿರ್ವಹಿಸುತ್ತಿರುವ ಜಾಲದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಐವರು ಪಾಕಿಸ್ತಾನಿ ಪ್ರಜೆಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಸರಕು ಎಲ್ಲಿಂದ ಬಂದಿದೆ ಮತ್ತು ಯಾವ ಮಾರ್ಗದ ಮೂಲಕ ಸಾಗಿಸಲಾಗುತ್ತಿತ್ತು ಎಂಬುದರ ಬಗ್ಗೆಯೂ ತನಿಖೆ ಮುಂದುವರಿದಿದೆ.
ಸಮುದ್ರ ಮಾರ್ಗದ ಮೂಲಕ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ತಡೆಯುವ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆದಿದೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ. ಗುಜರಾತ್ ಸೇರಿದಂತೆ ದೇಶದ ವಿವಿಧ ಕರಾವಳಿ ಪ್ರದೇಶಗಳಲ್ಲಿ ಇಂತಹ ಕಳ್ಳಸಾಗಣೆ ವಿರುದ್ಧ ನಿಗಾ ಮತ್ತು ಕಾರ್ಯಾಚರಣೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




