ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಜ್ಯದಲ್ಲಿ ೨೦೨೦ ಪೋಷಣಾ ಅಭಿಯಾನ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ವಿಷಯ. ಅಪೌಷ್ಟಿಕತೆ ಮುಕ್ತ ಬೆಳಗಾವಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಮಾಡಿದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಫೆ.೨) ನಡೆದ ಎಲ್ಲಾ ಶಕ್ತಿ ಕೇಂದ್ರ ಯೋಜನೆ ಟ್ರಾನ್ಸ್ಜೆಂಡರ್ ರವರ ಸಮನ್ವಯ ಮತ್ತು ಉಸ್ತುವಾರಿ ಸಮಿತಿ, ಪ್ರಧಾನ ಮಂತ್ರಿ ಯೋಜನೆ ಹಾಗೂ ಪೋಷಣ ಅಭಿಯಾನ ಯೋಜನೆಯ ಪ್ರಗತಿಪರಿಶೀಲನಾ ಮತ್ತು ಕುಂದುಕೊರತೆಗಳು ಪರಿಹಾರ ಸಮಿತಿಯ ಜಿಲ್ಲಾ ಮಟ್ಟದ ಸಮನ್ವಯ ಹಾಗೂ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಾ ಯೋಜನೆಗಳು ಜಿಲ್ಲೆಯ ಪ್ರತಿ ಹಳ್ಳಿಗಳಿಗೂ ತಲುಪುವ ಹಾಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದು ಹೇಳಿದರು.
ಪೋಷಣ ಅಭಿಯಾನ ಯೋಜನೆಯು ೦-೬ ವರ್ಷದ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಪೌಷ್ಟಿಕತೆಯ ಸ್ಥಿತಿಯನ್ನು ನಿರ್ದಿಷ್ಟ ಅವಧಿಗೆ ಅನುಗುಣವಾಗಿ ಸುಧಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ವರವಟ್ಟಿ ನೀಡಿದರು.
ಪೋಷಣ ಅಭಿಯಾನ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಐಸಿಡಿಎಸ್ ಮೇಲ್ವಿಚಾರಕಿಯರಿಗೆ ಸ್ಮಾರ್ಟ್ ಫೋನ್ ವಿತರಣೆ ಮಾಡಲಾಗಿದ್ದು, ಪವರ್ ಬ್ಯಾಂಕ್ ಹಾಗೂ ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಅಂಗನವಾಡಿ ಕಾರ್ಯಕರ್ತರು ಸ್ಮಾರ್ಟ್ ಫೋನ್ ಗಳ ಮೂಲಕ ಅಂಗನವಾಡಿ ಮಟ್ಟದಲ್ಲಿ ನಡೆಯುವ ಪ್ರತಿದಿನದ ಚಟುವಟಿಕೆಗಳನ್ನು ಆನ್ಲೈನ್ ದಾಖಲಾತಿ ಮಾಡುತ್ತಿದ್ದು ಈ ಯೋಜನೆಯ ಮುಖ್ಯ ಚಟುವಟಿಕೆ ಇದಾಗಿದೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಅಪ್ಲಿಕೇಶನ್ ನಲ್ಲಿ ಪ್ರತಿದಿನವೂಇ ದರ ಬಗ್ಗೆ ಮಕ್ಕಳ ಹಾಜರಾತಿ ಬಗ್ಗೆ ಮಕ್ಕಳು ಕೇಂದ್ರದಲ್ಲಿ ಪ್ರತಿನಿಧೀಕರಿಸುವ ಪೂರಕ ಪೌಷ್ಟಿಕ ಆಹಾರದ ವಿತರಣೆಯ ಬಗ್ಗೆ ಹಾಗೂ ಮಕ್ಕಳ ಬೆಳವಣಿಗೆ ಮೇಲ್ವಿಚಾರಣೆಯ ವಿವರವನ್ನು ಸ್ಮಾರ್ಟ್ ಫೋನ್ ಗಳಲ್ಲಿ ದಾಖಲಿಸಲಾಗುತ್ತದೆ.
ಯೋಜನೆ ಮತ್ತು ಪೋಷಣ ಅಭಿಯಾನದ ಕಾರ್ಯಕ್ರಮಗಳಲ್ಲಿ ನಾಗರಿಕ ಪಾಲ್ಗೊಳ್ಳುವಿಕೆ ಮತ್ತು ಕುಂದುಕೊರತೆಗಳು ಪರಿಹಾರ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಫಲಾನುಭವಿಗಳಿಗೆ ದೊರೆಯುವ ಸೌಲಭ್ಯಗಳ ಕುಂದುಕೊರತೆ ನಿವಾರಣೆ ಮಾಡಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕುಂದುಕೊರತೆ ನಿವಾರಣಾ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಬಸವರಾಜ ವರವಟ್ಟಿ ವಿವರಿಸಿದರು.
ಪೋಷಣ ಅಭಿಯಾನ ಯೋಜನೆ ಅಡಿ ಕುಂದುಕೊರತೆಗಳ ನಿವಾರಣೆ ಹಾಗೂ ಹೊಸ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು ಸಚಿವಾಲಯವು ಮಾಹಿತಿ ಕೇಂದ್ರದ ೧೪೪೦೮ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
—
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ:
ಮಾತೃವಂದನಾ ಯೋಜನೆಯ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಯೋಜನೆಯ ಕುರಿತಂತೆ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜ್ ವರವಟ್ಟಿ ಅವರು ನೀಡಿದರು.
ಈ ಯೋಜನೆಯಲ್ಲಿ ಆನಂತರ ಸಾಕಷ್ಟು ವಿಶ್ರಾಂತಿಗಾಗಿ ಪ್ರೋತ್ಸಾಹ ಧನದ ರೂಪದಲ್ಲಿ ಐದು ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡುವ ಯೋಜನೆ ಯೋಜನೆಯಲ್ಲಿ ಮೊದಲ ಜೀವಂತ ಹೆರಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಉದ್ಯಮಗಳು ಕೆಲಸ ಮಾಡುವ ಮಹಿಳೆಯರನ್ನು ಹೊರತುಪಡಿಸಿ ಉಳಿದ ಎಲ್ಲಾ ಗರ್ಭಿಣಿಯರಿಗೆ ಯೋಜನೆ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ ಎಂದು ಯೋಜನೆ ಕುರಿತು ಮಾಹಿತಿಯನ್ನು ನೀಡಿದರು.
ಎಲ್ಲಾ ತಾಲೂಕುಗಳಲ್ಲಿ ಬಾಣಂತಿಯರಿಗೆ ಸರಿಯಾದ ರೀತಿಯಲ್ಲಿ ಯೋಜನೆಯ ಸೌಲಭ್ಯ ದೊರಕುವಂತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು.
ಜಿಲ್ಲಾ ಮಟ್ಟದ ಸಮನ್ವಯ ಸಮಿತಿ:
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯನ್ನು ರಚಿಸಲಾಗಿತ್ತು ಇದರಲ್ಲಿ ಕುಟುಂಬ ಕಲಹಗಳ ಬಗೆಹರಿಸಲು ಒಂದು ಸಮಿತಿಯನ್ನು ರಚಿಸಲಾಗಿದೆ ಎಂದು ಮಹಿಳಾ ಹಾಗೂ ಮಕ್ಕಳ ಇಲಾಖೆಯ ಉಪನಿರ್ದೇಶಕರಾದ ಬಸವರಾಜ್ ವರವಟ್ಟಿ ಮಾಹಿತಿಯನ್ನು ನೀಡಿದರು.
ವಾರದ ಪ್ರತಿ ಬುಧವಾರ ಹಾಗೂ ಶುಕ್ರವಾರ ಸಿಡಿಪಿಓ ಕಚೇರಿಯಲ್ಲಿ ಕೌಟುಂಬಿಕ ಕಲಹದ ಪ್ರಕರಣಗಳ ವಿಚಾರಣೆ ಮಾಡಲಾಗುವುದು ಹಾಗೂ ವಿಚಾರಣೆಗೆ ನೇಮಿಸಿದ ಕೆಲ ವಕೀಲರು ಗೈರುಹಾಜರು ಆಗುತ್ತಿರುವುದು ಹಾಗೂ ಪ್ರಕರಣ ದಾಖಲಿಸಿಕೊಂಡ ೧೯ ದಿನಗಳಲ್ಲಿ ಕೇಸ್ ಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಲು ತಿಳಿಸಿದರು.
ಕೌಟುಂಬಿಕ ಕಲಹಗಳು ಬಗೆಹರಿಸಲು ಈ ಸಮಿತಿಯು ಫೆಬ್ರವರಿ ೨೭ರಂದು ನಡೆಯಲಿರುವ ಲೋಕ ಅದಾಲತ್ ನಲ್ಲಿ ಪಾಲ್ಗೊಂಡು ಕೌಟುಂಬಿಕ ಕಲಹಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಿಜಯ ದೇವರಾಜ್ ಅರಸು ಅವರು ಸಲಹೆ ನೀಡಿದರು.
ಪ್ರಕರಣ ವಿಚಾರಣೆಗೆ ಸಂಬಂಧಪಟ್ಟ ವಕೀಲರು ಹಾಜರಾಗದಿದ್ದಲ್ಲಿ ವಕೀಲರನ್ನು ಬದಲಿಸಿ ಕೊಡಲಾಗುವುದು ಎಂದು ಹೇಳಿದರು. ಆದಷ್ಟು ಬೇಗ ಪ್ರಕರಣಗಳನ್ನು ಇತ್ಯರ್ಥ ಮಾಡುವ ಭರವಸೆಯನ್ನು ನೀಡಿದರು.
ಎಲ್ಲ ತಾಲೂಕಿನ ಮಹಿಳಾ ಹಾಗೂ ಕುಟುಂಬ ಇಲಾಖೆಯ ಎಲ್ಲಾ ಅಧಿಕಾರಿಗಳು ಸೇರಿ ಲೋಕ ಅದಾಲತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೌಟುಂಬಿಕ ಕಲಹಗಳನ್ನು ಬಗೆಹರಿಸುವ ಕಾರ್ಯವನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಅವರು ಹೇಳಿದರು.
ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ:
ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ನಿಟ್ಟಿನಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ. ಲೈಂಗಿಕ ಅಥವಾ ಇನ್ಯಾವುದೋ ಕಿರುಕುಳಕ್ಕೆ ಒಳಗಾದ ಮಹಿಳೆಗೆ ಕೂಡಲೇ ಒಂದೇ ಸ್ಥಳದಲ್ಲಿ ಪರಿಹಾರವನ್ನು ನೀಡಲು ಸಖಿ ಒನ್ ಸ್ಟಾಪ್ ಸೆಂಟರ್ ಆರಂಭಿಸಲಾಗಿದೆ ಇದರ ಮುಖ್ಯ ಕಚೇರಿ ಜಿಲ್ಲಾಸ್ಪತ್ರೆಯಲ್ಲಿ ಇರುವುದಾಗಿ ಉಪನಿರ್ದೇಶಕ ಬಸವರಾಜ ವರವಟ್ಟಿ ಮಾಹಿತಿ ನೀಡಿದರು.
ಆಸಿಡ್ ದಾಳಿ ಲೈಂಗಿಕ ದೌರ್ಜನ್ಯ ಇಂಥ ಸಂದರ್ಭಗಳಲ್ಲಿ ಮರಣಹೊಂದಿದ ಅಥವಾ ನಷ್ಟ ಅನುಭವಿಸಿದ ಮಹಿಳೆ ಅಥವಾ ಅವರ ಮನೆ ಅವರಿಗೆ ಪರಿಹಾರ ನೀಡುವಂತೆ ಯೋಜನೆ ನಿರ್ವಹಿಸುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿ ಮಹಿಳಾ ಸಶಕ್ತಿಕರಣ ಯೋಜನೆ ಕೌಶಲ್ಯ ಅಭಿವೃದ್ಧಿ ಉದ್ಯೋಗ ಡಿಜಿಟಲ್ ಸಾಕ್ಷರತೆ ಆರೋಗ್ಯ ಮತ್ತು ಪೌಷ್ಟಿಕತೆ ಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಲು ಒಂದೇ ಸೂರಿನಡಿ ನೀಡುವ ಸಲುವಾಗಿ ಮಹಿಳಾ ಶಕ್ತಿ ಕೇಂದ್ರ ಯೋಜನೆಯನ್ನು ರಾಜ್ಯ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಟ್ರಾನ್ಸ ಜೆಂಡರ್ ಸಮನ್ವಯ ಸಮಿತಿ:
ತೃತೀಯ ಲಿಂಗಿಗಳಿಗೆ ಪ್ರತ್ಯೇಕವಾದ ಕಾರ್ಯಾಲಯವನ್ನು ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು ಹಾಗೂ ಪ್ರತಿ ತಿಂಗಳು ಸಭೆಗಳನ್ನು ಮಾಡಬೇಕಾಗಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಪ್ರತ್ಯೇಕ ಗುರುತಿನ ಚೀಟಿಗಳನ್ನು ನೀಡಬೇಕಾಗಿ ವಿನಂತಿಯನ್ನು ಮಾಡಿದರು . ಹಾಗೂ ಬಹುತೇಕ ತೃತಿಯ ಲಿಂಗಿಗಳಿಗೆ ಪಡಿತರ ಚೀಟಿಗಳನ್ನು ಕೂಡಲೇ ನೀಡಲು ವಿನಂತಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಶೀಘ್ರದಲ್ಲಿ ಎಲ್ಲಾ ತೃತೀಯ ಲಿಂಗಿಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ತೃತೀಯ ಲಿಂಗಿಗಳಿಗೇ ಸಭೆ ನಡೆಸಲು ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸಿ ಬಿ ಕೊಡ್ಲಿ, ವಿವಿಧ ಸಮಿತಿಗಳ ಸದಸ್ಯರು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಫಲಾನುಭವಿಗಳ ಆಯ್ಕೆ ಸಮಿತಿ ಸಭೆ
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಹೆಸರು ನೋಂದಾಯಿಸಿದ ಫಲಾನುಭವಿಗಳ ಚೀಟಿ ತೆರೆಯುವ ಮೂಲಕ ಅರ್ಹ ಫಲಾನುಭವಿಗಳನ್ನು ಜಿಲ್ಲಾಧಿಕಾರಿ ಎಂ.ಜಿ. ಹೀರೆಮಠ ಅವರು ಆಯ್ಕೆ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ( ಫೆ.೨) ಜಿಲ್ಲಾಮಟ್ಟದ ಸಮನ್ವಯ ಹಾಗೂ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗಳಿಂದ ಉದ್ಯೋಗಿನಿ ಯೋಜನೆ, ಸಮೃದ್ಧಿ ಯೋಜನೆ, ಕಿರುಸಾಲ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನಾ ಯೋಜನೆ, ಹಾಗೂ ಧನಶ್ರೀ ಯೋಜನೆಗಳಿಗೆ ಅರ್ಜಿಗಳನ್ನು ಸ್ವೀಕರಿಸಿದ್ದು, ಫಲಾನುಭವಿಗಳ ಹೆಸರಿನ ಚೀಟಿ ತೆರೆಯುವ ಮೂಲಕ ಆಯ್ಕೆ ಮಾಡಲಾಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿಗಳಾದ ವಿಜಯ ದೇವರಾಜ್ ಅರಸು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸಿ ಬಿ ಕೊಡ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಸವರಾಜ ವರವಟ್ಟಿ, ಜಿಲ್ಲಾ ನಿರೂಪಣಾಧಿಕಾರಿ ನವೀನಕುಮಾರ. ಯು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ