ತಾವೊಬ್ಬ ಸಮರ್ಥ ಸಂಸದನಾಗಬಲ್ಲೆ ಎನ್ನುವುದನ್ನು ನಿರೂಪಿಸಿದ ಮೃಣಾಲ ಹೆಬ್ಬಾಳಕರ್


ಜನರ ಕಷ್ಟಕ್ಕೆ ಸ್ಪಂದಿಸಿ, ಪರಿಹರಿಸುವುದರಲ್ಲಿರುವ ಸಂತೋಷ ಬೇರೆಲ್ಲೂ ಸಿಗದು
ಮತ ನೀಡಿದ್ದು ಸಾರ್ಥಕವಾಯಿತು ಎನ್ನುವ ಭಾವನೆ ಜನರಲ್ಲಿ ಬರುವಂತೆ ಕೆಲಸ ಮಾಡುತ್ತೇನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಕೆಎಲ್ಎಸ್ ಸಂಸ್ಥೆಯ ಗೋಗಟೆ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ತಾವು ಕಲಿತ ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿಗಳೊಂದಿಗೆ ಅವರು ಸುಮಾರು 2 ಗಂಟೆಗಳಿಗೂ ಹೆಚ್ಚು ಸಮಯ ಸಂವಾದ ನಡೆಸಿ, ವಿದ್ಯಾರ್ಥಿಗಳ ಪ್ರಶ್ನೆಗೆ ಅತ್ಯಂತ ಸಮರ್ಪಕ ಉತ್ತರ ನೀಡಿದರು.

ವಿದ್ಯಾರ್ಥಿಗಳು ಹತ್ತಾರು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಮನಸ್ಸಿನಲ್ಲಿರುವ ಸಂಶಯಗಳಿಗೆ ಪರಿಹಾರ ಕಂಡುಕೊಂಡರು. ನೀವು ರಾಜಕೀಯಕ್ಕೆ ಬಂದಿದ್ದೇಕೆ? ಇದಕ್ಕೆ ಪ್ರೇರಣೆ ಏನು? ನಿಮ್ಮ ಗುರಿ ಏನು? ನಿಮ್ಮ ವಿದ್ಯಾರ್ಥಿ ಜೀವನ ಹೇಗಿತ್ತು? ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಸುಧಾರಿಸುವುದು ಹೇಗೆ? ಹೀಗೆ ಹತ್ತಾರು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದರು. ಎಲ್ಲದಕ್ಕೂ ಸಮರ್ಥವಾಗಿ ಉತ್ತರಿಸುವ ಮೂಲಕ ತಮ್ಮಲ್ಲಿರುವ ನಾಯಕತ್ವ ಗುಣವನ್ನು ಸಾಬೀತುಪಡಿಸಿದರು.

ಜನನಾಯಕನಾಗಬೇಕೆನ್ನುವ ಬಯಕೆ ನಿಮಗೆ ಹುಟ್ಟಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮೃಣಾಲ ಹೆಬ್ಬಾಳಕರ್, ನಾನು ಕಳೆದ 10 ವರ್ಷದಿಂದ ತಾಯಿ ಲಕ್ಷ್ಮೀ ಹೆಬ್ಬಾಳಕರ್ ಅವರು ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ಕೆಲಸ ಮಾಡುವುದನ್ನು ಹತ್ತಿರದಿಂದ ನೋಡುತ್ತ ಬಂದಿದ್ದೇನೆ. ಅವರ ಕೆಲಸಕ್ಕೆ ನನ್ನಿಂದಾದ ಸಹಾಯವನ್ನೂ ಮಾಡುತ್ತ ಬಂದಿದ್ದೇನೆ. ಹಾಗೆ ಮಾಡುವಾಗ ಅತ್ಯಂತ ಕಷ್ಟದಲ್ಲಿರುವವರು ಬಂದು ಸಹಾಯಕ್ಕಾಗಿ ಮೊರೆ ಇಡುವುದನ್ನು ನೋಡಿ ತಾಯಿಯವರು ಬಹಳ ಕನಿಕರದಿಂದ ಅವರ ಸಹಾಯಕ್ಕೆ ನಿಲ್ಲುವುದನ್ನು, ಅವರ ಸಮಸ್ಯೆ ಪರಿಹರಿಸಿ, ಖುಷಿ ಪಡುವುದನ್ನು ನೋಡಿದ್ದೇನೆ. ಹಾಗಾಗಿ ಜನರ ಕಷ್ಟಕ್ಕೆ ಸ್ಪಂದಿಸುವುದರಲ್ಲಿ, ಅವರ ಕಷ್ಟವನ್ನು ಪರಿಹರಿಸುವುದರಲ್ಲಿ ಇರುವ ಸಂತೋಷ ಬೇರೆಲ್ಲೂ ಸಿಗುವುದಿಲ್ಲ ಎಂದು ಅರಿತ ನಾನು, ನಾನೂ ಕೂಡ ರಾಜಕೀಯದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂದು ನಿರ್ಧರಿಸಿದೆ. ಹಾಗಾಗಿ ಆ ದಿಸೆಯಲ್ಲಿ 10 ವರ್ಷದಿಂದ ಕೆಲಸ ಮಾಡುತ್ತ ಇಂದು ನಿಮ್ಮ ಮುಂದೆ ಲೋಕಸಭೆಯ ಅಭ್ಯರ್ಥಿಯಾಗಿ ನಿಂತಿದ್ದೇನೆ ಎಂದರು.

ನಿಮ್ಮ ಕಾಲೇಜು ಜೀವನ ಹೇಗಿತ್ತು ಮತ್ತು ರಾಜಕೀಯಕ್ಕಿಳಿಯಲು ವಿದ್ಯಾರ್ಥಿ ಜೀವನದಲ್ಲಿ ಹೇಗೆ ಪ್ರೇರಣೆ ಸಿಕ್ಕಿತು ಎನ್ನುವ ಪ್ರಶ್ನೆಗೆ, ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನಾಯಕತ್ವ ಗುಣ ಬೆಳೆಸಿಕೊಂಡು ಬಂದವನು. ಆಗಿನಿಂದಲೂ ಎಲ್ಲರ ಜೊತೆ ಸ್ನೇಹಪರ ವ್ಯಕ್ತಿತ್ವ ಇಟ್ಟುಕೊಂಡಿದ್ದೆ. ಸ್ನೇಹಿತರಿಗೆ ನನ್ನಿಂದಾದ ಸಹಾಯ ಮಾಡುತ್ತ ಬಂದಿದ್ದೆ. ವಿದ್ಯಾರ್ಥಿ ಜೀವನದಲ್ಲಿ ಕಲಿತ ಬಹಳಷ್ಟು ವಿಷಯಗಳು, ಇಲ್ಲಿ ಪಡೆದ ಅನುಭವ ನನ್ನನ್ನು ಇಂದು ಈ ಹಂತಕ್ಕೆ ತಂದು ನಿಲ್ಲಿಸಿದೆ. ಹಾಗಾಗಿ ವಿದ್ಯಾರ್ಥಿ ಜೀವನವನ್ನು ಯಾರೂ ವ್ಯರ್ಥವಾಗಿಸಿಕೊಳ್ಳಬಾರದು. ಅದು ಭವಿಷ್ಯದ ದಿಕ್ಸೂಚಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಉತ್ತರಿಸಿದರು.

ಇಲ್ಲಿರುವ ವಿದ್ಯಾರ್ಥಿಗಳು ಮತ್ತು ಇತರರಿಗೆ ಬರಲಿರುವ ಚುನಾವಣೆ ವಿಷಯದಲ್ಲಿ ಯಾವ ಸಂದೇಶ ನೀಡಲು ಬಯಸುತ್ತೀರಿ ಎನ್ನುವ ಪ್ರಶ್ನೆಗೆ, ಉತ್ತಮ ವ್ಯಕ್ತಿ ನೋಡಿ ಮತ ಕೊಡಿ. ಜಿವನದಲ್ಲಿ ಬದ್ದತೆ ಮುಖ್ಯ. ಕೇವಲ ಸ್ವಾರ್ಥಕ್ಕಾಗಿ ಕೆಲಸ ಮಾಡುವವರು, ಅಧಿಕಾರಕ್ಕಾಗಿಯೇ ರಾಜಕಾರಣ ಮಾಡುವವರನ್ನು ದೂರವಿಟ್ಟಾಗ ಮಾತ್ರ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ. ಯುವಜನರು ಇದರ ಮುಂದಾಳತ್ವ ವಹಿಸಬೇಕು. ಎಲ್ಲರೊಂದಿಗೆ ಬೆರೆತು ಕೆಲಸ ಮಾಡುವಂತವರನ್ನು ಆಯ್ಕೆ ಮಾಡಬೇಕು ಎಂದರು.
ನೀವು ಆಯ್ಕೆಯಾದಲ್ಲಿ ನಿಮ್ಮ ಪ್ರಮುಖ ಗುರಿ ಏನು, ವಿಶೇಷವಾಗಿ ಯುವಜನರಿಗಾಗಿ ಏನು ಮಾಡಲಿದ್ದೀರಿ ಎನ್ನುವ ಪ್ರಶ್ನೆಗೆ, ಮೊಟ್ಟ ಮೊದಲು ವಿದ್ಯಾವಂತರಿಗೆ ಇಲ್ಲೇ ಉದ್ಯೋಗ ಮಾಡುವಂತಹ ಅವಕಾಶ ಕಲ್ಪಿಸುವುದು ನನ್ನ ಗುರಿ. ತನ್ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ, ಜೊತೆಗೆ ಪ್ರತಿಭಾ ಪಲಾಯನ ತಡೆಯಲು ಆದ್ಯತೆ ನೀಡಿ ಕೆಲಸ ಮಾಡುತ್ತೇನೆ. ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವ ಮೂಲಕ ಉದ್ಯೋಗಸ್ಥರಾಗಲು ಮತ್ತು ಉದ್ಯಮಿಗಳಾಗಲು ಅಗತ್ಯ ನೆರವು ನೀಡುತ್ತೇನೆ. ಜೊತೆಗೆ ಜಿಲ್ಲೆಗಾಗಿ ಇನ್ನೂ ಹತ್ತಾರು ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ಖಂಡಿತ ಜನರ ನಿರೀಕ್ಷೆಯಂತೆ ಕೆಲಸ ಮಾಡಿ, ನಮ್ಮ ಮತ ಸಾರ್ಥಕವಾಯಿತು ಎನ್ನುವಂತೆ ಕೆಲಸ ಮಾಡುತ್ತೇನೆ ಎಂದು ಮೃಣಾಲ ಹೆಬ್ಬಾಳಕರ್ ಉತ್ತರಿಸಿದರು.
ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಲು ನಿಮ್ಮ ಯೋಜನೆ ಏನು ಎನ್ನುವ ಪ್ರಶ್ನೆಗೆ, ಇದು ನನ್ನೊಬ್ಬನಿಂದ ಸಾಧ್ಯವಿಲ್ಲ. ಆದರೆ ಆ ದಿಸೆಯಲ್ಲಿ ನಾನು ಹೆಜ್ಜೆ ಹಾಕುತ್ತೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ನಾನೊಬ್ಬನೇ ಅಲ್ಲ, ಇನ್ನೂ ನೂರಾರು ಪ್ರಾಮಾಣಿಕ ಯುವಕರು ರಾಜಕೀಯಕ್ಕೆ ಬರಬೇಕು. ರಾಜಕೀಯ ವ್ಯವಸ್ಥೆಯನ್ನು ಸುಧಾರಿಸಲು ಎಲ್ಲರೂ ಕೈಜೋಡಿಸಿದಾಗ ಅದು ಸಾಧ್ಯವಿಲ್ಲದ ಕೆಲಸವಲ್ಲ ಎಂದು ಹೇಳಿದರು.
ಪದೇ ಪದೆ ಕೇಳಿಬರುತ್ತಿರುವ ಗಡಿ ವಿವಾದ ಪರಿಹರಿಸಲು ನಿಮ್ಮ ಯೋಜನೆ ಏನು ಎನ್ನುವ ಪ್ರಶ್ನೆಗೆ, ನಾನು ನನ್ನ ಪ್ರಣಾಳಿಕೆಯಲ್ಲಿ ಈಗಾಗಲೆ ಹಾಕಿದ್ದೇನೆ, ನೆಮ್ಮದಿಯ ಮತ್ತು ಸುರಕ್ಷಿತ ಬೆಳಗಾವಿ ನನ್ನ ಕನಸು. ಇಲ್ಲಿ ಬೇಡದ ಕಾರಣಕ್ಕೆ ಗಲಭೆಗಳಾಗುವುದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ನನ್ನಿಂದಾದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಟ್ಟಾರೆ ಬೆಳಗಾವಿ ಒಂದು ಆದರ್ಶ ನಗರವಾಗಬೇಕು. ಲೋಕಸಭಾ ಕ್ಷೇತ್ರದ ಒಂದು ಮಾದರಿ ಕ್ಷೇತ್ರವಾಗಬೇಕು ಈ ದಿಸೆಯಲ್ಲಿ ನಾನು ಹೆಜ್ಜೆ ಇಡುತ್ತೇನೆ ಎಂದು ಉತ್ತರಿಸಿದರು.
ಮೃಣಾಲ ಹೆಬ್ಬಾಳಕರ್ ಜೊತೆಗಿನ ಸಂವಾದಕ್ಕೆ ವಿದ್ಯಾರ್ಥಿಗಳು ಅತ್ಯಂತ ಖುಷಿಪಟ್ಟು, ಅವರ ಉತ್ತರಗಳಿಗೆ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ತಾವೊಬ್ಬ ಸಮರ್ಥ ಸಂಸದನಾಗಬಲ್ಲೆ ಎನ್ನುವುದನ್ನು ಅವರು ನಿರೂಪಿಸುವಲ್ಲಿ ಯಶಸ್ವಿಯಾದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ