ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಅವರ ಅಂತ್ಯಕ್ರಿಯೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಪಾಲ್ಗೊಂಡರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಯಲ್ಲಿ ಬುಧವಾರ ಕೃಷ್ಣ ಅವರ ಅಂತ್ಯಕ್ರಿಯೆ ನಡೆಯಿತು. ಒಕ್ಕಲಿಗ ಸಂಪ್ರದಾಯದಂತೆ ಮಾಜಿ ಸಿಎಂ, ಪದ್ಮವಿಭೂಷಣ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ನೆರವೇರಿದ್ದು, ಪಂಚಭೂತಗಳಲ್ಲಿ ಕೃಷ್ಣ ಲೀನರಾದರು.
ಕೃಷ್ಣ ಅವರ ಚಿತೆಗೆ ಮೊಮ್ಮಗ ಅಮರ್ತ್ಯ ಹೆಗ್ಡೆ ಅಗ್ನಿಸ್ಪರ್ಷ ನೀಡಿದರು. ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಕೈಂಕರ್ಯ ಕೈಗೊಳ್ಳಲಾಯಿತು. ಅವರ ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು. ವಿಶೇಷವಾಗಿ ಗಂಧ ಬೆಳೆಯಲು ರೈತರಿಗೆ ಕೃಷ್ಣ ಅವರು ಪ್ರೋತ್ಸಾಹ ನೀಡಿದ್ದ ಕಾರಣಕ್ಕೆ ಸಾವಿರಾರು ರೈತರು ತಾವು ಬೆಳೆದ ಗಂಧದ ಕಟ್ಟಿಗೆ ತಂದು ಕೃಷ್ಣ ಅವರಿಗೆ ಅಂತಿಮ ಗೌರವ ಸಲ್ಲಿಸಿದರು.
ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ಅಂತಿಮ ವಿಧಿ-ವಿಧಾನ ನೆರವೇರಿಸಲಾಗಿದ್ದು, ಅಂತ್ಯಕ್ರಿಯೆಗೆ 1 ಸಾವಿರ ಕೆಜಿ ಗಂಧದ ಕಟ್ಟಿಗೆಯನ್ನು ಬಳಸಲಾಯಿತು. ಅಂತ್ಯಕ್ರಿಯೆ ಸ್ಥಳದಲ್ಲಿ 15 ಜನ ವೇದ ಪಂಡಿತರಿಂದ ಮಂತ್ರ ಪಠಿಸಿ ಪಂಚಭೂತದ ರೀತಿಯಲ್ಲಿ ಅಂತಿಮ ಕಾರ್ಯ ನಡೆಸಲಾಯಿತು.
ಅಗ್ನಿ ಸಂಸ್ಕಾರದ ಮೂಲಕ ಪಂಚಗವ್ಯದಿಂದ ಅಂತ್ಯಕ್ರಿಯೆ ಸ್ಥಳದಲ್ಲಿ ಶುದ್ಧಿ ಕಾರ್ಯ ಮಾಡಲಾಗಿದ್ದು, ಕೃಷ್ಣ ಅವರ ದೋಷಗಳ ನಿವಾರಣೆಗೆ ಗರುಡ ಪೂಜಾ ಕಾರ್ಯ ವಿಧಾನ, ಶ್ರೀಗಂಧದ ಕಟ್ಟಿಗೆ ಸೇರಿ ಇತರೇ ಕಟ್ಟಿಗೆಗಳಲ್ಲಿ ಅಗ್ನಿ ಸ್ಪರ್ಶ ನೀಡಲಾಯಿತು.
ಇನ್ನು ಪಾರ್ಥೀವ ಶರೀರವನ್ನು ಬಾಳೆ ಎಲೆಯಿಂದ ಮುಚ್ಚಲಾಗಿತ್ತು. ಸೇವಂತಿ, ಗುಲಾಬಿ, ಚೆಂಡುಹೂವು ಸೇರಿದಂತೆ ನಾನಾ ಬಗೆಯ ಸುಮಾರು 300 ಕೆಜಿ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.
ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ರಾಜ್ಯದ ಸಚಿವರಾದ ಕೆ.ಹೆಚ್. ಮುನಿಯಪ್ಪ, ಕೃಷ್ಣ ಬೈರೇಗೌಡ, ಹೆಚ್.ಸಿ. ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಹೆಚ್.ಕೆ.ಪಾಟೀಲ್, ಚಲುವರಾಯಸ್ವಾಮಿ, ಸಚಿವೆ ಲಕ್ಷ್ಮಿ ಹೆಬ್ಬಾಳರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಆಡಳಿತ, ವಿಪಕ್ಷ ನಾಯಕರು ಗಣ್ಯಾತಿಗಣ್ಯ ರಾಜಕಾರಣಿಗಳು ಹಾಗೂ ವಿವಿಧ ಮಠಾಧೀಶರು ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ