*ನಾಯಿಗೆ ಬರುವ ಮೂರು ಕಾಯಿಲೆ MLC ರವಿಕುಮಾರ್ ಗೆ ಬಂದಿದೆ: ಪ್ರದೀಪ್ ಈಶ್ವರ್*

ಪ್ರಗತಿವಾಹಿನಿ ಸುದ್ದಿ: ಪದೇ ಪದೇ ಮಹಿಳೆಯರನ್ನು ಅವಮಾನ ಮಾಡುತ್ತಿರುವ ಬಿಜೆಪಿ ಎಂಎಲ್ ಸಿ ರವಿಕುಮಾರ್ ವಿರುದ್ಧ ತಮ್ಮದೇ ದಾಟಿಯಲ್ಲಿ ವಾಗ್ದಾಳಿ ನಡೆಸಿರುವ ಶಾಸಕ ಪ್ರದೀಪ್ ಈಶ್ವರ್, ರವಿಕುಮಾರ್ ಅವರಿಗೆ ನಾಯಿಗೆ ಬರುವ ಮೂರು ಕಾಯಿಲೆ ಬಂದಿದೆ ಎಂದಿದ್ದಾರೆ.
ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನ ಮಾಡಿದ್ದ ರವಿಕುಮಾರ್ ಹೇಳಿಕೆಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಅವರಿಗೆ ನಾಯಿಗೆ ಬರುವ ಮೂರು ಕಾಯಿಲೆ ಬಂದಿದೆ. ಮೂರೂ ಬಿಟ್ಟಿರುವ ರವಿಯಣ್ಣ ಮೂರು ಕಾಯಿಲೆ ವಾಸಿ ಮಾಡಿಕೊಳ್ಳಲಿ. ಮೊದಲ ಕಾಯಿಲೆ ಕ್ಯಾನೈನ್ ಡಿಸ್ಟಂಪರ್ ಎಂಬ ಕಾಯಿಲೆ. ಅದು ಸುಮ್ಮನೆ ಬೊಗಳುವ ಖಾಯಿಲೆ. ಎರಡನೇ ಕಾಯಿಲೆ ರೇಬಿಸ್. ಅದು ಕೂಡ ನಾಯಿಗೆ ಬರುವ ಕಾಯಿಲೆ. ಅದೊಂದು ರೀತಿಯಲ್ಲಿ ಮೆಂಟಲ್ ಕನ್ಫ್ಯೂಷನ್ ಆಗುವ ಕಾಯಿಲೆ, ಸುಮ್ ಸುಮ್ಮನೇ ಕೋಪ ಮಾಡಿಕೊಳ್ಳೋದು. ಮೂರನೇ ಕಾಯಿಲೆ ಪಾರೋ ವೈರಸ್. ಈ ವೈರಸ್‌ಗಳನ್ನು ಯಾರು ರವಿಕುಮಾರ್ ಗೆ ಅಂಟಿಸಿದ್ದಾರೋ ಗೊತ್ತಿಲ್ಲ. ಅವರಿಂದ ಇನ್ನೂ ಯಾರ್ಯಾರಿಗೆ ವೈರಸ್ ಹಬ್ಬುತ್ತದೆಯೋ ಗೊತ್ತಿಲ್ಲ. ಮೂರು ಬಿಟ್ಟವರಿಗೆ ಈ ಮೂರು ಕಾಯಿಲೆಯೇ ಬರೋದು ಎಂದು ಟೀಕಿಸಿದರು.
ಈ ಹಿಂದೆಯೂ ರವಿಕುಮಾರ್ ಮಹಿಳಾ ಅಧಿಕಾರಿಯೊಬ್ಬರನ್ನು ಅವಮಾನಿಸಿದ್ದರು. ಈಗ ಸಿಎಸ್ ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ರವಿಯಣ್ಣ ಮೊದಲು ನಿಮ್ಮ ಕಾಯಿಲೆ ವಾಸಿಮಾಡಿಕೊಳ್ಳಿ ಎಂದಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ರವಿಕುಮಾರ್ ಮಾತನಾಡಿರೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಯಾರೋ ಹೇಳಿದ್ದರು ರವಿಕುಮಾರ್‌ಗೆ ಕೋತಿ, ನಾಯಿ ಎಂದು ಮಾತಾಡೋದು ಸರಿಯಲ್ಲ ಎಂದು ನಾನು ಕೆಲವರಿಗೆ ಬುದ್ದಿ ಹೇಳಿದ್ದೇನೆ. ರವಿ ಅಣ್ಣ ಈ ಮೂರು ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಲಿ ಎಂದಿದ್ದಾರೆ.