
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಇತಿಹಾಸದಲ್ಲಿ ಸೋಮವಾರ ಹೊಸ ದಾಖಲೆ ಸೃಷ್ಟಿಯಾಯಿತು. ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್ ಸಾಗರೋಪಾದಿಯ ಜನಸ್ತೋಮದ ಬೆಂಬಲದೊಂದಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ನೋಡಿದ ಜನರು ಇದು ಕೇವಲ ನಾಮಪತ್ರ ಸಲ್ಲಿಕೆಯಲ್ಲ, ಇದು ವಿಜಯ ಯಾತ್ರೆ ಎಂದು ಬಣ್ಣಿಸುತ್ತಿದ್ದರು.

ಬೆಳ್ಳಂಬೆಳಗ್ಗೆ ಕುಟುಂಬ ಸಮೇತ ಸುಳೇಬಾವಿ ಮಹಾಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿ ಬಂದ ಮೃಣಾಲ ಹೆಬ್ಬಾಳ್ಕರ್, ನಂತರ ಮನೆಯಲ್ಲಿ ಗೋ ಪೂಜೆ ನೆರವೇರಿಸಿದರು. ಆ ವೇಳೆಗೆ ಮನೆಗೆ ಸಾಲು ಸಾಲು ಮಠಾಧೀಶರು ಆಗಮಿಸಿ ಆಶಿರ್ವದಿಸಿದರು. ಮೃಣಾಲ ಹೆಬ್ಬಾಳ್ಕರ್ ಮತ್ತು ಪತ್ನಿ ಡಾ.ಹಿತಾ ಮನೆಗೆ ಬಂದ ಸ್ವಾಮೀಜಿಗಳ ಪಾದಪೂಜೆ ಮಾಡಿದರು.
ತದನಂತರ ಹಿಂಡಲಗಾ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಕುಟುಂಬ ಸದಸ್ಯರು, ಅಪಾರ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.

ಅಲ್ಲಿಂದ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಲ್ಕು ಸೆಟ್ ನಾಮಪತ್ರ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲೆಯ ಶಾಸಕರು, ಮುಖಡರು ಸಾಥ್ ನೀಡಿದರು.
ಇದಾದ ಬಳಿಕ ನಗರದ ಸಿಪಿಎಡ್ ಮೈದಾನದಿಂದ ನಡೆದ ಮೆರವಣಿಗೆ ಕಣ್ಣು ಕೋರೈಸುವಂತಿತ್ತು. ಸುಮಾರು ಒಂದೂವರೆ ಕಿಮೀ ರಸ್ತೆಯುದ್ದಕ್ಕೂ ಜನಸಾಗರವೇ ತುಂಬಿತ್ತು. ವೈವಿದ್ಯಮಯ ಕಲಾತಂಡಗಳು, ಅಪಾರ ಸಂಖ್ಯೆಯಲ್ಲಿ ಮಹಿಳೆಯರು, ಯುವಕರು, ವಯೋವೃದ್ಧರು ಮೆರವಣಿಗೆಯಲ್ಲಿ ಭಾಗವಹಿಸಿ, ಮೃಣಾಲ ಹೆಬ್ಬಾಳ್ಕರ್ ಅವರಿಗೆ ಶುಭ ಕೋರಿದರು. ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲೆಯ ಶಾಸಕರು, ಮುಖಡರು ಮೆರವಣಿಗೆಯಲ್ಲಿ ಸಹ ಭಾಗವಹಿಸಿದ್ದರು.

ಮೆರವಣಿಗೆ ಅಂತ್ಯದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕಾರ್ಯಕರ್ತರ ಉತ್ಸಾಹ ನೋಡಿದರೆ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಖಚಿತ ಎಂದರು. ರ್ಯಾಲಿ ಈಗ ಮುಕ್ತಾಯವಾಗಿದೆ, ಆದರೆ ವಿಜಯ ಯಾತ್ರೆ ಇಲ್ಲಿಂದ ಆರಂಭವಾಗಿದೆ ಎಂದು ಹೇಳಿದರು.
ಒಟ್ಟಾರೆ, ವಿರೋಧಿಗಳು ಬೆಚ್ಚಿ ಬೀಳುವಂತೆ ಅದ್ಧೂರಿಯಾಗಿ ನಡೆದ ಮೆರವಣಿಗೆ, ಬೆಳಗಾವಿ ಕಾಂಗ್ರೆಸ್ ಮಯವೆನ್ನುವಂತೆ ಮಾಡಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ