Karnataka NewsLatest

*ಮೈಸೂರು ದಸರಾ: ದೀಪಾಲಂಕಾರ 10-12 ದಿನಗಳ ಕಾಲ ವಿಸ್ತರಣೆ*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ವಿದ್ಯುತ್ ದೀಪಾಲಂಕಾರವನ್ನು 10-12 ದಿನಗಳವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಡಿಸಿಎಂ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ನಾನು ಇಂಧನ ಸಚಿವನಾಗಿದ್ದಾಗ ಮಾಡಿದ್ದಕ್ಕಿಂತ ಈ ಬಾರಿ ಅತ್ಯುತ್ತಮವಾಗಿ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ ಒಂದೂವರೆ ಸಾವಿರ ಡ್ರೋನ್ ಗಳ ಶೋ ವ್ಯವಸ್ಥೆ ಮಾಡಲಾಗಿದೆ. ಸಾಂಸ್ಕೃತಿಕ ನಾಡಿನಲ್ಲಿ ನಮ್ಮ ಜನ ನಮ್ಮ ಸಂಸ್ಕೃತಿಯನ್ನು ಕಣ್ತುಂಬಿಕೊಂಡು ಆನಂದಿಸಲಿ ಎಂದು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಹತ್ತು ದಿನಗಳಲ್ಲಿ ಇಳಯರಾಜ, ಎ.ಆರ್ ರೆಹಮಾನ್ ಅವರ ಕಾರ್ಯಕ್ರಮಗಳಿಗೆ ಎರಡೂವರೆ ಲಕ್ಷ ಜನ ಸೇರಿದ್ದರು. ಈ ಸಂದರ್ಭದಲ್ಲಿ ನಾಡಿನ ಜನ ನೆಮ್ಮದಿ, ಶಾಂತಿಯಿಂದ ಬದುಕಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.

ನಾಡಿನ ವಿವಿಧ ಭಾಗಗಳಲ್ಲೂ ದಸರಾ ಕಾರ್ಯಕ್ರಮವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಮಡಿಕೇರಿಯಲ್ಲಿ ಮೈಸೂರಿಗಿಂತಲೂ ಹೆಚ್ಚಿನ ಹಣ ವ್ಯಯ ಮಾಡಿ ಸ್ತಬ್ಧಚಿತ್ರಗಳನ್ನು ಮಾಡಿದ್ದಾರೆ. ಇದನ್ನು ನೋಡಿ ನನಗೆ ಅಚ್ಚರಿಯಾಯಿತು ಎಂದು ತಿಳಿಸಿದರು.

ಮೈಸೂರು ದಸರಾ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ನಾಡದೇವಿ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಾಡಿನಲ್ಲಿ ಉತ್ತಮ ಮಳೆಯಾಗಿದೆ. ನೀರಿಗಾಗಿ ಜನರು ಹಾಗೂ ತಮಿಳುನಾಡು ವಿರುದ್ಧದ ಹೋರಾಟ ನಿಂತಿದೆ. ರಾಜ್ಯದ ಎಲ್ಲಾ ಅಣೆಕಟ್ಟುಗಳು ತುಂಬಿವೆ. ತಾಯಿ ಆಶೀರ್ವಾದದಿಂದ ನಾವು ಕೇವಲ ಆರು ದಿನಗಳಲ್ಲಿ ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿ ಮಾಡಿದ್ದೇವೆ. ಮತ್ತೆ ಅಣೆಕಟ್ಟು ತುಂಬಿ ಬಾಗಿನ ಅರ್ಪಣೆ ಮಾಡಿದ್ದೇವೆ ಎಂದು ಹೇಳಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button