
ಪ್ರಗತಿವಾಹಿನಿ ಸುದ್ದಿ, ದೊಡವಾಡ (ಬೈಲಹೊಂಗಲ) – ಗ್ರಾಮದ ಕೊಪ್ಪದ ಅಗಸಿ ಬಳಿ ಇರುವ ಶ್ರೀದೇವಿ ವೈನ್ ಶಾಪ್ಗೆ ಗ್ರಾಮದ ಯುವಕರಿಬ್ಬರು ಮದ್ಯ ಖರೀದಿಸಲು ಹೋದ ವೇಳೆ ಎಮ್ಆರ್ಪಿ ದರದಲ್ಲಿ ಮಾರಾಟ ಮಾಡಿ ಎಂದು ಕೇಳಿದ್ದಕ್ಕೆ ವೈನ್ ಶಾಪ್ ಸಿಬ್ಬಂದಿ ಅವರನ್ನು ಹಿಗ್ಗಾ ಮುಗ್ಗಾ ಥಳಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಗ್ರಾಮದ ನಾಗಪ್ಪ ಬಾರಿಗಿಡದ ಹಾಗೂ ಧರೆಪ್ಪ ಕುರುಬರ ವೈನ್ ಶಾಪ್ ಸಿಬ್ಬಂದಿಯಿಂದ ಹಲ್ಲೆಗೊಳಗಾದವರು. ಇದರಲ್ಲಿ ನಾಗಪ್ಪ ಬಾರಿಗಿಡದನ ಸ್ಥಿತಿ ಗಂಭೀರವಾಗಿದ್ದು ದೊಡವಾಡ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಂಬುಲೆನ್ಸ ಮೂಲಕ ಬೈಲಹೊಂಗಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ನಡೆದ ಸುದ್ದಿ ಗ್ರಾಮದಲ್ಲಿ ತಿಳಿಯುತ್ತಿದ್ದಂತೆ ಹಲ್ಲೆಗೊಳಗಾದ ಯುಕನ ಸಂಬಂಧಿಕರು ಗ್ರಾಮಸ್ಥರು ತಂಡೋಪ ತಂಡವಾಗಿ ಶ್ರೀದೇವಿ ವೈನ್ಸಗೆ ಮುತ್ತಿಗೆ ಹಾಕಿ ಹಲ್ಲೆ ನಡೆಸಿದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೋಲೀಸರು ಬಾರ್ ಬಳಿ ಜಮಾಯಿಸಿದ್ದ ನೂರಾರು ಜನರನ್ನು ಚದುರಿಸಿ ಬಾರ್ ಸಿಬ್ಬಂದಿಯನ್ನು ಪೋಲೀಸ್ ಠಾಣೆಗೆ ಕರೆದೊಯ್ದರು.
ಬಳಿಕ ಸಾರ್ವಜನಿಕರು ಠಾಣೆ ಬಳಿಯೂ ಜಮಾಯಿಸಿ ಹಲ್ಲೆ ನಡೆಸಿದವರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕೆಂದರು. ಗ್ರಾಮಸ್ಥರ ಪರವಾಗಿ ತಾಪಂ ಸದಸ್ಯ ಸಂಗಯ್ಯ ದಾಭಿಮಠ, ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ಜ್ಞಾನೆಶ್ವರ ಕಾಳಿ ಮತ್ತಿತರರು ಮಾತನಾಡಿ ಎಮ್ಆರ್ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಅವಕಾಶ ನೀಡಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುವವರ ಮೇಲೆಯೂ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಇಲ್ಲದೆ ಹೋದರೆ ಬಾರ್ ಮೇಲೆ ಸಾರ್ವಜನಿಕರೇ ದಾಳಿ ಮಾಡಿ ಸಂಪೂರ್ಣ ಬಂದ್ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಾವು ಮದ್ಯ ಪ್ರಿಯರು. ಹೀಗಾಗಿ ಮಾರಾಟ ಆರಂಭವಾದಾಗಿನಿಂದ ಎಮ್ ಆರ್ಪಿ ದರದಲ್ಲಿ ಮಾರಾಟ ಮಾಡಿ ಎಂದು ವಿನಂತಿಸಿಕೊಂಡಿದ್ದಕ್ಕೆ ನನ್ನ ಮೇಲೆ ಮತ್ತು ನಮ್ಮ ಮಾವ ನಾಗಪ್ಪ ಬಾರಿಗಿಡದ ಮೇಲೆ ಬಾರ್ ಸಿಬ್ಬಂದಿ ರಾಡ್ ನಿಂದ ಹಲ್ಲೆ ನಡೆಸಿದರು.
-ಧರೆಪ್ಪ ಕುರುಬರ, ಹಲ್ಲೆಗೊಳಗಾದವ