Kannada NewsKarnataka News

ಚಿಂಚಲಿಯ ಮಾಯಕ್ಕಾ ದೇವಿಯ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ

ಪ್ರಗತಿವಾಹಿನಿ ಸುದ್ದಿ, ಚಿಂಚಲಿ –   ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಪ್ರಸಿದ್ಧ ಶಕ್ತಿಕೇಂದ್ರಗಳಲ್ಲಿ ಒಂದಾಗಿರುವ ರಾಯಬಾಗ ತಾಲೂಕಿನ ಚಿಂಚಲಿಯ ಮಾಯಕ್ಕಾ ದೇವಿಯ ದೇವಸ್ಥಾನದಲ್ಲಿ ಭಾನುವಾರ ಸೆ.29 ರಂದು ಘಟಸ್ಥಾಪನೆ ಮಾಡುವುದರ ಮೂಲಕ ಪ್ರಾರಂಭವಾಗುತ್ತದೆ.

ಸತತ ಒಂಭತ್ತು ದಿನಗಳ ಕಾಲ ನವರಾತ್ರಿ ಉತ್ಸವವು,  ಆಯುಧ ಪೂಜೆ ಹಾಗೂ ರಾತ್ರಿವಿಡಿ ಜಾಗರಣೆ ಮಾಡಿ,  ಸಕಲ ವಾದ್ಯಮೇಳಗಳೊಂದಿಗೆ ಭಕ್ತರು ದಿವಟಿಗೆ ಹಿಡಿದು, ಸಿಡಿಮದ್ದು ಪಟಾಕಿ ಸಿಡಿಸುತ್ತಾ, ಭಕ್ತ ಸಮೂಹ ಜಾಗೃತ ಸ್ಥಳಗಳಿಗೆ ಭೇಟಿ ಮಾಯಕ್ಕಾ ದೇವಿ ನಾವಾನ್ ಚಾಂಗ್ ಭಲೋ ಎನ್ನುತ ನವರಾತ್ರಿ ಉತ್ಸವವನ್ನು ವೈವಿಧ್ಯಮಯವಾಗಿ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತದೆ.

ಐತಿಹಾಸಿಕ ಹಾಗೂ ಪೌರಾಣಿಕ ಕಥೆಗಳ ಜಾಡನ್ನು ಹೊಂದಿರುವ ಈ ದೇವಿಯು ದೈತ್ಯ ರಾಕ್ಷಸರನ್ನು ಸಂಹಾರ ಮಾಡುವ ಶಕ್ತಿಯನ್ನು ಕಠಿಣ ತಪಸ್ಸಿನಿಂದ ಸಾಧಿಸಿ, ಈ ಪ್ರದೇಶದಲ್ಲಿನ ಅಸಂಖ್ಯ ಭಕ್ತ ಸಮೂಹವನ್ನು ಹೊಂದಿರುವ ದೇವಿಯಾಗಿದ್ದು, ಈ ನಿಟ್ಟಿನಲ್ಲಿ ವಿಜಯ ದಶಮಿ ಹಬ್ಬವನ್ನು ಒಂಭತ್ತು ದಿನಗಳ ಕಾಲ ಪ್ರತಿದಿನ ದೇವಿಯನ್ನು ವಿವಿಧ ರೂಪಗಳಲ್ಲಿ ಅಲಂಕರಿಸಿ ಪೂಜೆ ನೆರವೇರಿಸುವ ವಿಧಿಗಳು ಸಂಪ್ರದಾಯ ಬದ್ಧವಾಗಿ ಜರುಗುತ್ತವೆ.

ದೇವಿಯನ್ನು ಈ ರೀತಿ ಭಕ್ತಿ ಪೂರ್ವಕವಾಗಿ ಆರಾಧಿಸುವದರಿಂದ ದೇವಿಯು ಸಂಕಷ್ಟ ಪರಿಹರಿಸಿ ಸುಖ ಸಮೃದ್ಧಿ ಕರುಣಿಸುತ್ತಾಳೆಂಬ ಗಾಢವಾದ ನಂಬಿಕೆ ಭಕ್ತ ಸಮೂಹದಲ್ಲಿದೆ. ನವರಾತ್ರಿ ಉತ್ಸವದ ನಿಮಿತ್ಯ ದೇವಿಗೆ ಮುಂಜಾನೆ ಹಾಗೂ ಸಂಜೆ ವಿಶೇಷ ಪೂಜೆಯ ಕುದುರೆ, ನವಿಲು, ಹುಲಿ, ಸಿಂಹ, ರಾಕ್ಷಸನನ್ನು ಸಂಹಾರ ಮಾಡುತ್ತಿರುವ ದೇವಿಯ ಭಂಗಿ ಹೀಗೆ ದೇವಿಯ ವಾಹನಗಳಾಗಿ ವೈಶಿಷ್ಟ್ಯಕರ ಪದ್ಧತಿಯಲ್ಲಿ ನಡೆಯುವ ಈ ಪೂಜಾ ಕಾರ್ಯಕ್ರಮವನ್ನು ನೋಡಲು ದೇವಸ್ಥಾನಕ್ಕೆ ಅಪಾರ ಪ್ರಮಾಣದ ಭಕ್ತರ ದಂಡು ದಿನಂಪ್ರತಿ ಜಮಾಯಿಸುತ್ತದೆ.

ವೈಭವದ ಪಲ್ಲಕ್ಕಿ ಮೆರವಣಿಗೆ:

ಈ ದಸರಾ ಉತ್ಸವದ ಅಂಗವಾಗಿ ಕೊನೆಯ ದಿನ ಮಾಯಾಕ್ಕಾ ದೇವಿಯ ಪಾಲಕಿ ಹಾಗೂ ದೇವಿಯ ಮುಖ್ಯ ವಾಹನವಾದ ಕುದುರೆಯನ್ನು ಗ್ರಾಮದಲ್ಲಿರುವ ದೇವಿಯ ವಿವಿಧ ಜಾಗೃತ ಸ್ಥಳಗಳಲ್ಲಿ ಸುಮಾರು ೧೦ ಕಿ.ಮೀ ವರೆಗೆ ಆಕರ್ಷಕ ಮೆರವಣಿಗೆ ಮಾಡಲಾಗುತ್ತದೆ.

ಜಾಗೃತ ಸ್ಥಳಗಳು: ಬಂಗಾರ ಗಿಡ, ಖ್ವಾರಿಕೊಪ್ಪ, ಕರಗುತ್ತಿ, ಎಡಿ ಮಾಯವ್ವ, ಗುಡ್ಡತಾಯಿ, ಗುಡತಾಯಿ ಮೊದಲಾದ ಸ್ಥಳಗಳಲ್ಲಿ ಗ್ರಾಮ ಸೇರಿದಂತೆ ಸುತ್ತಲಿನ ಸಾವಿರಾರು ಭಕ್ತರ ಮಧ್ಯದಲ್ಲಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಕಲ ವಾದ್ಯ ಮೇಳದೊಂದಿಗೆ, ಪಟಾಕಿ ಸಿಡಿಮದ್ದು ಹಾಗೂ ಸುರಬಾನುಗಳನ್ನು ಹಾರಿಸುತ್ತಾ ಬೆಳಕಿನ ದಿವಟಿಗೆಯನ್ನು ಹಿಡಿದು ಓಡುತ್ತಾ ಪ್ರದಕ್ಷಿಣೆ ಹಾಕುತ್ತಾ ಮರಳಿ ದೇವಸ್ಥಾನಕ್ಕೆ ಬರುವ ದೃಶ್ಯ ನಯನ ಮನೋಹರವಾಗಿರುತ್ತದೆ.

ಈ ಒಂದು ನವರಾತ್ರಿ ಉತ್ಸವದ ಮೆರವಣಿಗೆಯಲ್ಲಿ ಹಳ್ಳಿಗಳಿಂದ ವಿವಿಧ ಜಾನಪದ ರೂಪಕಗಳು ಮತ್ತು ವಾದ್ಯ ಮೇಳಗಳು ಸಾಲು ಸಾಲಾಗಿ ಸೇರುತ್ತವೆ.

ಭಕ್ತಾಧಿಗಳ ಆಗ್ರಹ: ರಾಜ್ಯಸರಕಾರ ಮೈಸೂರು ದಸರೆಗೆ ಕೋಟ್ಯಾಂತರ ಹಣ ವ್ಯಯಿಸುತ್ತಿದೆ. ಆದರೆ ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿನ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿಯ ಮಾಯಾಕ್ಕಾ ದೇವಿಯ ಈ ನವರಾತ್ರಿ ಉತ್ಸವಕ್ಕೂ ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಪ್ರಾಮುಖ್ಯತೆ ನೀಡಬೇಕೆಂದು ಈ ಭಾಗದ ಭಕ್ತರ ಆಗ್ರಹವಾಗಿದೆ.

ದೇವಿಯ ಈ ಮಹತ್ವದ ದಸರಾ ಉತ್ಸವದಲ್ಲಿ ಸರಕಾರ ಹಾಗೂ ಸಂಬಂಧಿಸಿದ ಇಲಾಖೆ ವಿಶೇಷ ಅನುದಾನವನ್ನು ನೀಡಬೇಕು. ಗಡಿಯ ಗ್ರಾಮೀಣ ಭಾಗದಲ್ಲಿ ನಡೆಯುವ ಈ ನವರಾತ್ರಿ ಉತ್ಸವಕ್ಕೂ ಪ್ರೋತ್ಸಾಹ ನೀಡಬೇಕೆಂದು ಭಕ್ತರ ಒಕ್ಕೂರಲಿನ ಬೇಡಿಕೆಯಾಗಿದೆ.

ಸಾವಳಗಿಯ ಸಿದ್ಧ ಸಂಸ್ಥಾನಮಠದಲ್ಲಿ ದಸರಾ ಉತ್ಸವ

ನವರಾತ್ರಿ ಉತ್ಸವಕ್ಕೆ ಸವದತ್ತಿ ಯಲ್ಲಮ್ಮನ ಗುಡ್ಡ ಸಜ್ಜು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button