ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸರ್ಕಾರದ ಆದೇಶದಂತೆ ವಿವಿಧ ಇಲಾಖೆ ಹಾಗೂ ನಿಗಮಗಳ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದರ ಜತೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ತಿಳಿಸಿದ್ದಾರೆ.
ಖಾಸಗಿ ಕಟ್ಟಡಗಳಲ್ಲಿ ಬಾಡಿಗೆ ಇರುವ ಸರ್ಕಾರದ ವಿವಿಧ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವ ಕುರಿತು ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಗುರುವಾರ (ಜು.೨) ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಂಬಂಧಿಸಿದ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಹೆಮ್ಮೆಯ ಪ್ರತಿಕ. ಅಧಿವೇಶನ ಹೊರತುಪಡಿಸಿ ಸುವರ್ಣ ವಿಧಾನಸೌಧದ ಬಳಕೆ ಆಗುತ್ತಿರಲಿಲ್ಲ. ಆದರೆ ಸರ್ಕಾರ ಬಾಡಿಗೆ ಕಟ್ಟಡದಲ್ಲಿ ಇರುವ ೨೪ ಕಚೇರಿಗಳನ್ನು ಸ್ಥಳಾಂತರ ಮಾಡಲು ಆದೇಶ ನೀಡಿದ್ದು, ಕಚೇರಿಗಳಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಜಿಲ್ಲಾಡಳಿತದ ವತಿಯಿಂದ ಮಾಡಿ ಕೊಡಲಾಗುವುದು ಎಂದು ಹೇಳಿದರು.
ಸಾರಿಗೆ ಸಂಸ್ಥೆಯು ಕಚೇರಿಗಳ ಸಮಯಕ್ಕೆ ಅನುಗುಣವಾಗಿ ಬಸ್ ಗಳ ವ್ಯವಸ್ಥೆ ಮಾಡಬೇಕು. ಒಂದು ಸಲ ಕಚೇರಿಗಳ ಸ್ಥಳಾಂತರ ಆದ ಬಳಿಕ ಎಲ್ಲರೂ ವಾತಾವರಣಕ್ಕೆ ಹೊಂದಿಕೊಂಡು ಕೆಲಸ ನಿರ್ವಹಿಸಬೇಕು. ಕಚೇರಿಗಳ ಸ್ಥಳಾಂತರವಾದ ಪ್ರಾರಂಭದಲ್ಲಿ ಕಚೇರಿಗಳಿಗೆ ಬೇಕಾಗುವ ಕುರ್ಚಿ, ಟೇಬಲ್‌ಗಳ ಖರೀದಿಗೆ ಅವಕಾಶಗಳು ಇಲ್ಲ. ಹಾಗಾಗಿ ಕಚೇರಿಗಳಲ್ಲಿ ಈಗಾಗಲೇ ಇರುವ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು.
ಲೋಕೋಪಯೋಗಿ ಇಲಾಖೆಯವರು ಸುಸಜ್ಜಿತ ಕ್ಯಾಂಟಿನ್ ವ್ಯವಸ್ಥೆ ಮಾಡಿಕೊಡಬೇಕು. ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ ಹೆಲ್ತ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗುತ್ತದೆ. ಈಗಾಗಲೇ ಅಂಚೆ ಕಚೇರಿ ವ್ಯವಸ್ಥೆ ಸುವರ್ಣ ವಿಧಾನಸೌದದಲ್ಲಿದ್ದು, ಬ್ಯಾಂಕ್ ಹಾಗೂ ಎ.ಟಿ.ಎಂ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದರು.
ಎಡಿಸಿ ವಿಚಿತ್ರ ಹೇಳಿಕೆ
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮಾತನಾಡಿ, ಸುವರ್ಣ ವಿಧಾನಸೌದ ನಿರ್ಮಾಣ ಆದಾಗಿನಿಂದ ಸಾಕಷ್ಟು ಸಂಘಟನೆಗಳು ಸುವರ್ಣ ವಿಧಾನಸೌದಕ್ಕೆ ಕಚೇರಿಗಳ ಸ್ಥಳಾಂತರ ಮಾಡಬೇಕು ಎಂದು ಒತ್ತಾಯ ಮಾಡಿದರು. ಅವರ ಅಭಿಪ್ರಾಯದಂತೆ ೨೪ ಕಚೇರಿಗಳ ಸ್ಥಳಾಂತರಕ್ಕೆ ಸರ್ಕಾರದಿಂದ ಆದೇಶ ಬಂದಿದೆ ಎಂದು ಹೇಳಿದರು.
(ವಿವಿಧ ಸಂಘಟನೆಗಳು, ಈ ಭಾಗದ ಜನರು ಹೇಳಿದ್ದು ಬೆಂಗಳೂರಿನಲ್ಲಿರುವ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದೇ ಹೊರತು ಬೆಳಗಾವಿಯಲ್ಲಿರುವ ಕಚೇರಿಗಳನ್ನಲ್ಲ ಎನ್ನುವುದು ಎಡಿಸಿ ಅವರ ಗಮನದಲ್ಲಿದ್ದಂತಿಲ್ಲ. ಈಗ ಮಾಡುತ್ತಿರುವುದು ವೆಚ್ಚ ಕಡಿತಕ್ಕೇ ವಿನಃ ಜನರು ಹೇಳಿದ್ದಾರೆಂದಲ್ಲ. ಅನಗತ್ಯ ವೆಚ್ಚವಾದರೂ ಉಳಿತಾಯವಾಗುತ್ತಲ್ಲ ಎಂದು ಜನ ಸುಮ್ಮನಿದ್ದಾರೆ.)
ಕಚೇರಿಗಳು ಸ್ಥಳಾಂತರಗೊಂಡ ಬಳಿಕ ಯಾವ ಇಲಾಖೆಗೆ ಯಾವ ಸೌಲಭ್ಯ ನೀಡಬೇಕು ಎಂಬುದನ್ನು ಈಗಾಗಲೇ ಚರ್ಚಿಸಲಾಗಿದೆ. ಕಚೇರಿಗಳನ್ನು ನೀಡಿದ ಬಳಿಕ ಕುರ್ಚಿ, ಟೇಬಲ್ ಮುಂತಾದ ವ್ಯವಸ್ಥೆಯನ್ನು ಸಂಬಂಧಿಸಿದ ಇಲಾಖೆಯವರೇ ಮಾಡಿಕೊಳ್ಳಬೇಕು.
ಕಚೇರಿಗಳನ್ನು ನೀಡಿದ ಬಳಿಕ ಅದರ ನಿರ್ವಹಣೆಯು ವ್ಯವಸ್ಥಿತವಾಗಿ ಮಾಡಿಕೊಳ್ಳಬೇಕು. ಕಚೇರಿಗಳ ನಿರ್ವಹಣೆ ಇಲ್ಲದಿದ್ದರೆ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಹೇಳಿದರು.
ಈ ಸಭೆಯಲ್ಲಿ ಲೋಕೋಪಯೋಗಿ, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಮಾಹಿತಿಗೆ – ಕ್ಲಿಕ್ ಮಾಡಿ
ಬಾಡಿಗೆ ಕಟ್ಟಡದಲ್ಲಿರುವ 24 ಕಚೇರಿಗಳು ವಾರದೊಳಗೆ ಸುವರ್ಣ ವಿಧಾನಸೌಧಕ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ