ಹೀಗಿರಲಿ ನಿಮ್ಮ ಹೊಸ ವರ್ಷದ ಪ್ರತಿಜ್ಞೆ…

 ವಿಶ್ವಾಸ ಸೋಹೋನಿ, ಬ್ರಹ್ಮಾಕುಮಾರೀಸ್ ಮೀಡಿಯಾ ವಿಂಗ್
ಹೊಸ ವರ್ಷ ಬರುವುದು, ಹಳೆಯ ವರ್ಷ ಹೋಗುವುದು ಸೃಷ್ಟಿಯ ನಿಯಮವಾಗಿದೆ. ಹಳೆಯ ವರ್ಷದ ಅನೇಕ ಘಟನಾವಳಿಗಳನ್ನು ಮರೆತು ನಾವು ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುತ್ತೇವೆ. ಹೊಸ ವರ್ಷದ ಮೊದಲನೆಯ ದಿನ ಅದೇ ಸೂರ್ಯ, ಚಂದಿರ ತಾರೆಗಳು, ಅದೇ ಭೂಮಿ, ಆಕಾಶ, ಜಲ, ವಾಯು ಮುಂತಾದ ಪಂಚತತ್ವಗಳು ತಮ್ಮ ಸೇವೆಯಲ್ಲಿ ನಿರತವಾಗಿರುತ್ತವೆ. ಕೇವಲ ಮಾನವನಿಗೆ ಮಾತ್ರ ಹೊಸ ವರ್ಷದ ಸಂಭ್ರಮ. ಕೆಲವರು ಕುಡಿದು, ಕುಣಿದು, ಕುಪ್ಪಳಿಸಿ ಸಂಭ್ರಮದಿಂದ ಆಚರಿಸುತ್ತಾರೆ. ಈ ವರ್ಷ ಕರೋನದಿಂದ ಸರಕಾರ ಹಲವು ನಿರ್ಭಂಧ ಹೇರಿದೆ. ಹಲವರು ಭಯ-ಭಕ್ತಿ ಭಾವನೆಗಳಿಂದ ಆಚರಿಸುವುದು ಪರಿಪಾಠವಾಗಿದೆ. ಅವರವರ ಭಾವಕ್ಕೆ      ಅವರವರ ಭಕುತಿಗೆ ತಕ್ಕಂತೆ ದೇಶ ವಿದೇಶಗಳಲ್ಲಿ ಹೊಸ ವರ್ಷದ ಆಚರಣೆ ನಡೆಯುತ್ತದೆ.
ಮಾನವ ಸರ್ವಕಾಲಕ್ಕೂ ಹೊಸದನ್ನು ಬಯಸುತ್ತಾನೆ. ಪ್ರತಿಯೊಬ್ಬನಿಗೂ ನವನವೀನತೆ ತುಂಬ ಇಷ್ಟ. ಅದು ಎಷ್ಟು ಕಷ್ಟವಾದರೂ ಅದನ್ನು ಪಡೆಯುವ ಹಂಬಲ ಅವನಿಗೆ ಇರುತ್ತದೆ. ನಿತ್ಯ ಹೊಸ ರುಚಿಯ ಊಟ ತಿಂಡಿ ತೀರ್ಥ, ನವನವೀನ ಪ್ರಕಾರದ ವಸ್ತ್ರಗಳು, ವಸ್ತುಗಳು, ಹೊಸಸ್ಥಳಕ್ಕೆ  ಪಯಣ, ಹೊಸ ಮನೆ, ಹೊಸ ಸಂಬಂಧಗಳ ಹುಡುಕಾಟದಲ್ಲಿ ವರ್ಷವು ಕಳೆದು ಹೊಗುತ್ತದೆ. ಹೀಗೆ ಮನುಷ್ಯಾತ್ಮನಿಗೆ ಮಾತ್ರವಲ್ಲ, ಪರಮಾತ್ಮ ಮತ್ತು ಪ್ರಕೃತಿಗೂ ನವೀನತೆ, ಹೊಸತನ ಪ್ರಿಯವಾಗಿದೆ.  ಪ್ರಕೃತಿ ದಿನನಿತ್ಯ ತನ್ನ ಹೊಸ ರೂಪವನ್ನು ತೋರಿಸುತ್ತದೆ. ಹಗಲು -ಇರುಳು, ಅಮಾವಾಸ್ಯೆ, ಹುಣ್ಣಿಮೆ, ಚಳಿಗಾಲ, ಮಳೆಗಾಲ, ಬೇಸಿಗೆ – ಈ ರೀತಿ ದಿನನಿತ್ಯ ಬದಲಾವಣೆಯನ್ನು ನಾವು ಕಾಣುತ್ತೇವೆ. ಪಕೃತಿಯ ವಿಕೋಪಗಳಾದ ಭೂಕಂಪ, ಅನಾವೃಷ್ಟಿ, ಅತಿವೃಷ್ಟಿ, ಬಿರುಗಾಳಿ, ಸುನಾಮಿ, ಅನೇಕ ಭಯಾನಕ ಕಾಯಿಲೆಗಳಾದ ಏಡ್ಸ್, ಹಕ್ಕಿ ಜ್ವರ ಮತ್ತು ಕರೋನಾದಂತಹ ಸಾಂಕ್ರಮಿಕ ರೋಗಗಳ ತಾಂಡವವನ್ನು ನಾವು ನೊಡುತ್ತಿದ್ದೇವೆ. ಭೂಮಿ ತಾಯಿಗೆ ಭಾರ ಜಾಸ್ತಿ ಆಗಿದೆ. ಪ್ರಕೃತಿ ಕಲುಷಿತವಾಗಿ ಪಂಚ ವಿಕಾರಗಳ ಅಟ್ಟಹಾಸ ಗಗನಕ್ಕೆ ಮುಟ್ಟಿದೆ.  ಭಗವಂತನಿಗೆ ತನ್ನ ಅತಿಪ್ರಿಯವಾಗಿರುವ ಮಕ್ಕಳ ಕಷ್ಟ ನೋಡಲು  ಆಗುತ್ತಿಲ್ಲ. ಪರಮಾತ್ಮನು ತನ್ನ ಮನೆ ಪರಮಧಾಮ ವನ್ನು ಬಿಟ್ಟು ಈ ಧರೆಗೆ ಬಂದಿದ್ದಾನೆ. ಗೀತೆಯಲ್ಲಿ ಹೇಳಿರುವಂತೆ ಅವನ ಅವತರಣೆ ಕಲಿಯುಗದ ಅಂತಿಮ ಸಮಯದಲ್ಲಿ ಆಗಿದೆ. ಅವನು ಹೊಸ ಜಗತ್ತು ಅಂದರೆ ಸ್ವರ್ಗದ ರಾಜ್ಯವನ್ನು ಮಕ್ಕಳಿಗೆ ಕೊಡಲು ಬಂದ್ದಿದ್ದಾನೆ. ಹೀಗೆ ಈ ಸೃಷ್ಟಿ ನಾಟಕದಲ್ಲಿ ಪ್ರಕೃತಿ, ಪುರುಷ ಮತ್ತು ಪರಮಾತ್ಮನ ಪಾತ್ರ ಅತಿ ವಿಚಿತ್ರವಾದರೂ ಸತ್ಯವಾಗಿದೆ.
ಪ್ರಕೃತಿ ತಮೋಪ್ರಧಾನವಾಗಿರುವುದರಿಂದ ಹೊಸ ವರ್ಷದಲ್ಲಿ ಹೊಸ ಕಾಯಿಲೆಗಳು ಬರುವುದು ಖಚಿತವಾಗಿದೆ. ನಮ್ಮ ದಿನದ ಆರಂಭ ಶುಭವಾದರೆ, ಇಡೀ ದಿನವು ಸುಖವಾಗಿರುತ್ತದೆ. ಹಾಗೆಯೇ ಹೊಸ ವರ್ಷದ ಆರಂಭ ಸುಖಕರವಾದರೆ ಇಡೀ ವರ್ಷ ಒಳ್ಳೆಯದೇ ಆಗುತ್ತದೆ. ಮನೋವಿಜ್ಞಾನಿಗಳ ಪ್ರಕಾರ ಯಾವುದೇ ವಿಚಾರವನ್ನು ಬಾರಿ-ಬಾರಿಗೂ ಮಾಡಿದರೆ ಅದರ ಶಕ್ತಿ ಹೆಚ್ಚಾಗುತ್ತದೆ. ಪ್ರತಿಯೊಂದು ಸಂಕಲ್ಪದಲ್ಲಿ ಅಗಾಧ ಶಕ್ತಿ ಅಡಗಿದೆ. ಶುದ್ಧ ಸಂಕಲ್ಪಗಳಿಂದ ಸಕಾರಾತ್ಮಕ ಶಕ್ತಿ ಮತ್ತು ಅಶುದ್ಧ ಸಂಕಲ್ಪಗಳಿಂದ ನಕಾರತ್ಮಕ ಶಕ್ತಿ ಉತ್ಪನ್ನವಾಗುತ್ತದೆ.  ಆದ್ದರಿಂದ ನಕಾರಾತ್ನಕ ವಿಚಾರಗಳನ್ನು ಬಿಟ್ಟು, ಆರೋಗ್ಯವಂತರಾಗಲು ಸುವಿಚಾರ, ಧ್ಯಾನ, ಯೋಗಾಸನ, ವ್ಯಾಯಾಮ, ಶುದ್ಧ ಆಹಾರ ಮತ್ತು ವಿಹಾರದ ಅವಶ್ಯಕತೆ ಇದೆ.  ಸರ್ವರ ರಕ್ಷಕನಾದ ಪರಮಾತ್ಮನ ಅತಿ ಶ್ರ್ರೇಷ್ಠ ಸಂತಾನರಾದ ನಾವುಗಳು ಅವನಿಂದ ಸರ್ವಶಕ್ತಿಗಳನ್ನು ಪಡೆಯಬೇಕಾಗಿದೆ. ಅದಕ್ಕಾಗಿ  ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕಲಿಸುವ ರಾಜಯೋಗ ರಾಮಬಾಣವಾಗಿದೆ. ದಿನಕ್ಕೆ 3-4 ಬಾರಿ ಮನಸ್ಸಿನಲ್ಲಿ ಈ ಶ್ರೇಷ್ಠ ವಿಚಾರಗಳನ್ನು ಮಾಡಿದರೆ ನಮ್ಮ ರಕ್ಷಣೆಯೊಂದಿಗೆ ವಿಶ್ವದ ರಕ್ಷಣೆಯೂ ಸಹ ಆಗುವುದು.
 “ನಾನು ಆರೋಗ್ಯವಂತನಾಗಿದ್ದೇನೆ, ನನ್ನ ಪರಿವಾರ ಆರೋಗ್ಯವಾಗಿದೆ, ನನ್ನ ಮನೆ ನಿರೋಗಿಯಾಗಿದೆ, ನನ್ನ ಓಣಿ, ಊರು, ಜಿಲ್ಲೆ, ರಾಜ್ಯ, ದೇಶ, ಜಗತ್ತು ಸದೃಢವಾಗಿದೆ. ಪರಮಾತ್ಮನ ರಕ್ಷಾ-ಕವಚದಲ್ಲಿ ನಾವುಗಳು ನಿರ್ಭಯ, ಸುಖಿ, ಆರೋಗ್ಯವಂತರಾಗಿದ್ದೇವೆ.”
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಯದ 8500 ಸೇವಾಕೇಂದ್ರಗಳಲ್ಲಿ ಹೊಸ ವರ್ಷದ ಆಚರಣೆಯನ್ನು ಹಷೋಲ್ಲಾಸದಿಂದ ಪರಮಾತ್ಮನ ಸ್ಮೃತಿಯಲ್ಲಿ ಆಚರಿಸುತ್ತಾರೆ. ಅಂದು ಸೇವಾಕೇಂದ್ರಗಳಲ್ಲಿ  ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಯೋಗ-ತಪಸ್ಸು, ಆಧ್ಯಾತ್ಮಿಕ ಉನ್ನತಿಗಾಗಿ ತರಗತಿ, ಪರಸ್ಪರ ಸ್ನೇಹ-ಪ್ರೀತಿಯಿಂದ ನವ ವರ್ಷವನ್ನು ಸ್ವಾಗತಿಸುತ್ತಾರೆ. ಅಂದು ಸರ್ವ ಸಹೋದರ, ಸಹೋದರಿಯರಿಂದ ಹೊಸ ವರ್ಷದ ನಿಮಿತ್ತ ಪ್ರತಿಜ್ಞೆ ಮಾಡಿಸಲಾಗುತ್ತದೆ:
*ನಾನು ಹಿಂದೆ ನಡೆದಿರುವ ಕಹಿ ಘಟನೆಗಳನ್ನು ಮರೆತು ಹೊಸ ಜೀವನ ನಡೆಸುತ್ತೇನೆ.
*ದುಶ್ಚಟ ಮತ್ತು ದುರ್ಗುಣಗಳನ್ನು ಬಿಟ್ಟು ಹೊಸದಾದ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತೇನೆ.
*ನಾನು ಯಾರಿಗೂ ಮನಸಾ-ವಾಚಾ-ಕರ್ಮಣ ದು:ಖವನ್ನು ಕೊಡುವುದಿಲ್ಲ ಮತ್ತು ಯಾರಿಂದಲೂ ದು:ಖಿಯಾಗುವುದಿಲ್ಲ.
*ನಾನು ಸತ್ಯವನ್ನು ನುಡಿಯುತ್ತೇನೆ. ಸುಳ್ಳಿನ ಸಹವಾಸ ಮಾಡುವುದಿಲ್ಲ.
*ನಾನು ಯಾರಿಗೂ ಮೋಸ ಮಾಡುವುದಿಲ್ಲ.
*ನಾನು  ಟಿ.ವಿ., ಪತ್ರಿಕೆ ಗಳಲ್ಲಿ ಅಶ್ಲೀಲ ಹಾಗೂ ಹಿಂಸಾತ್ಮಕ ದೃಶ್ಯಗಳನ್ನು ನೋಡುವುದಿಲ್ಲ.
*ನಾನು ಸದಾ ಸ್ವಚ್ಛವಾಗಿದ್ದು, ಪರಿಸರದ ಸ್ವಚ್ಛತೆಯನ್ನು ಕಾಪಾಡುತ್ತೇನೆ.
*ಎಲ್ಲರಿಗೂ ಸರ್ವ ಆತ್ಮರ ತಂದೆಯಾದ ಭಗವಂತನ ಪರಿಚಯವನ್ನು ನೀಡಿ ಅವನ ಜೊತೆ ಸಂಬಂಧವನ್ನು ಬೆಸೆಯುತ್ತೇನೆ.
*ಸರ್ವರಿಗೂ ಭಗವಂತನಿಂದ ಪಡೆದಿರುವ ಶಕ್ತಿಗಳನ್ನು ಹಂಚಿ ಶಾಂತಿಯ ದಾನ ಮಾಡುತ್ತೇನೆ.
*ಸದಾ ಭಗವಂತನ ಮಗುವಾಗಿ ಅವನ ಧ್ಯಾನದಲ್ಲಿ ಇದ್ದು ಶ್ರೇಷ್ಠನಾಗಲು ಪ್ರಯತ್ನ ಮಾಡುತ್ತೇನೆ.
ಹಾಗಾದರೆ ಬನ್ನಿ, ನಾವೆಲ್ಲರೂ ಇದೇ ರೀತಿ ಪ್ರತಿಜ್ಞೆ ಮಾಡಿ, ಸರ್ವರ ರಕ್ಷಕನಾದ ಭಗವಂತನ ರಕ್ಷಣೆಯಲ್ಲಿದ್ದು, ಅವನನ್ನು ನೆನೆಯತ್ತ  ಹೊಸ ವರುಷವನ್ನು ಸ್ವಾಗತಿಸೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button