Belagavi NewsBelgaum NewsHealthKarnataka News

*ಆಹಾರ ವ್ಯತ್ಯಾಸ ಆದರೆ ಆರೋಗ್ಯವೂ ವ್ಯತ್ಯಾಸ* *ಆರಾಮವೇ ಆರೋಗ್ಯದ ಗುಟ್ಟು: ಹುಕ್ಕೇರಿ ಶ್ರೀ*

ನಿಸರ್ಗಮನೆಯಲ್ಲಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ


ಪ್ರಗತಿವಾಹಿನಿ ಸುದ್ದಿ: ಶಿರಸಿ: ಪ್ರತಿಯೊಬ್ಬ ಮನುಷ್ಯ ಯಾವಾಗಲೂ ಸುಖವಾಗಿರಲು ಒಂದಷ್ಟು ಬಿಡುತ್ತ ಹೋಗಬೇಕು. ಪ್ರತಿಯೊಬ್ಬರೂ
ಆರೋಗ್ಯವಾಗಿರಲು ಆರಾಮಾಗಿರಬೇಕು ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.


ಅವರು ನಗರದ ಹೊರವಲಯದ ನಿಸರ್ಗಮನೆಯ ವೇದ ಆರೋಗ್ಯ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ವೈದ್ಯರನ್ನು ಗೌರವಿಸಿ ಮಾತನಾಡಿದರು. ಆಹಾರ ವ್ಯತ್ಯಾಸ ಆದರೆ, ಆರೋಗ್ಯ ವ್ಯತ್ಯಾಸ ಆಗುತ್ತದೆ. ಪ್ರತಿಯೊಬ್ಬರೂ ಆಹಾರ ಚೆನ್ನಾಗಿ ಇಟ್ಟುಕೊಳ್ಳಬೇಕು. ತಿನ್ನಬಾರದನ್ನು ತಿನ್ನಬಾರದು. ತಿನ್ನುವುದನ್ನು ಮಾತ್ರ ತಿನ್ನಬೇಕು. ತಿನ್ನುವುದು ಏನೆಂಬುದು ನಮಗೆ ಗೊತ್ತಿರಬೇಕು ಎಂದ ಅವರು, ನಾನು ಎಂಬ ಸೊಕ್ಕು ಬಿಟ್ಟರೆ ಎಲ್ಲವೂ ಸರಿ ಇರುತ್ತದೆ, ಸರಿಯಾಗುತ್ತದೆ ಎಂದರು.


ಚಿಂತೆಯಲ್ಲಿ ಶೂನ್ಯವ ತೆಗೆದರೆ ಚಿತೆಯಾಗುತ್ತದೆ. ಚಿತೆ ಮೃತರನ್ನು ಸುಟ್ಟರೆ ಚಿಂತೆ ಜೀವಂತ ಇರುವವರನ್ನು ಸುಡುತ್ತದೆ ಎಂದರು.
ವೈದ್ಯರು ಬಡವರು, ಶ್ರೀಮಂತರು ಎಂದು ನೋಡುವದಿಲ್ಲ. ನಂಬಿ ಬಂದವರಿಗೆ ಆರೋಗ್ಯ ರಕ್ಷಣೆ ಕೊಡುವದು ಮುಖ್ಯವಾಗಿದೆ. ಯಾರೂ ದಪ್ಪ, ತೆಳ್ಳಗೆ ಇದ್ದೇವೆ ಎಂಬುದು ಮುಖ್ಯವಲ್ಲ. ಆರೋಗ್ಯ ಚೆನ್ನಾಗಿರಬೇಕು ಎಂದ ಶ್ರೀಗಳು, ಆರೋಗ್ಯ ಅರಸಿ ಬಂದವರಿಗೆ ಸಮದೃಷ್ಟಿಯಿಂದ‌ ನೋಡುವ ಮನೆ ಇದು ನಿಸರ್ಗಮನೆಯಾಗಿದೆ. ವೈದ್ಯರು ನಿಜವಾದ ದೇವರು ಎಂದರು.

Home add -Advt


ಆರೋಗ್ಯ ಹಾಗೂ ಆಧ್ಯಾತ್ಮಕ್ಕೆ ಅವಿನಾಭಾವ ಸಂಬಂಧವಿದೆ. ಶರೀರ ಸಾಧನ ಚೆನ್ನಾಗಿದ್ದರೆ ಧರ್ಮ ಆಚರಿಸಬಹುದು. ಬರುವಾಗ ಏನೂ ತಂದಿಲ್ಲ. ಹೋಗುವಾಗ ಏನೂ ಒಯ್ಯುವದಿಲ್ಲ. ಹಾಗಾಗಿ ಚಿಂತೆ ಬಿಡಬೇಕು. ಬೇಕು ಬೇಕು ಎಂಬುದು ಸಾಕಿಲ್ಲ. ಸಾಕು ಸಾಕು ಎಂಬುದಕ್ಕೆ ಬೇಕೆಂಬುದಿಲ್ಲ ಎಂದರು‌.

ಸ್ವಾಮಿ ಆದವರು ದೇಶಾಭಿಮಾನ, ಭಾಷಾಭಿಮಾನ ಬಿತ್ತಬೇಕು. ಜನರ ಚಿಂತೆ ದೂರ ಮಾಡಬೇಕು. ಆ ತತ್ವ ಈ ತತ್ವ ಎನ್ನುತ್ತ ಮನುಷ್ಯತ್ವ ಮರೆಯಬಾರದು. ತಂದೆ ತಾಯಿ ಅವರನ್ನು ಮೊದಲು ಗೌರವಿಸಬೇಕು ಎಂದು ಹುಕ್ಕೇರಿ ಶ್ರೀ ಹೇಳಿದರು.

ಇದೇ ವೇಳೆ ಮಾತನಾಡಿದ ಡಾ. ವೆಂಕಟರಮಣ ಹೆಗಡೆ, ಯುವಕರಲ್ಲಿ ಹೆಚ್ಚಾಗುತ್ತಿರುವ ಹೃದಯದ ತೊಂದರೆಗಳಿಗೆ ವಿಟಾಮಿನ್ ಬಿ12 ಕೊರತೆಯೂ ಒಂದು ಮುಖ್ಯ ಕಾರಣವಾಗುತ್ತಿದೆ. ಇದನ್ನು‌ ಗಮನಿಸಿ ನಿತ್ಯದ ಆಹಾರದಲ್ಲಿ ಕೊರತೆಯ ಅಂಶಗಳು ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾರಾಯಣ ಹೆಗಡೆ, ಭವಾನಿ ಹೆಗಡೆ ಅವರು ಶ್ರೀಗಳಿಗೆ ಫಲ‌ ಸಮರ್ಪಿಸಿದರು. ಡಾ. ಸುಶ್ರಾವ್ಯ ಮಂಜುನಾಥ ಪ್ರಾರ್ಥಿಸಿದರು. ಡಾ. ವೆಂಕಟರಮಣ ಹೆಗಡೆ ಸ್ವಾಗತಿಸಿದರು. ಡಾ. ಕೆ.ಭೀಮಾ ನಿರ್ವಹಿಸಿದರು. ಸಂಗೀತಾ ಹೆಗಡೆ ವಂದಿಸಿದರು.


ಇದೇ ವೇಳೆ ಡಾ. ವೆಂಕಟ್ರಮಣ ಹೆಗಡೆ ದಂಪತಿಗಳನ್ನು, ಡಾ.ವೆಂಕಟೇಶ ಗಾಂವಕರ್, ಡಾ.ಅಶ್ವತ್ಥ ಹೆಗಡೆ, ಡಾ.ಅನನ್ಯ, ಡಾ. ಚಂದನಾ, ಡಾ. ಅಶ್ವಿನಿ, ಡಾ. ಸುಶ್ರಾವ್ಯ ಮಂಜುನಾಥ ಅವರನ್ನು ಶ್ರೀಗಳು ಗೌರವಿಸಿದರು.

Related Articles

Back to top button