*ಉತ್ತಮ ಚಿಕಿತ್ಸೆಯಲ್ಲಿ ರಾಜೀ ಇಲ್ಲ: ಪ್ರಾದೇಶಿಕ ಆಯುಕ್ತೆ ಜಾನಕಿ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು ಮತ್ತು ಅಸಹಾಯಕರು. ಅವರಿಗೆ ಉತ್ತಮವಾದ ಚಿಕಿತ್ಸೆ ಜೊತೆಗೆ ಆರೈಕೆಯು ನಮ್ಮೆಲ್ಲರ ಮೊದಲ ಆದ್ಯತೆಯಾಗಿದ್ದು, ಅವರಿಗೆ ನೀಡುವ ಚಿಕಿತ್ಸೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಎಲ್ಲ ವಿಭಾಗದಲ್ಲಿಯೂ ಉತ್ತಮವಾದ ಚಿಕಿತ್ಸೆ ನೀಡುವುದರ ಜತೆಗೆ ರೋಗಿಗಳೊಂದಿಗೆ ಸಂಯಮದಿಂದ ವರ್ತಿಸಬೇಕು” ಎಂದು ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ. ಸೂಚನೆ ನೀಡಿದರು.
ಬೆಳಗಾವಿಯ ಸೂಪರ್ ಸ್ಪೆಷಾಲಿಟಿ ಆಸ್ಪ್ರತೆಯಲ್ಲಿ ಶುಕ್ರವಾರ(ಆ.17) ಆಡಳಿತ ಮಂಡಳಿಯ ಪ್ರಗತಿ ಪರಿಶಿಲನಾ ಸಭೆಯಲ್ಲಿ ಅವರು ಮಾತನಾಡಿದರು.
ಬಿಮ್ಸ್ ಜಿಲ್ಲಾ ಆಸ್ಪತ್ರೆಯೂ ಸಾರ್ವಜನಿಕರಿಗೆ ಸೇವೆಯನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಉತ್ತಮ ಚಿಕಿತ್ಸೆ ನೀಡುವುದರಲ್ಲಿ ಸರಕಾರಿ ಆಸ್ಪತ್ರೆಯು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಯಾವ ವಿಷಯದಲ್ಲಿಯೂ ರಾಜಿ ಮಾಡಿಕೊಳ್ಳದೆ ವೈದ್ಯರು ಹಾಗೂ ಆಡಳಿತ ಮಂಡಳಿಯೂ ರೋಗಿಗಳ ಸೇವೆಯನ್ನು ಮಾಡಬೇಕೆಂದು ತಿಳಿಸಿದರು.
ಬಿಮ್ಸ್ ಆಸ್ಪತ್ರೆಯ ಎಲ್ಲ ವಿಭಾಗದ ಕುಂದು ಕೊರತೆ ಮತ್ತು ಕಾರ್ಯವಿಧಾನ ಕುರಿತು ಕೂಲಕುಂಶವಾಗಿ ಪರಿಶಿಲನೆಯನ್ನು ನಡೆಸಿದ ಪ್ರಾದೇಶಿಕ ಆಯುಕ್ತರು, ವಿವಿಧ ವಿಭಾಗಗಳಿಗೂ ಭೇಟಿ ನೀಡಿ ಖುದ್ದಾಗಿ ಪರಿಶೀಲಿಸಿದರು.
ಸಭೆಯಲ್ಲಿ ಬಿಮ್ಸ್ ನ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ, ಬಿಮ್ಸ್ ಮುಖ್ಯ ಆಡಳಿತಾಧಿಕಾರಿಗಳಾದ ಡಾ.ಸಿದ್ದು ಹುಲ್ಲೋಳಿ, ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಕೇಶವ ಹೆಚ್.ಬಿ. ಹಾಗೂ ಬಿಮ್ಸ್ ನ ಎಲ್ಲ ವಿಭಾಗದ ಮುಖ್ಯಸ್ಥರು ಹಾಜರಿದ್ದರು.