Belagavi NewsBelgaum NewsKannada NewsKarnataka NewsLatestNationalPolitics

*ಗಡಿವಿವಾದ ಆತಂಕ ಬೇಡ; ಮಹಾಜನ ವರದಿಯೇ ಅಂತಿಮ: ಸಚಿವ ಎಚ್.ಕೆ.ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಡಿ ವಿವಾದ ಕುರಿತು ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಪ್ರಕರಣಗಳ ಬಗ್ಗೆ ಕನ್ನಡಿಗರು ಆತಂಕಪಡುವ ಅಗತ್ಯವಿಲ್ಲ. ಗಡಿವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಖಟ್ಲೆಯು ಸಾಂವಿಧಾನಿಕ ವಿಷಯವಾಗಿರುವುದರಿಂದ‌ ಅದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಬಗ್ಗೆಯೇ ಇದುವರೆಗೆ ನಿರ್ಧಾರವಾಗಿಲ್ಲ ಆದ್ದರಿಂದ ಈ ವಿಷಯದ ಬಗ್ಗೆ ಯಾವುದೇ ರೀತಿಯ ಆತಂಕ ಬೇಡ ಎಂದು ಗಡಿ ಉಸ್ತುವಾರಿ ಸಚಿವರೂ ಆಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ(ಜು.26) ಗಡಿಭಾಗದ ಕನ್ನಡಪರ ಸಂಘಟನೆಗಳ ಮುಖಂಡರ ಜತೆಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾಷಾ ವಿವಾದವೂ ಮಹಾರಾಷ್ಟ್ರದಲ್ಲಿ ಚುನಾವಣಾ ವಿಷಯವಾಗಿದೆ. ಆದ್ದರಿಂದ ಈ ಕುರಿತು ಆತಂಕ ಪಡಬಾರದು. ದೇಶದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಿ ಮಹಾಜನ ಆಯೋಗ ರಚನೆಗೆ ಕರ್ನಾಟಕ ಸರಕಾರ ಒಪ್ಪಿಕೊಂಡಿದೆ. ಮಹಾಜನ‌ ವರದಿಯೇ ಗಡಿವಿವಾದಕ್ಕೆ ಪರಿಹಾರವಾಗಿದೆ ಎಂಬುದು ನಮ್ಮ ನಿಲುವು. ಮಹಾಜನ ವರದಿಯೇ ಅಂತಿಮ. ಒಪ್ಪಿದರೆ ಮಹಾಜನ ವರದಿ ಒಪ್ಪಬೇಕು ಇಲ್ಲದಿದ್ದರೆ ಯಥಾಸ್ಥಿತಿ ಮುಂದುವರೆಯಬೇಕು ಎಂಬುದು ನಮ್ಮ ಕರ್ನಾಟಕ ರಾಜ್ಯದ ದೃಢನಿರ್ಧಾರವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಕನ್ನಡ-ಮರಾಠಿಗರ ಸಾಮರಸ್ಯದ ಬದುಕು ಇಡೀ ದೇಶಕ್ಕೆ ಮಾದರಿಯಾಗಿದೆ. ಅನಗತ್ಯ ಕ್ಯಾತೆ ತೆಗೆಯುವವರು ಇದನ್ನು ಅರಿತುಕೊಂಡು ತಮ್ಮ ಮನೋಸ್ಥಿತಿ ಬದಲಾಯಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Home add -Advt

ಗೋವಾ ಕನ್ನಡಿಗರ ಮೇಲಿನ ಅನ್ಯಾಯ ತಡೆಯಲು‌ ಎಲ್ಲ ಕ್ರಮವಹಿಸುವುದರ ಜತೆಗೆ ಕೇಂದ್ರ ಸರಕಾರದ ಜತೆಯೂ ಈ ಬಗ್ಗೆ ಚರ್ಚಿಸಲಾಗುವುದು.

ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅದರ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ ಭರವಸೆ ನೀಡಿದರು.

ಗೋವಾ ರಾಜ್ಯದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದರು.

ಗಡಿಶಾಲೆಗಳ ಬಲವರ್ಧನೆಗೆ ಕ್ರಮ

ಬೆಳಗಾವಿ ಸೇರಿದಂತೆ ರಾಜ್ಯದ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಸದೃಢಗೊಳಿಸಲು ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳ ಬಗ್ಗೆ ಬೆಳಗಾವಿ ನಿಯೋಗದೊಂದಿಗೆ ಶಿಕ್ಷಣ ಸಚಿವರ ಜತೆ ವಿಸ್ತೃತವಾಗಿ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗವುದು ಎಂದು ಗಡಿ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಭರವಸೆ ನೀಡಿದರು.

ಕನ್ನಡಪರ ಸಂಘಟನೆಗಳು ಬೆಳಗಾವಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ಒಂದು ಸಮಿತಿಯನ್ನು ರಚಿಸಿಕೊಂಡು ಗಡಿಭಾಗದ ಕನ್ನಡ ಶಾಲೆಗಳ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಿಕೊಂಡು ನಿಯೋಗದ ಜತೆ ಬಂದರೆ ಶಿಕ್ಷಣ ಸಚಿವರ ಜತೆ ಚರ್ಚಿಸಿ ಸರಕಾರದ‌ ಮಟ್ಟದಲ್ಲಿ ಕ್ರಮಕ್ಕೆ ಪ್ರಯತ್ನಿಸಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ ಅವರು ಭರವಸೆ ನೀಡಿದರು.

ವಿಧಾನಸೌಧ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ

ಬೆಂಗಳೂರಿನಲ್ಲಿರುವ ವಿಧಾನಸೌಧಕ್ಕೆ ಸಾರ್ವಜನಿಕರಿಗೆ ಪ್ರವೇಶ ಒದಗಿಸುವ ಮೂಲಕ ಪ್ರವಾಸಿತಾಣವಾಗಿ ಮಾರ್ಪಡಿಸಲಾಗಿದೆ. ಅದೇ ರೀತಿಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೂ ಸಾರ್ವಜನಿಕರಿಗೆ ಪ್ರವೇಶ ಒದಗಿಸಲು ಸರಕಾರದ‌ ಮಟ್ಟದಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಬೆಳಗಾವಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಮೈಸೂರು ದಸರಾ ಮಾದರಿಯಲ್ಲಿ ಆಚರಣೆಗೆ ವಿಶೇಷ ಅನುದಾನ ಒದಗಿಸಬೇಕು ಎಂಬುದು ನ್ಯಾಯಯುತ ಬೇಡಿಕೆಯಾಗಿದ್ದು, ಇದನ್ನು ಪರಿಶೀಲಿಸಲಾಗುವುದು.

ಗಡಿಭಾಗದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಹೆಚ್ಚಿನ ಕೆಲಸ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸಚಿವ ಎಚ್.ಕೆ.ಪಾಟೀಲ ಸೂಚನೆ ನೀಡಿದರು.

ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ ಮಾಡುವಾಗ ಕಿತ್ತೂರು ಚನ್ನಮ್ಮ ಪುತ್ಥಳಿ ಇರುವ ಜಾಗೆಯನ್ನು ಎತ್ತರಿಸಿ ಬೃಹತ್ ಗಾತ್ರದ ಚನ್ನಮ್ಮ ಪುತ್ಥಳಿ ಸ್ಥಾಪಿಸಲಾಗುವುದು. ಈ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಕನ್ನಡಿಗ ಹೋರಾಟಗಾರರ ಮೇಲಿನ ಪ್ರಕರಣ ರದ್ದುಗೊಳಿಸಲು ಒತ್ತಾಯ

ಸಭೆಯಲ್ಲಿ ಮಾತನಾಡಿದ ಕಿತ್ತೂರು ಕರ್ನಾಟಕ ಸೇನೆ ಅಧ್ಯಕ್ಷರಾದ ಮಹದೇವ ತಳವಾರ, ಗಡಿ ಸಂರಕ್ಷಣಾ ಆಯೋಗ ರಚನೆ ಆಗಬೇಕು; ಗಡಿ ಪ್ರದೇಶಾಭಿವೃದ್ಧಿ ಮಂಡಳಿಗಳ ಕಚೇರಿಯನ್ನು ಸುವರ್ಣ ವಿಧಾನಸೌಧದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಗಡಿ ಪ್ರದೇಶಾಭಿವೃದ್ಧಿ ಮಂಡಳಿಗಳಿಗೆ ಸ್ಥಳೀಯರನ್ನು ನೇಮಿಸಬೇಕು. ಮಹಾರಾಷ್ಟ್ರದ ಕೊಲ್ಲಾಪುರ,ಪುಣೆ, ಸೊಲ್ಲಾಪು ಮತ್ತಿತರ ಕಡೆಗಳಲ್ಲಿ ಕನ್ನಡಿಗರು ಭಾಷಾ ಅಲ್ಪಸಂಖ್ಯಾತರಾಗಿದ್ದು, ಅಲ್ಲಿ ಕನ್ನಡದಲ್ಲಿ ದಾಖಲಾತಿಗಳನ್ನು ಒದಗಿಸಿದರೆ ಮಾತ್ರ ಬೆಳಗಾವಿಯಲ್ಲಿ ಮರಾಠಿ ದಾಖಲೆ ನೀಡುವ ಬಗ್ಗೆ ಪರಿಶೀಲಿಸಬೇಕು ಎಂದು ತಳವಾರ ಆಗ್ರಹಿಸಿದರು.

ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ ಪರಿಣಿತ ಶಿಕ್ಷಕರನ್ನು ನೇಮಿಸಬೇಕು; ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು; ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಲು ಫುಲೆ ಆರೋಗ್ಯ ಯೋಜನೆಯನ್ನು ಮಹಾರಾಷ್ಟ್ರ ಸರಕಾರ ಜಾರಿಗೊಳಿಸುತ್ತಿದ್ದು ಇದಕ್ಕೆ ತಡೆಯೊಡ್ಡಬೇಕು ಎಂದು ಮನವಿ ಸಲ್ಲಿಸಿದರು.

ಕರವೇ ಪ್ರವೀಣ ಶೆಟ್ಟಿ ಬಣದ ಮುಖಂಡ ಅಭಿಲಾಷ್, ನಾಡವಿರೋಧಿ ಚಟುವಟಿಕೆ ನಡೆಸುವ ಎಂ.ಇ.ಎಸ್. ಸಂಘಟನೆಯನ್ನು ನಿಷೇಧಿಸಲು ಯಾಕೆ ಹಿಂದೇಟು ಹಾಕಲಾಗುತ್ತಿದೆ ಎಂದು ಪ್ರಶ್ನಿಸಿದರು.

ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ತಾಳೂರಕರ, ಸಾರ್ವಜನಿಕರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು; ಸುವರ್ಣ ವಿಧಾನಸೌಧದ ಆವರಣದಲ್ಲಿ ಭವ್ಯವಾದ ಭುವನೇಶ್ವರಿ ತಾಯಿಯ 108 ಅಡಿ ಎತ್ತರದ ಕಂಚಿನ ಮೂರ್ತಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ದೀಪಕ್ ಗುಡಗನಟ್ಟಿ, ಪ್ರತಿ ಮೂರು ತಿಂಗಳಿಗೊಮ್ಮೆ ಕನ್ನಡಪರ ಸಂಘಟನೆಗಳ ಸಭೆ ನಡೆಸಬೇಕು; ಬೆಳಗಾವಿಯಲ್ಲಿ ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಆಚರಣೆಗೆ ದಸರಾ ಮಾದರಿಯಲ್ಲಿ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಎಂ.ಇ.ಎಸ್. ಹಾಗೂ ಶಿವಸೇನೆ ಸಂಘಟನೆಗಳು ಕನ್ನಡಿಗರನ್ನು, ಅಧಿಕಾರಿಗಳು ಮತ್ತು ಕನ್ನಡಪರ ಹೋರಾಟಗಾರರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದು, ಅಂತವರ ವಿರುದ್ಧ ಗೂಂಡಾ ಕಾಯ್ದೆ ಪ್ರಕಾರ ಬಗ್ಗೆ ಕ್ರಮ ವಹಿಸಬೇಕು ಎಂದು ಗುಡಗನಟ್ಟಿ ಒತ್ತಾಯಿಸಿದರು.

ಗೋವಾದಲ್ಲಿ ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟಬೇಕು; ಶಾಲಾ ಮಕ್ಕಳಿಗೆ ಜಾತಿ/ಆದಾಯ ಪ್ರಮಾಣಪತ್ರಗಳು ದೊರಕುತ್ತಿಲ್ಲ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಕನ್ನಡ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಸೇರಿದಂತೆ ಸರಕಾರಿ ಸಂಸ್ಥೆಗಳಲ್ಲಿ ಕನ್ನಡಿಗ ನೌಕರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಸಂಘಟನೆಗಳ ಹೋರಾಟದ ಫಲವಾಗಿ ಗಡಿ ಉಸ್ತುವಾರಿ ಸಚಿವರನ್ನು ಸರಕಾರ ನೇಮಿಸಿದೆ. ನಾಡು-ನುಡಿಯ ವಿಚಾರವಾಗಿ ನಡೆಯುತ್ತಿರುವ ಹೋರಾಟಗಳಿಗೆ ಸೂಕ್ತ ಸ್ಪಂದನೆ ದೊರಕುತ್ತಿರಲಿಲ್ಲ. ಗಡಿ ವಿವಾದ ಮತ್ತು ಸಮಸ್ಯೆಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಎಚ್.ಕೆ.ಪಾಟೀಲ ಅವರಿಗೆ ಗಡಿ, ನಾಡು-ನುಡಿಯ ಬಗ್ಗೆ ಎಲ್ಲವೂ ಗೊತ್ತಿದೆ ಎಂದು ಕನ್ನಡಪರ ಸಂಘಟನೆಗಳ ಮುಖಂಡ ಅಶೋಕ ಚಂದರಗಿ ವಿವರಿಸಿದರು.

ಆದಾಗ್ಯೂ ಗಡಿ ಭಾಗದ ಕನ್ನಡಿಗರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ಅವಕಾಶ ಕಲ್ಪಿಸುವುದಕ್ಕಾಗಿ ಸಭೆಯನ್ನು ಆಯೋಜಿಸಲಾಗಿದೆ ಎಂದರು.

ಮರಾಠಿ ದಿನಪತ್ರಿಕೆಗಳಲ್ಲಿ ” ಬೆಳಗಾಂವ” ಪದ ಬಳಕೆಗೆ ಆಕ್ಷೇಪ

ಬೆಳಗಾಂವ ಅನ್ನು “ಬೆಳಗಾವಿ” ಎಂದು ಸರಕಾರ ಮರುನಾಮಕರಣ ಮಾಡಿದೆ. ಆದಾಗ್ಯೂ ಬೆಳಗಾವಿ ಜಿಲ್ಲೆಯಲ್ಲಿ ಪ್ರಕಟವಾಗುತ್ತಿರುವ ಕೆಲವು ಮರಾಠಿ ಭಾಷೆಯ ದಿನಪತ್ರಿಕೆಗಳಲ್ಲಿ ಇದುವರೆಗೆ “ಬೆಳಗಾಂವ” ಎಂದೇ ಬರೆಯಲಾಗುತ್ತಿದೆ.

ಕರ್ನಾಟಕ ಸರಕಾರದಿಂದ ಜಾಹೀರಾತು ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಿರುವ ದಿನಪತ್ರಿಕೆಗಳು “ಬೆಳಗಾವಿ” ಎಂದು ಬರೆಯುತ್ತಿಲ್ಲ ಎಂದು ಕಿತ್ತೂರು ಕರ್ನಾಟಕ ಸೇನೆ ಅಧ್ಯಕ್ಷರಾದ ಮಹಾದೇವ ತಳವಾರ ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರೀಯ ವಿದ್ಯಾಲಯ, ವಿಮಾನ ನಿಲ್ದಾಣ ಹಾಗೂ ಮರಾಠಿ ಲಘು ಪದಾತಿ ದಳದ ಕೇಂದ್ರ ಸೇರಿದಂತೆ ಕೇಂದ್ರ ಸರಕಾರದ ಎಲ್ಲ ಸಂಸ್ಥೆಗಳು “ಬೆಳಗಾವಿ” ಎಂದೇ‌ ಬಳಸುತ್ತಿವೆ. ಆದರೆ ಮರಾಠಿ ದಿನಪತ್ರಿಕೆಗಳು ಮಾತ್ರ “ಬೆಳಗಾಂವ” ಎಂದೇ ಬಳಸುತ್ತಿದ್ದು, ಈ ಪತ್ರಿಕೆಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಳವಾರ ಅವರು ಆಗ್ರಹಿಸಿದರು.

ಸವದತ್ತಿ ಶಾಸಕ ವಿಶ್ಚಾಸ್ ವೈದ್ಯ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ ಗುಲಾಬ್ ರಾವ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಆಗಿರುವ ಕನ್ನಡಪರ ಸಂಘಟನೆಗಳ ಮುಖಂಡ ಅಶೋಕ ಚಂದರಗಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Back to top button