Belagavi NewsBelgaum NewsKannada NewsKarnataka NewsLatest

*ಸ್ಮೃತಿ ಭವನ ನಿರ್ಮಾಣಕ್ಕೆ ಅವಕಾಶ ನೀಡಲ್ಲ -ಡಿಸಿ ಭರವಸೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಬಳಿಯ ಹಿಂಡಲಗಾ ಗ್ರಾಮದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿರ್ಮಿಸಲು ಉದ್ದೇಶಿಸಿರುವ ಸ್ಮೃತಿ ಭವನ ಕಟ್ಟಡ ನಿರ್ಮಾಣಕ್ಕೆ ಯಾವುದೇ ಪರಿಸ್ಥಿತಿಯಲ್ಲಿ ಅವಕಾಶ ನೀಡಲಾಗುವುದಿಲ್ಲ. ಈಗಾಗಲೇ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ನೆರವೇರಿಸಿದವರಿಗೆ ಇಂದೇ ನೋಟೀಸು ನೀಡಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಇಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ನಿಯೋಗಕ್ಕೆ ಸ್ಪಷ್ಟವಾದ ಭರವಸೆ ನೀಡಿದರು.
೧೯೮೬ ರ ಜೂನ್ ೧ ರಂದು ಮಹಾರಾಷ್ಟ್ರದ ನಾಯಕರು ಬೆಳಗಾವಿಯಲ್ಲಿ ಆರಂಭಿಸಿದ ಗಡಿ ಚಳಿವಳಿ ಕಾಲಕ್ಕೆ ಸಂಭವಿಸಿದ ಭಾರೀ ಪ್ರಮಾಣದ ಹಿಂಸಾಚಾರದ ಹಿನ್ನೆಲೆಯಲ್ಲಿ ಹಿಂಡಲಗಾ ಗ್ರಾಮದಲ್ಲಿ ಕರ್ನಾಟಕದ ಪೋಲೀಸರು ನಡೆಸಿದ ಗೋಳಿಬಾರನಲ್ಲಿ ಸಾವನ್ನಪ್ಪಿದ ೯ ಜನ ಹಿಂಸಾಚಾರಿಗಳನ್ನು ಹುತಾತ್ಮರೆಂದು ಪರಿಗಣಿಸುತ್ತಿರುವ ಎಮ್.ಇ.ಎಸ್. ನಾಯಕರು ಸತ್ತವರನ್ನು ವೈಭವಿಕರಿಸುವ ಉದ್ದೇಶದಿಂದ ನಿರ್ಮಿಸುತ್ತಿರುವ ಸ್ಮೃತಿ ಭವನಕ್ಕೆ ಬೆಳಗಾವಿ ಜಿಲ್ಲಾಡಳಿತ ಅವಕಾಶ ಕೊಡಬಾರದು ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಯುಗಾದಿ ಹಬ್ಬದಂದು ಭೂಮಿ ಪೂಜೆ ನೆರೆವೇರಿಸಿದ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಲು ಕ್ರಿಯಾ ಸಮಿತಿ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೆಟ್ಟಿಯಾಗಿ ಮನವಿ ಸಲ್ಲಿಸಿತು.
ಇಂತಹ ಭವನವನ್ನು ನಿರ್ಮಿಸಿದ್ದಲ್ಲಿ ಕರ್ನಾಟಕ ಸರಕಾರ ಹಾಗೂ ಕನ್ನಡಿಗರ ವಿರೋಧಿ ಚಟುವಟಿಕೆಗಳು ಭವನದಲ್ಲಿ ನಡೆಯುವದರಲ್ಲಿ ಯಾವುದೇ ಸಂದೇಹವಿಲ್ಲ. ಕರ್ನಾಟಕ ಸರಕಾರ ಹಾಗೂ ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಸೆಡ್ಡು ಹೊಡೆಯುವ ಮೂಲಕ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಮುಂದಾಗಿರುವ ಎಮ್.ಇ.ಎಸ್. ನಾಯಕರ ದುರುದ್ದೇಶಕ್ಕೆ ಜಿಲ್ಲಾಡಳಿತವು ಕೂಡಲೇ ಕಡಿವಾಣ ಹಾಕಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಕ್ರಿಯಾ ಸಮಿತಿಯ ಅಧ್ಯಕ್ಷ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಸದಸ್ಯ ಅಶೋಕ ಚಂದರಗಿ ಮಹಾನಗರ ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ, ಶಿವಪ್ಪ ಶಮರಂತ, ಮಲ್ಲಪ್ಪ ಅಕ್ಷರದ, ರಾಜು ವೈಜನ್ನವರ, ಸಾಗರ ಬೋರಗಲ್ಲ, ಸೊಗಲಿ, ವೀರೇಂದ್ರ ಗೋಬರಿ, ಆರ್. ಅಭಿಲಾಷ, ವಿವೇಕ ಬಂಗೋಡಿ ಮುಂತಾದವರು ಇದ್ದರು.

Related Articles

Back to top button