ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ –
ಬಿಜೆಪಿ ಕಾರ್ಯಕರ್ತರು ವ್ಯಕ್ತಿ ನಿಷ್ಠೆಯ ಬದಲು ಪಕ್ಷ ನಿಷ್ಠೆ ಇಟ್ಟುಕೊಳ್ಳಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ ಹೇಳಿದರು.
ಬೆಳಗಾವಿಯ ಅಂಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ, ಬೆಳಗಾವಿ ನಗರ, ಗ್ರಾಮೀಣ ಹಾಗೂ ಚಿಕ್ಕೋಡಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವ್ಯಕ್ತಿ ನಿಷ್ಠೆಯ ಮೇಲೆ ನಡೆದರೆ, ಯಾವುದೇ ಶಾಸಕ ಅಥವಾ ಚುನಾಯಿತ ಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿದರೆ ನೋವಾಗುತ್ತದೆ, ಪಕ್ಷ ನಿಷ್ಠೆ ಇರುವ ಕಾರ್ಯಕರ್ತರಿಗೆ ಯಾರು ಏನೇ ನಿರ್ಲಕ್ಷ್ಯ ಮಾಡಿದರೂ ಸ್ವಾಭಿಮಾನವಿರುತ್ತದೆ ಎಂದು ವಿವರಿಸಿದರು.
ಪಕ್ಷದ ಹಿರಿಯ ಕಾರ್ಯಕರ್ತರು ಪಕ್ಷದ ಆಸ್ತಿಯಿದ್ದಂತೆ, ಅವರನ್ನು ಗೌರವಿಸಿ ಎಂದು ಬಿ. ಎಲ್. ಸಂತೋಷ ಸಲಹೆ ನೀಡಿದರು. ಒಬ್ಬ ಕಾರ್ಯಕರ್ತ ಬೆಳೆಯಲು ಅಪಾರ ಶ್ರಮವಿರುತ್ತದೆ, ಯಾವುದಾದರೂ ಕಾರಣಕ್ಕೆ ವೈಮನಸ್ಸು ಉಂಟಾಗಿದ್ದರೆ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿಲ್ಲ, ಕಾರ್ಯಕರ್ತರ ಬಲದಿಂದಲೇ ಪಕ್ಷ ಬೆಳೆದು ಬಂದಿದೆ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಕಾರ್ಯಕರ್ತರನ್ನು ಗೌರವದಿಂದ ಕಾಣುವಂತೆ ಪಕ್ಷದ ಚುನಾಯಿತ ಪ್ರತಿನಿಧಿಗಳಿಗೆ ಕಿವಿ ಮಾತು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೇಶುಭಾಯಿ ಪಟೇಲ್ ಅವರು ಸರಕಾರದ ವಿರುದ್ಧವೇ ಹೇಳಿಕೆ ಕೊಡುತ್ತಿದ್ದರು. ಆದರೆ ಮೋದಿ ಅವರು ಅದಕ್ಕೆ ಬೇಸರಿಸಿಕೊಳ್ಳದೆ, ಕೇಶುಬಾಯಿ ಪಟೇಲ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತಿದ್ದರು. ಪಕ್ಷದಲ್ಲಿ ಹಿರಿಯರನ್ನು ಗೌರವಿಸುವುದಕ್ಕೆ ಇದು ಉತ್ತಮ ಉದಾಹರಣೆ ಎಂದು ಹೇಳಿದರು.
ಕಾರ್ಯಕರ್ತರು ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ಜಿಲ್ಲೆಯಲ್ಲಿರುವ ಸಂಘಟನಾತ್ಮಕ ಲೋಪಗಳನ್ನು ಎತ್ತಿ ತೋರಿಸಿದರು.
ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮುಜರಾಯಿ ಮತ್ತು ವಕ್ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಶಾಸಕರಾದ ಅನೀಲ ಬೆನಕೆ, ಅಭಯ್ ಪಾಟೀಲ, ಬೆಳಗಾವಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್, ಚಿಕ್ಕೋಡಿ ಜಿಲ್ಲಾಧ್ಯಕ್ಷ ರಾಜೇಶ ನೇರ್ಲಿ, ಮಾಜಿ ಸಂಸದ ರಮೇಶ ಕತ್ತಿ ಮೊದಲಾದವರು ಇದ್ದರು.
https://pragati.taskdun.com/latest/cm-basavaraj-bommaikanneri-mathkollapurasanta-samavesha/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ