*ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ರಾಜ್ಯಪಾಲರು ರಾಜೀನಾಮೆ ನೀಡಬೇಕು: ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : *ಕ್ಯಾಬಿನೆಟ್ ನೋಟ್ ನಲ್ಲಿ ನಾವು ತಿಳಿಸಿದ್ದ ಕಾನೂನಾತ್ಮಕ ಸಂಗತಿಗಳನ್ನು ರಾಜ್ಯಪಾಲರು ಪರಿಗಣಿಸದಿರುವುದು ರಾಜ್ಯಪಾಲರ ದುರುದ್ದೇಶವನ್ನು, ರಾಜಭವನದ ದುರುದ್ದೇಶವನ್ನು ಎತ್ತಿ ತೋರಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.
ಸಚಿವಸಂಪುಟ ಸಭೆಯ ನಂತರ ಅವರು ಮಾತನಾಡಿದರು. *ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರುವುದಕ್ಕೆ ಕ್ಯಾಬಿನೆಟ್ ಖಂಡನೆ ವ್ಯಕ್ತಪಡಿಸಿದೆ. ಇಡಿ ಪಕ್ಷ, ಇಡಿ ಕ್ಯಾಬಿನೆಟ್ ಮುಖ್ಯಮಂತ್ರಿಗಳ ಪರವಾಗಿ ನಿಂತು ನ್ಯಾಯಕ್ಕಾಗಿ ಹೋರಾಡಿ ಗೆಲ್ಲುತ್ತೇವೆ ಎಂದು ಅವರು ಹೇಳಿದರು.
ಸಚಿವ ಸಂಪುಟ ಸಭೆಯ ನಂತರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಾತುಗಳು
ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸುವ ನಿರ್ಣಯವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ.
ರಾಜ್ಯಪಾಲರ ನಿರ್ಧಾರ ಕಾನೂನು ವಿರುದ್ಧ, ಸಂವಿಧಾನ ಬಾಹಿರ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆಯಾಗಿದೆ. ಇವರು ಮಾಡಿರುವ ತೀರ್ಮಾನ ಸರಿ ಇಲ್ಲ ಎಂದು ಸಚಿವ ಸಂಪುಟ ಸಭೆಯು ತೀರ್ಮಾನ ಮಾಡಿದೆ.
ಇಡೀ ಸರ್ಕಾರ ಹಾಗೂ ಪಕ್ಷ ಮುಖ್ಯಮಂತ್ರಿಗಳ ಪರವಾಗಿ ನಿಲ್ಲುತ್ತದೆ. ಯಾವುದೇ ಕಾರಣಕ್ಕೂ ಯಾವುದೇ ಒತ್ತಡಕ್ಕೆ ಒಳಗಾಗಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದಿಲ್ಲ. ಎಐಸಿಸಿ ಹಾಗೂ ಕೊನೆಯ ಹಂತದ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಜೊತೆ ಇರುತ್ತದೆ.
ರಾಜ್ಯಪಾಲರು ಕಾನೂನು ಬದ್ಧವಾಗಿ ನಡೆದುಕೊಂಡಿಲ್ಲ. ಭ್ರಷ್ಟಾಚಾರ ವಿರೋಧಿ ಕಾಯ್ದೆಯ 17 ಎ ಸೆಕ್ಷನ್ ಪ್ರಕಾರ ಅವರು ಕ್ರಮ ವಹಿಸಿಲ್ಲ. ಆರ್ಟಿಕಲ್ 163 ಪ್ರಕಾರ ಸರ್ಕಾರ ನೀಡಿದ ಸಲಹೆ ಹಾಗೂ ಇತರೆ ನ್ಯಾಯಾಲಯಗಳ ತೀರ್ಪನ್ನು ಕೂಡ ಅವರ ಗಮನಕ್ಕೆ ತರಲಾಗಿತ್ತು ಅದನ್ನು ಸಹ ಅವರು ಪರಿಗಣಿಸಿಲ್ಲ. ಕಾನೂನು ಬಾಹಿರವಾದ ರಾಜ್ಯಪಾಲರ ತೀರ್ಮಾನವನ್ನು ಕೇಂದ್ರ ಸರ್ಕಾರವು ರಾಜ್ಯಪಾಲರ ಮೂಲಕ ಸರ್ಕಾರವನ್ನು ಬೀಳಿಸುವ ಈ ಯತ್ನವನ್ನು ನಾವು ಖಂಡೀಸುತ್ತೇವೆ.
ತುಂಗ ಭದ್ರಾ ಅಣೆಕಟ್ಟಿನಲ್ಲಿ 35 ಟಿಎಂಸಿ ನೀರು ನಷ್ಟ
ತುಂಗಭದ್ರಾ ಅಣೆಕಟ್ಟಿನ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿ ಆತಂಕ ಸೃಷ್ಟಿಯಾಗಿತ್ತು. ಇದರಿಂದ 35 ಟಿಎಂಸಿಯಷ್ಟು ನೀರು ಕರ್ನಾಟಕಕ್ಕೆ ನಷ್ಟವಾಗಿದೆ. ಈ ಘಟನೆ ನಡೆದ ನಂತರ ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಂಡರು.
ಅಣೆಕಟ್ಟು ಕೇಂದ್ರ ಸರ್ಕಾರದ ವಶದಲ್ಲಿ ಇದ್ದರೂ ಸಹ ನಮ್ಮ ಬಳಿಯೂ ನಕ್ಷೆಯಿತ್ತು. ಇದನ್ನು ತಂತ್ರಜ್ಞರಾದ ಕನ್ನಯ್ಯ ನಾಯ್ಡು ಅವರನ್ನು ಸಂಪರ್ಕಿಸಿ ಗೇಟ್ ಅನ್ನು ಮತ್ತೆ ನಿರ್ಮಿಸಿ ಅಳವಡಿಸುವ ಕೆಲಸ ಮಾಡಲಾಯಿತು. ಜಿಂದಾಲ್, ನಾರಾಯಣ ಇಂಜಿನಿಯರಿಂಗ್ ಮತ್ತು ಹಿಂದುಸ್ಥಾನ್ ಇಂಜಿನಿಯರಿಂಗ್ ಕಂಪನಿ ಅವರು ಸೇರಿ ಕೆಲಸ ಮಾಡಿದರು.
ಪ್ರಸ್ತುತ ಸ್ಟಾಪ್ ಗೇಟ್ ಗಳನ್ನು ಅಳವಡಿಸಲಾಗಿದೆ. ಭಾರಿ ಪ್ರಮಾಣದಲ್ಲಿ ನೀರು ಹೊರಗೆ ಹೋಗುವುದು ನಿಂತಿದೆ. ಅಣೆಕಟ್ಟಿಗೆ ಸುಮಾರು 65 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಈ ಕೆಲಸದ ಹಿಂದೆ ದುಡಿದ ಎಲ್ಲಾ ಅಧಿಕಾರಿಗಳು ಹಾಗೂ ಜಿಂದಾಲ್, ನಾರಾಯಣ ಇಂಜಿನಿಯರಿಂಗ್ ಮತ್ತು ಹಿಂದುಸ್ಥಾನ್ ಇಂಜಿನಿಯರಿಂಗ್ ಕಂಪನಿ ಮತ್ತು ಸಣ್ಣ ಕಾರ್ಮಿಕರಿಗೆ ಸರ್ಕಾರದ ಪರವಾಗಿ ವಂದನೆಗಳು.
ಇಡೀ ದೇಶವೇ ಏನಾಗಬಹುದು ಎಂದು ಕಾತರದಿಂದ ಕಾಯುತ್ತಿತ್ತು. ಇತರೇ ಅಣೆಕಟ್ಟುಗಳಲ್ಲಿ ರೋಪ್ ಹಾಗೂ ಚೈನ್ ವ್ಯವಸ್ಥೆ ಇರುತ್ತದೆ. ಇದು ಹಳೆಯ ಅಣೆಕಟ್ಟು ಆದ ಕಾರಣಕ್ಕೆ ಈ ರೀತಿಯ ವ್ಯವಸ್ಥೆ ಇರಲಿಲ್ಲ. ಮುಂದಿನ ದಿನಗಳಲ್ಲಿ ಯಾವ ರೀತಿಯ ವ್ಯವಸ್ಥೆ ಮಾಡಬಹುದು ಎಂದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
—
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನ್ಯಾಯ -ಸತ್ಯದ ಪರವಾಗಿ ನಿಂತು ಪ್ರಜಾಪ್ರಭುತ್ವ ಉಳಿವಿನ ಹೋರಾಟಕ್ಕೆ ಗಟ್ಟಿಯಾಗಿ ನಿಂತಿರುವ ಕ್ಯಾಬಿನೆಟ್, ಸಂಸದರು, ರಾಜ್ಯಸಭಾ ಸದಸ್ಯರುಗಳು, ಶಾಸಕರುಗಳು, ಇಡಿ ಪಕ್ಷ, ಹೈ ಕಮಾಂಡ್ ಮತ್ತು ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ಧನ್ಯವಾದ ಹೇಳಿದರು.
*ರಾಜ್ಯಪಾಲರ ತೀರ್ಮಾನ ಅಸಂವಿಧಾನಿಕ, ಕಾನೂನುಬಾಹಿರ ಎಂದು ಸಚಿವ ಸಂಪುಟ ಖಂಡಿಸಿದೆ. ಸಂವಿಧಾನಬಾಹಿರ ಎಂದು ನಿರ್ಧರಿಸಿದೆ.
*ರಾಜ್ಯಪಾಲರು ರಾಷ್ಟ್ರಪತಿ, ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡಬೇಕೇ ಹೊರತು, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ರಾಜ್ಯಪಾಲರ ಈ ಧೋರಣೆಯನ್ನು ಸಚಿವ ಸಂಪುಟ ತೀವ್ರವಾಗಿ ಖಂಡಿಸಿದೆ ಎಂದು ಅವರು ಹೇಳಿದರು.
*ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಚುನಾಯಿತ ಸರ್ಕಾರವನ್ನು ಅಸ್ತಿರಗೊಳಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಧಕ್ಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಪ್ರಜಾತಂತ್ರಕ್ಕೆ ಧಕ್ಕೆ ಎಂದು ಸಚಿವ ಸಂಪುಟ ನಿರ್ಣಯಿಸಿದೆ.
*ಎಲ್ಲಾ ರಾಜ್ಯ ಸರ್ಕಾರಗಳ ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ 3rd September 2021 ಕ್ಕೆ ಕೇಂದ್ರ ಸರ್ಕಾರವೇ ಕಳುಹಿಸಿರುವ ಸುತ್ತೋಲೆ ಪ್ರಕಾರವೇ ರಾಜ್ಯಪಾಲರು ಪ್ರೊಸೀಜರ್ ಅನುಸರಿಸಿಲ್ಲ. ಸುತ್ತೋಲೆಯಲ್ಲಿರುವ ನಿರ್ದೇಶನಗಳನ್ನೇ ರಾಜ್ಯಪಾಲರು ಪಾಲಿಸಿಲ್ಲ. ಆದ್ದರಿಂದ ರಾಜ್ಯಪಾಲರ ನಿರ್ಣಯ ಕಾನೂನುಬಾಹಿರ.
*ಈ ಕಾನೂನುಬಾಹಿರ ತೀರ್ಮಾನದ ವಿರುದ್ಧ ಕಾನೂನು ಹೋರಾಟ ನಡೆಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ.
*ಚುನಾಯಿತ ಸರ್ಕಾರವನ್ನು ಕಿತ್ತಾಕುವ ಕೇಂದ್ರ ಸರ್ಕಾರದ ದುರುದ್ದೇಶದ ಪ್ರಯತ್ನಕ್ಕೆ ನಾವು ತಡೆಯೊಡ್ಡಬೇಕು ಎಂದು ನಿರ್ಣಯಿಸಿದ್ದೇವೆ.
*ನಮ್ಮ ಯಶಸ್ವೀ ಗ್ಯಾರಂಟಿ ಯೋಜನೆಗಳನ್ನು ಮೋದಿ ಮತ್ತು ಅಮಿತ್ ಶಾ ಕೂಡ ವಿರೋಧಿಸಿದ್ದರು. ಹೀಗಾಗಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಕುಟಿಲತನವನ್ನು ಯಶಸ್ವಿಯಾಗಿ ವಿರೋಧಿಸಿ ಸತ್ಯವನ್ನು ಗೆಲ್ಲಿಸುತ್ತೇವೆ.
*ಅಬ್ರಹಾಂ ಎನ್ನುವವರು 26-7-2024 ರ ಬೆಳಗ್ಗೆ 11:30 ಗೆ ದೂರು ನೀಡಿದರೆ ಅದೇ ದಿನ10 ಗಂಟೆಗೇ ರಾಜ್ಯಪಾಲರು ಶೋ ಕಾಸ್ ನೋಟಿಸ್ ರೆಡಿ ಮಾಡಿದ್ದರು.
*ಆದರೆ ಶಶಿಕಲಾ ಜೊಲ್ಲೆ, ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಿದರೂ ಅವರ ವಿರುದ್ಧದ ತನಿಖೆಗೆ ಅನುಮತಿ ನೀಡಿಲ್ಲ.
*ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ತನಿಖೆ ನಡೆದು ಕುಮಾರಸ್ವಾಮಿ ತಪ್ಪಿತಸ್ಥ ಎಂದು ಉಲ್ಲೇಖವಾಗಿದ್ದರೂ , ತನಿಖೆಯ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಿದ್ದರೂ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿಲ್ಲ.
*ಹಾಗೆಯೇ ಮುರುಗೇಶ್ ನಿರಾಣಿ ಮತ್ತು ಜನಾರ್ಧನ ರೆಡ್ಡಿ ಅವರ ವಿರುದ್ಧ ತನಿಖೆ ನಡೆದು ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗಿ, ತನಿಖಾ ವರದಿ ಉಲ್ಲೇಖವಾಗಿದ್ದರೂ ಇದೇ ರಾಜ್ಯಪಾಲರು ಕ್ರಮಕ್ಕೆ ಅನುಮತಿ ನೀಡಿಲ್ಲ.
*ಆದರೆ ನನ್ನ ವಿಚಾರದಲ್ಲಿ ಮಾತ್ರ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ. ನನ್ನ ವಿರುದ್ಧ ತನಿಖೆ ನಡೆದಿಲ್ಲ. ತನಿಖೆಯಲ್ಲಿ ನನ್ನ ಪಾತ್ರದ ಉಲ್ಲೇಖವಿಲ್ಲ. ನನ್ನ ಪಾತ್ರದ ಬಗ್ಗೆ ಯಾರೂ ಯಾವುದೇ ದಾಖಲೆ ಕೊಟ್ಟಿಲ್ಲ. ನನ್ನ ಸರ್ಕಾರದ ಅವಧಿಯಲ್ಲಿ ನಡೆದ ವಿಚಾರ ಇದಲ್ಲ. ನನ್ನಿಂದ ಒಂದೂ ಪತ್ರ ಹೋಗಿಲ್ಲ. ನನ್ನ ಸಹಿ ಎಲ್ಲೂ ಇಲ್ಲ. ನನ್ನಿಂದ ಒಂದೂ ಮನವಿ ಪತ್ರವೂ ಹೋಗಿಲ್ಲ. ಎಲ್ಲವೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವುದು ಎಂದು ಸಿದ್ದರಾಮಯ್ಯ ಹೇಳಿದರು.
*ನಾನು ಏಕೆ ರಾಜೀನಾಮೆ ನೀಡಬೇಕು? ನನ್ನ ಪಾತ್ರದ ಬಗ್ಗೆ ಎಲ್ಲೂ, ಯಾರೂ ಹೇಳುತ್ತಿಲ್ಲ. ಆದರೂ ನಾನೇಕೆ ರಾಜೀನಾಮೆ ನೀಡಲಿ ಹೇಳಿ ಎಂದು ಪ್ರಶ್ನಿಸಿದರು.
ಹೀಗೆ ಯಾವುದೇ ದಾಖಲೆ, ಸಾಕ್ಷ್ಯ, ತನಿಖೆ ಇಲ್ಲದಿದ್ದರೂ ರಾಜ್ಯಪಾಲರು ಆಧಾರವಿಲ್ಲದೆ ಅನುಮತಿ ನೀಡಿ ಕೇಂದ್ರದ ಒತ್ತಡಕ್ಕೆ ಒಳಗಾಗಿದ್ದಾರೆ.
*ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರು ರಾಜೀನಾಮೆ ನೀಡಬೇಕು. *ದೊಡ್ಡ ಷಡ್ಯಂತ್ರ ನಡೆಯುತ್ತಿರುವುದು ನಮಗೆ ಗೊತ್ತಿತ್ತು. ಅದಕ್ಕೆ ನಾವೂ ಹೋರಾಟದ ಸಿದ್ಧತೆ ಮಾಡಿಕೊಂಡಿದ್ದೇವೆ.
*ಬಿಜೆಪಿ-ಜೆಡಿಎಸ್ ರಾಜ್ಯದ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ. ನಾವು ಸತ್ಯ ಮುಂದಿಟ್ಟು ಜನರ ನಡುವೆ ಮತ್ತಷ್ಟು ಗಟ್ಟಿ ಆಗುತ್ತೇವೆ.
*ನಮ್ಮ ಸಮಾವೇಶಕ್ಕೆ ಒಂದೂವರೆ ಲಕ್ಷ ಜನ ಸೇರಿದ್ದರು. ಬಿಜೆಪಿಗೆ 30 ಸಾವಿರ ಕೂಡ ಸೇರಿಲ್ಲ. ಜನ ನಮ್ಮ ಪರವಾಗಿ ಇರುವುದಕ್ಕೆ ಇದೇ ಸಾಕ್ಷಿ ಎಂದರು.
ಇದೇ ವೇಳೆ, *ತುಂಗ ಭದ್ರಾ ಡ್ಯಾಂಗೆ 5 ಗೇಟುಗಳ ಯಶಸ್ವಿ ಅಳವಡಿಕೆಗೆ ಕೃತಜ್ಞತೆ ಸಲ್ಲಿಸಿದ ಸಿಎಂ, ಡಿಸಿಎಂ. ರಾಜ್ಯದ ಜನತೆ, ರಾಜ್ಯದ ರೈತರ ಪರವಾಗಿ ಕನ್ನಯ್ಯ ನಾಯ್ಡು ಮತ್ತು ಅಧಿಕಾರಿಗಳು, ಎಂಜಿನಿಯರ್ ಗಳು, ಸಿಬ್ಬಂದಿ, ಕಾರ್ಮಿಕರಿಗೆ ಧನ್ಯವಾದ, ಕೃತಜ್ಞತೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ