ಉತ್ತರ ಕರ್ನಾಟಕ ಪ್ರವಾಹ: ವಿಶೇಷ ಅಧಿವೇಶನ ಕರೆಯಿರಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ:
ಗೋಕಾಕ ನಗರದಲ್ಲಿ ಎಂದೂ ಕಂಡರಿಯದ ಪ್ರವಾಹಕ್ಕೆ ಜನತೆ ಸಿಲುಕಿ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಪ್ರವಾಹ ಪೀಡಿತ ಜನರಿಗೆ ಪುನರ್ವಸತಿ ಕಲ್ಪಿಸುವಂತೆ ಸರಕಾರಕ್ಕೆ ಮಾಜಿ ಸಿಎಮ್ ಸಿದ್ಧರಾಮಯ್ಯ ಆಗ್ರಹಿಸಿದರು.
ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪರಿಹಾರ ಕೇಂದ್ರಗಳನ್ನು ತೆರೆದು ನಿರಾಶ್ರಿತರಿಗೆ ಆಹಾರ ಕಲ್ಪಿಸಿದರೆ ಸಾಲದು ಸಂತ್ರಸ್ತರ ಬದುಕನ್ನು ಕಟ್ಟಲು ತಾತ್ಕಾಲಿಕ ನೀಡುತ್ತಿರುವ ೧೦ ಸಾವಿರ ರೂಪಾಯಿ ಸಹಾಯ ಧನವನ್ನು ಮನೆಮಾಲಿಕರ ಜೊತೆಗೆ ಬಾಡಿಗೆದಾರರಿಗೂ ಪರಿಗಣಿಸಿ ತಕ್ಷಣದಲ್ಲೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ತಾತ್ಕಾಲಿಕವಾಗಿ ನೀಡುತ್ತಿರುವ ಪರಿಹಾರ ಧನವನ್ನು ೨೫ ಸಾವಿರಕ್ಕೆ ಏರಿಸಿ, ಮನೆ ನಿರ್ಮಾಣಮಾಡಿಕೊಳ್ಳಲು ನಿರಾಶ್ರಿತರಿಗೆ ಘೋಷಿಸಿರುವ ೫ ಲಕ್ಷ ರೂಗಳನ್ನು ೧೦ ಲಕ್ಷ ರೂಗಳಿಗೆ ಏರಿಸಿ, ನಿರಾಶ್ರಿತರು ಪುನರ್ವಸತಿ ಕಲ್ಪಿಸಿಕೊಳ್ಳಲು ಸಹಕರಿಸಬೇಕೆಂದರು.
ಯಾರ ಒತ್ತಡಕ್ಕೂ ಒಳಗಾಗದೇ ನಿಜವಾದ ಸಂತ್ರಸ್ತರನ್ನು ಗುರುತಿಸಿ ತಕ್ಷಣದಲ್ಲೆ ಪರಿಹಾರ ಧನದ ಮೊತ್ತ, ಮನೆ ಬಾಡಿಗೆ ಸಹಾಯ ಧನ, ತಾತ್ಕಾಲಿಕ ಶೇಡಗಳನ್ನು ನಿರ್ಮಿಸಲು ಹಣ ನೀಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ ಹಾಗೂ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ವಿಶೇಷ ಅಧಿವೇಶನಕ್ಕೆ ಒತ್ತಾಯ:
ಪ್ರವಾಹದಿಂದ ಹಾನಿಗೊಳಗಾದ ಉತ್ತರ ಕರ್ನಾಟಕದ ಎಲ್ಲ ಭಾಗಗಳಲ್ಲಿ ಸಮೀಕ್ಷೆ ಮಾಡಿ, ನಮ್ಮ ಪಕ್ಷದ ಪ್ರಮುಖರು ಸಿದ್ಧಪಡಿಸಿದ ವರದಿಯನ್ನು ಆಧರಿಸಿ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಲು ಒತ್ತಾಯಿಸಲಾಗುವುದು ಎಂದರು.
ಇಂದಿರಾ ಕ್ಯಾಂಟೀನ ತನಿಖೆಗೆ ಸಿದ್ಧ:
ರಾಜ್ಯದಲ್ಲಿ ಕಾಂಗ್ರೇಸ್ ಸರಕಾರವಿದ್ದಾಗ ಬಡವರ ಹಸಿವನ್ನು ನೀಗಿಸಲು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿದ್ದು, ಇಂದಿರಾ ಕ್ಯಾಂಟೀನ್ ಬಂದ್ ಮಾಡಲು ಪ್ರಯತ್ನಿಸುತ್ತಿರುವುದು ರಾಜಕೀಯ ಪ್ರೇರಿತವಾಗಿದೆ. ಬಡಜನರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ಖಾರವಾಗಿ ನುಡಿದರು.
ಈ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದದ್ದು. ಈ ಬಗ್ಗೆ ಯಾವುದೇ ತನಿಖೆಗೆ ನಾನು ಸಿದ್ಧನಿದ್ದೆನೆ ಎಂದು ಸಿದ್ದರಾಮಯ್ಯ ಹೇಳಿದರು.
ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ, ಲಖನ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಾಥ್ ನೀಡಿದರು.
ಗೋಕಾಕ ನಗರ ಪ್ರದೇಶ, ಗೋಕಾಕ ತಾಲೂಕಿನ ಅಂಕಲಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರಸ್ತೆ, ಮನೆ, ಬೀದಿ ದೀಪ, ಬೆಳೆ ನಾಶ ಸೇರಿದಂತೆ ಹಾನಿಗೊಳಗಾದ ಪ್ರವಾಹ ಪ್ರದೇಶಗಳನ್ನು ಮಾಜಿ ಸಿಎಂ ವೀಕ್ಷಿಸಿದರು. ನೆರೆ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದರು.
ಪ್ರವಾಹ ಪೀಡಿತ ಸ್ಥಳದಿಂದಲೇ ಡಿಸಿಗೆ ಪೋನ್:
ಇಂದು ಗೋಕಾಕಕ್ಕೆ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಮಾಜಿ ಮುಖ್ಯಮಂತ್ರಿಗಳಿಗೆ ಸಾವಿರಾರು ಜನರು ಮಳೆಯಿಂದ ತಮಗಾದ ಎಲ್ಲಾ ಸಮಸ್ಯೆಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಬೋಜಗಾರ ಗಲ್ಲಿಯಲ್ಲಿಯ ಅಜ್ಜಿ ಸಿದ್ದರಾಮಯ್ಯನವರಿಗೆ ಕೈ ಮುಗಿದು ನಮಗೆ ಮನೆ ಇಲ್ಲ, ಮನೆ ಕೊಡಿಸಿ ಎಂದು ಕಣ್ಣೀರಿಟ್ಟರು.
ಈ ವೇಳೆ ಸಿದ್ಧರಾಮಯ್ಯ ಮನೆ ಕೊಡಿಸುವುದಾಗಿ ಭರವಸೆಯನ್ನು ನೀಡಿದರು. ಸಂತ್ರಸ್ಥರ ಪರಿಸ್ಥಿತಿಯನ್ನ ನೋಡಿ ಬೆಳಗಾವಿಯ ಡಿಸಿ ಎಸ್ ಬಿ ಬೊಮ್ಮನಹಳ್ಳಿಯವರಿಗೆ ಕರೆ ಮಾಡಿ ಜನರ ಸಮಸ್ಯೆಯನ್ನು ಆಲಿಸುವಂತೆ ತಿಳಿಸಿದರು.
ಚುನಾವಣೆಗೆ ಸಿದ್ದರಾಗಿ
ಗೋಕಾಕ ನಗರ ಪ್ರದೇಶದ ಪ್ರವಾಹ ಪೀಡಿತ ಗಲ್ಲಿಗಳಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ಪ್ರವಾಹ ವಿಕ್ಷಣೆ ಮಾಡಿದ ಮಾಜಿ ಸಿಎಮ್ ಸಿದ್ಧರಾಮಯ್ಯ, ಪ್ರವಾಹ ವಿಕ್ಷಣೆ ಮಧ್ಯೆ ರಾಜಕೀಯ ಚಟುವಟಿಕೆಯನ್ನು ಕೂಡಾ ನಡೆಸಿದ್ದು ನಗರದ ಜನರಲ್ಲಿ ಕೂತುಹಲ ಮೂಡಿಸಿದೆ.
ಮಾಜಿ ಸಿಎಮ್ ತಮ್ಮ ಕಾರನಲ್ಲಿ ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಅವರನ್ನು ಕೂಡ್ರಿಸಿಕ್ಕೊಂಡು ಉಪಚುನಾವಣೆಯ ಬಗ್ಗೆ ತಯಾರಿ ಮಾಡಿಕ್ಕೊಳ್ಳುವಂತೆ ಮಾಹಿತಿಯನ್ನು ನೀಡಿದ್ದಾರೆಂದು ಗೊತ್ತಾಗಿದೆ.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮುಖಂಡ ಅರವಿಂದ ದಳವಾಯಿ ಸೇರಿದಂತೆ ಮತ್ತಿತರರು ಇದ್ದರು.
ಯಡಿಯೂರಪ್ಪ ಕಿವಿ ಹಿಂಡಿ ಕೇಳುತ್ತೇವೆ
ಮೆಳವಂಕಿ ಸೇರಿ ಹಲವು ಗ್ರಾಮಗಳು ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಯಾದ ಗ್ರಾಮಗಳಾಗಿದ್ದು ವಾಸ್ತವ್ಯ ಮಾಡಲು ಯೋಗ್ಯವಲ್ಲ, ಮತ್ತೆ ಯಾವಾಗಾದರೂ ಪ್ರವಾಹ ಬರಬಹುದು, ಮತ್ತೆ ಊರು ಮುಳುಗಡೆಯಾಗುತ್ತೆ, ಇಂತಹ ಊರುಗಳನ್ನ ಸಂಪೂರ್ಣವಾಗಿ ಸ್ಥಳಾಂತರ ಮಾಡಲೆಬೇಕು ಎಂದು ಮಾಜಿ ಸಿಎಮ್ ಸಿದ್ಧರಾಮಯ್ಯ ಹೇಳಿದರು.
ಮೇಳವಂಕಿ ಹಾಗೂ ಲೋಳಸೂರ ಗ್ರಾಮದಲ್ಲಿ ನಿರಾಶ್ರಿತರನ್ನುದ್ದೇಶಿಸಿ ಮಾತನಾಡಿ, ವಾಸ್ತವ್ಯ ಮಾಡಲು ಯೋಗ್ಯವಲ್ಲದ ಗ್ರಾಮಗಳನ್ನು ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿ ಸರ್ಕಾರದ ಗಮನಕ್ಕೂ ತರುತ್ತೇನೆ ಎಂದರು.
ಮನೆಗಳಿಗೆ ನೀಡಿದ ಪರಿಹಾರ ಸಾಲದು ಇನ್ನೂ ಹೆಚ್ಚು ಪರಿಹಾರ ಸರ್ಕಾರ ನೀಡಬೇಕು, ಒಂದು ಮನೆ ಕಟ್ಟಿಕೊಳ್ಳಲು ಹತ್ತು ಲಕ್ಷ ಪರಿಹಾರ ಕೊಡಬೇಕು. ಇದನ್ನು ಸರ್ಕಾರ ಮಾಡಲೇಬೇಕು. ಇದಕ್ಕಿಂತ ದೊಡ್ಡ ಕೆಲಸ ಸರ್ಕಾರದ್ದು ಬೇರೇನೂ ಇಲ್ಲ. ಮನುಷ್ಯರ ಜೀವ ಉಳಿಸುವ ಕೆಲಸ ಸರ್ಕಾರ ಮಾಡಬೇಕಿದೆ. ಒಂದು ಎಕರೆ ಬೆಳೆ ಹಾನಿಗೆ ಐದು ಸಾವಿರ ಪರಿಹಾರ ರೈತರಿಗೆ ಸಾಲುವುದಿಲ್ಲ. ರೈತ ಕುಟುಂಬಗಳಿಗೆ ಒಂದು ಎಕರೆಗೆ ಐವತ್ತು ಸಾವಿರ ಬೆಳೆ ಹಾನಿಗೆ ಸರ್ಕಾರ ನೀಡಬೇಕು. ಅಲ್ಲದೇ ಒಂದು ಮನೆಯಲ್ಲಿ ಇಬ್ಬರು ಅಣ್ಣತಮ್ಮಂದಿರು ಇದ್ದರೆ ಅಂತಹ ಸಹೋದರರಿಗೆ ಪ್ರತ್ಯೇಕ ಮನೆ ಕೊಡುವಂತೆ ಒತ್ತಾಯಿಸುತ್ತೇನೆ.
ಒಂದು ದಿನದ ಪ್ರತಿಭಟನೆ
ನಾನು ಬೆಂಗಳೂರಿಗೆ ಹೋದಮೇಲೆ ಸರ್ಕಾರಕ್ಕೂ ಒತ್ತಾಯ ಮಾಡುತ್ತೇವೆ. ಸ್ಫಂದಿಸದಿದ್ದಲ್ಲಿ ಒಂದು ದಿನದ ಕಾಲ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಯಡಿಯೂರಪ್ಪ ನವರಿಗೆ ಒತ್ತಡ ಹಾಕುತ್ತೇವೆ, ನಿಮಗೆ ಪರಿಹಾರ ಕೊಡಿಸಲು ಯಡಿಯೂರಪ್ಪ ಕಿವಿ ಹಿಂಡಿ ಕೇಳುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಲೊಳಸೂರ, ಅಡಿಬಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ನಿರಾಶ್ರಿತರ ಅಹವಾಲು ಸ್ವೀಕರಿಸಿದರು.
ಕಾಕತಾಳಿ ಎಂಬಂತೆ ೨೦೦೯ ರಲ್ಲಿ ಯಡಿಯೂರಪ್ಪ ಸಿಎಂ ಆದಾಗ ಪ್ರವಾಹ ಬಂತು, ಈಗ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಈಗ ಮತ್ತೆ ಪ್ರವಾಹ ಬಂದಿದೆ. ನಾನು ಐದು ವರ್ಷ ಆಡಳಿತದಲ್ಲಿದ್ದಾಗ ಪ್ರವಾಹ ಬರಲಿಲ್ಲ ಎಂದು ಯಡಿಯೂರಪ್ಪಗೆ ಪ್ರವಾಹದ ವಿಚಾರದಲ್ಲಿ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ವೇದಿಕೆಯ ಮೇಲೆ ಸಚಿವ, ಶಾಸಕ ಸತೀಶ ಜಾರಕಿಹೊಳಿ, ಲಖನ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮುಖಂಡ ಅರವಿಂದ ದಳವಾಯಿ, ಡಾ. ರಾಜೇಂದ್ರ ಸಣ್ಣಕ್ಕಿ, ಅರಭಾಂವಿ ಬ್ಲಾಕ್ ಅಧ್ಯಕ್ಷ ಗುರುರಾಜ ಪೂಜೇರ, ಕೌಜಲಗಿ ಬ್ಲಾಕ್ ಅಧ್ಯಕ್ಷ ಲಕ್ಷ್ಮಣ ಅಲಕನವರ, ಭೀಮಶಿ ಕಾರದಗಿ, ಎಲ್ ಕೆ ಕಳಸನ್ನವರ, ಹನಮಂತ ಚಿಕ್ಕೆಗೌಡ, ವಿರಣ್ಣ ಮೋಡೆ, ಇಮಾಮ ಹೂನುರ ಸೇರಿದಂತೆ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ