ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಚೇರಿಯ ಕೆಲಸದಲ್ಲಿ ಸಮಯಪ್ರಜ್ಞೆ, ಕಾರ್ಯನಿಷ್ಠೆ ಇಲ್ಲದ ಸರಕಾರಿ ಅಧಿಕಾರಿ, ಸಿಬ್ಬಂದಿಗೆ ಸರಕಾರ ಮೂಗುದಾರ ಹಾಕಿದೆ.
ಜನಸಾಮಾನ್ಯರಿಗೆ ಸಕಾಲದಲ್ಲಿ ಕಚೇರಿಯಲ್ಲಿ ಲಭ್ಯವಿರದ ಅಧಿಕಾರಿ, ಸಿಬ್ಬಂದಿ ಇನ್ನು ಮುಂದೆ ಈ ಅಶಿಸ್ತು ಮುಂದುವರಿಸಿದರೆ ಕ್ರಮ ಕೈಗೊಳ್ಳುವುದಾಗಿ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸುತ್ತೋಲೆ ಹೊರಡಿಸಿದ್ದಾರೆ.
ಸಾರ್ವಜನಿಕರು ದೂರದ ಸ್ಥಳಗಳಿಂದ ಕೆಲಸಕ್ಕಾಗಿ ಬೆಳಗ್ಗೆ ನಿಗದಿತ ಅವಧಿಗೆ ಕಚೇರಿಗೆ ಭೇಟಿ ನೀಡಿದಾಗ ಬಹುತೇಕ ಕಚೇರಿಗಳಲ್ಲಿ ಸಿಬ್ಬಂದಿ, ಅಧಿಕಾರಿಗಳು ಕಚೇರಿಯಲ್ಲಿ ಹಾಜರಿರದ ಕಾರಣ ಜನ ಬವಣೆ ಪಡುವಂತಾಗಿದೆ.
ಅಧಿಕಾರಿ, ಸಿಬ್ಬಂದಿ ಇನ್ನು ಮುಂದೆ ಬೆಳಗ್ಗೆ 10ಕ್ಕೆ ಕಚೇರಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಕಚೇರಿ ಅವಧಿ ಪೂರ್ಣಗೊಳ್ಳುವವರೆಗೂ ಕಚೇರಿಯಲ್ಲೇ ಇರಬೇಕು. ಕಚೇರಿ ಅವಧಿಯಲ್ಲಿ ಅನ್ಯ ಕರ್ತವ್ಯದ ಮೇಲೆ ತೆರಳಬೇಕಾದಲ್ಲಿ ಚಲನವಲನ ವಹಿಯಲ್ಲಿ ಸಕಾರಣ ನಮೂದಿಸಿ ಮೇಲಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು. ನಿಗದಿತ ಕಾಲಾವಧಿಯಲ್ಲಿ ಕಚೇರಿಗೆ ಹಾಜರಾಗದ, ಕಚೇರಿ ಅವಧಿಯಲ್ಲಿ ಸ್ವಸ್ಥಾನದಲ್ಲಿ ಇರದ ಹಾಗೂ ಚಲನವಲನ ವಹಿಯಲ್ಲಿ ನಮೂದಿಸದೆ, ಮೇಲಧಿಕಾರಿಗಳ ಅನುಮತಿ ಪಡೆಯದ ಅಧಿಕಾರಿ, ಸಿಬ್ಬಂದಿ ವಿರುದ್ಧ ಸಕ್ಷಮ ಪ್ರಾಧಿಕಾರ ಸೂಕ್ತ ಶಿಸ್ತುಕ್ರಮ ಜರುಗಿಸಬೇಕು ಎಂದು ಅವರು ಆದೇಶಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ