*ಪ್ರೀತಿಗೆ ವಿರೋಧ: ತಾಯಿ ಹಾಗೂ ಸಹೋದರನನ್ನು ಕೊಲೆ ಮಾಡಿದ ಪ್ರಿಯಕರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರೀತಿ ವಿರೋಧ ಮಾಡಿದಕ್ಕೆ ಪ್ರೇಯಸಿಯ ತಾಯಿ ಹಾಗೂ ಸಹೋದರನನ್ನು ಪ್ರಿಯಕರ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಅಕ್ಕೋಳ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಂಗಳ ನಾಯಕ (45), ಪ್ರಜ್ವಲ್ ನಾಯಕ (18) ಎಂದು ಗುರುತಿಸಲಾಗಿದೆ. ಕಳೆದ ಕೆಲ ತಿಂಗಳಿಂದ ಮಂಗಳ ಅವರ ಮಗಳು ಹಾಗೂ ರವಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ತಾಯಿ ಮಗಳನ್ನು ಕರೆದು ಬುದ್ದಿ ಮಾತು ಹೇಳಿದ್ದಾರೆ.
ತಾಯಿ ಬುದ್ಧಿ ಮಾತು ಹೇಳಿದರೂ ಕೇಳದ ಮಗಳು ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದಾಳೆ. ಇದಕ್ಕೆ ಮತ್ತೆ ಮನೆಯಲ್ಲಿ ಜಗಳವಾಗಿದೆ. ಇದರಿಂದ ಸಿಟ್ಟಾದ ಆರೋಪಿ ರವಿ ಏಕಾಏಕಿ ಮನೆಗೆ ನುಗ್ಗಿ ಕಬ್ಬಿಣದ ರಾಡ್ ನಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ.
ಆರೋಪಿ ರವಿ ಕಬ್ಬಿಣದ ರಾಡ್ ನಿಂದ ಮಂಗಳ ಹಾಗೂ ಪ್ರಜ್ವಲ್ ತಲೆಗೆ ಬಲವಾಗಿ ಹೊಡೆದ ಪರಿಣಾಮ ತಲೆ ಒಡೆದು, ತೀವ್ರ ರಕ್ತಸ್ರಾವದಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರವಿ ಹಾಗೂ ಮಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ