CrimeKannada NewsKarnataka NewsLatest

*MRPL ಸ್ಫೋಟ*: *ಮೃತ ಮನೀಶ್ ಕರ್ಕಡ ಕುಟುಂಬಕ್ಕೆ 1.20 ಕೋಟಿ ಪರಿಹಾರ, ಪ್ರತಿಭಟನೆ ಬೆನ್ನಲ್ಲೇ ಆದೇಶ*

ಪ್ರಗತಿವಾಹಿನಿ ಸುದ್ದಿ: ಮಂಗಳೂರಿನ ಎಂಆರ್‌ಪಿಎಲ್ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟ ಮತ್ತು ಅಗ್ನಿ ಅನಾಹುತದಲ್ಲಿ ಮೃತಪಟ್ಟ ಹಳೆಯಂಗಡಿ ನಿವಾಸಿ, ಗುತ್ತಿಗೆ ನೌಕರ ಮನೀಶ್ ಕರ್ಕಡ ಕುಟುಂಬಕ್ಕೆ ಒಟ್ಟು 1.20 ಕೋಟಿ ರೂಪಾಯಿ ಪರಿಹಾರ ನೀಡಲು ಎಂಆರ್‌ಪಿಎಲ್ ಒಪ್ಪಿಗೆ ನೀಡಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ಯಾಮಪ್ರಸಾದ್ ಕಾಮತ್ ಈ ಕುರಿತು ಅಧಿಕೃತ ಆದೇಶ ಪತ್ರ ಬಿಡುಗಡೆ ಮಾಡಿದ್ದಾರೆ.

ಸ್ಫೋಟದ ಬಳಿಕ ಇಂದು ಬೆಳಗ್ಗೆ ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ಎಂಆರ್‌ಪಿಎಲ್ ಗುತ್ತಿಗೆ ಕಾರ್ಮಿಕರು ಸಂಸ್ಥೆಯ ಕಚೇರಿ ಗೇಟ್‌ಮುಂದೆ ಪ್ರತಿಭಟನಾ ಧರಣಿ ನಡೆಸಿದ್ದರು. ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಗಾಯಗೊಂಡ ಕಾರ್ಮಿಕರ ಚಿಕಿತ್ಸಾ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಲಾಗಿತ್ತು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್, ಎಂಆರ್‌ಪಿಎಲ್ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಚರ್ಚೆ ನಡೆಯಿತು.

ಸಭೆಯಲ್ಲಿ ಆರಂಭಿಕವಾಗಿ ಒಂದು ಕೋಟಿ ರೂಪಾಯಿ ಪರಿಹಾರ ನೀಡಲು ಒಪ್ಪಿಗೆ ನೀಡಲಾಯಿತು. ಗಾಯಗೊಂಡ ಕಾರ್ಮಿಕರ ಚಿಕಿತ್ಸಾ ವೆಚ್ಚವನ್ನು ವೇತನ ಸಹಿತವಾಗಿ ಭರಿಸುವುದು ಹಾಗೂ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕಾರ್ಮಿಕರಿಗೆ ಮೆಡಿಕಲ್ ವಿಮಾ ಸೌಲಭ್ಯ ಕಲ್ಪಿಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯ ಬಳಿಕ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಶ್ಯಾಮಪ್ರಸಾದ್ ಕಾಮತ್ ಅಧಿಕೃತ ಆದೇಶ ಪತ್ರ ಬಿಡುಗಡೆ ಮಾಡಿದ್ದಾರೆ. ಅದರಂತೆ ಮೃತ ಮನೀಶ್ ಕರ್ಕಡ ಕುಟುಂಬಕ್ಕೆ ಒಟ್ಟು 1.20 ಕೋಟಿ ರೂಪಾಯಿ ಪರಿಹಾರ ನೀಡಲಾಗುತ್ತದೆ.

ಇದರಲ್ಲಿ 90 ಲಕ್ಷ ರೂಪಾಯಿ ಪರಿಹಾರ ಧನ, 10 ಲಕ್ಷ ರೂಪಾಯಿ ಜಿಟಿಎಲ್‌ಐ ಹಾಗೂ 20 ಲಕ್ಷ ರೂಪಾಯಿ ಡಬ್ಲ್ಯುಸಿಪಿ ಮೊತ್ತ ಸೇರಿದೆ. ಈ ಮೂಲಕ ಕುಟುಂಬಕ್ಕೆ ಒಟ್ಟು 1.20 ಕೋಟಿ ರೂಪಾಯಿ ಪರಿಹಾರ ದೊರೆಯಲಿದೆ.

ಸಭೆಯಲ್ಲಿ ಎಂಆರ್‌ಪಿಎಲ್ ಎಚ್‌ಆರ್ ವಿಭಾಗದ ಜಿಜಿಎಂ ಪ್ರಶಾಂತ ಪದುವಾಳ್, ಜಿಎಂ ಮನೋಜ್ ಕುಮಾರ್, ಎಂಆರ್‌ಪಿಎಲ್ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ, ಉಪಾಧ್ಯಕ್ಷ ಸತೀಶ್ ಮಂಗಳಪೇಟೆ ಹಾಗೂ ಪ್ರಧಾನ ಕಾರ್ಯದರ್ಶಿ ಸಾಯಿ ಪೃಥ್ವಿ ಭಾಗವಹಿಸಿದ್ದರು. ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್, ಉಪಾಧ್ಯಕ್ಷ ಸುರೇಶ್ ಪುಸ್ರಾಲ್, ಸುರೇಂದ್ರ ಭಟ್ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button