*ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿದ ಪದ್ಮಶ್ರೀ ಪುಸ್ಕೃತ ಬ್ಯಾಡ್ಮಿಂಟನ್ ತಾರೆ ಪ್ರಕಾಶ ಪಡುಕೋಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪದ್ಮಶ್ರೀ ಪುಸ್ಕೃತ ಬ್ಯಾಡ್ಮಿಂಟನ್ ತಾರೆ ಪ್ರಕಾಶ ಪಡುಕೋಣೆ ಅವರು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದರು.
ಆಸ್ಪತ್ರೆಗೆ ಆಗಮಿಸಿದ ಅವರನ್ನು ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಸ್ವಾಗತಿಸಿದರು. ನಂತರ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು. ಅತ್ಯಾಧುನಿಕ ಪ್ರಯೋಗಾಲಯ, ಫರ್ಟಿಲಿಟಿ ಕೇಂದ್ರ, ಚಾರಿಟೇಬಲ್ ವಾರ್ಡ, ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿದರು.
ನಂತರ ಮಾತನಾಡಿದ ಅವರು, ಬೆಳಗಾವಿಯಂತ ನಗರದಲ್ಲಿ ಇಂತ ಬೃಹತ್ತಾದ ಆಸ್ಪತ್ರೆ ಕಾರ‍್ಯನಿರ್ವಹಿಸುತ್ತಿದೆ. ಅದೂ ಸಕಲ ವ್ಯವಸ್ಥೆಯುಳ್ಳ ಬಹುವಿಧ ವೈದ್ಯಕೀಯ ಸೇವೆ ಒಂದೇ ಸೂರಿನಲ್ಲಿ ದೊರೆಯುತ್ತಿರುವದು ಅತ್ಯಂತ ಶ್ಲಾಘನೀಯ. ಅದರಲ್ಲಿಯೂ ಮುಖ್ಯವಾಗಿ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಅತ್ಯದ್ಭುತವಾಗಿದೆ. ಅತ್ಯಾಧುನಿಕವಾದ ವೈದ್ಯಕೀಯ ಸಾಮಗ್ರಿಗಳು, ಕಡಿಮೆ ವೆಚ್ಚದಲ್ಲಿ ಬೋನ್ ಮ್ಯಾರೋದಂತ ಶಸ್ತ್ರಚಿಕಿತ್ಸೆ ಹಾಗೂ ಪ್ರಕ್ರಿಯೆಗಳನ್ನು ನಡೆಸುತ್ತ ಈ ಭಾಗದ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಆಶಾಕಿರಣವಾಗಿರುವದು ಅತ್ಯಂತ ಶ್ಲಾಘನೀಯ ಎಂದರು.
ಆಸ್ಪತ್ರೆಯಲ್ಲಿ ಮಕ್ಕಳು ಮತ್ತು ತಾಯಿಯ ಆರೋಗ್ಯ ಕಾಳಜಿಗಾಗಿ ಪ್ರತ್ಯೇಕವಾಗಿ ಸ್ಥಾಪಿಸಲಾಗಿರುವ ವಿಭಾಗ, ಉಚಿತ ಹಾಗೂ ವಿಶೇಷ ವಾರ್ಡಗಳಿಗೆ ಭೇಟಿ ನೀಡಿದರು. ಆರ್ಥಿಕವಾಗಿ ಹಿಂದುಳಿದಿರುವ ಜನರಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡುತ್ತಿರುವದು ಪ್ರಶಂಸನೀಯ.
ಸುಮಾರು 1400 ಹಾಸಿಗೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವದು ಡಾ. ಕೋರೆ ಅವರಿಗೆ ಜನತೆಗಿರುವ ಕಾಳಜಿಯಿಂದ. ಅದರಲ್ಲಿಯೂ ಮುಖ್ಯವಾಗಿ ಪ್ರತಿಯೊಂದು ಖಾಯಿಲೆಗೆ ಇಲ್ಲಿಯೇ ಚಿಕಿತ್ಸೆ ದೊರೆಯುವಂತೆ ಮಾಡಿರುವದು ಶ್ಲಾಘನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಪಡುಕೋಣೆ ಅವರ ಪತ್ನಿ ಉಜಲಾ, ಕೆಎಲ್‌ಇ ಸ್ತ್ರೀ ಸಂಘದ ಡಾ. ಪ್ರೀತಿ ದೊಡವಾಡ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ) ಎಂ ದಯಾನಂದ, ಡಾ. ಸಂತೋಷ ಪಾಟೀಲ್ ಉಪಸ್ಥಿತರಿದ್ದರು.