ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಮೇ 4 ರಿಂದ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಎಲ್ಲ ರೀತಿಯ ಕೈಗಾರಿಕೆ ಆರಂಭಕ್ಕೆ ಮುಖ್ಯಮಂತ್ರಿಗಳು ನಿರ್ಧಾರ ಮಾಡಿದ್ದಾರೆ. ಕೈಗಾರಿಕೆ ಆರಂಭಿಸಲು ಅನುಮತಿ ಅಗತ್ಯವಿಲ್ಲ; ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸ್ವಯಂ ಘೋಷಣಾಪತ್ರ ಸಲ್ಲಿಸಿ ಕೈಗಾರಿಕೆ ಆರಂಭಿಸಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದರು.
ಉದ್ಯಮಬಾಗದ ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಶನಿವಾರ (ಮೇ 2) ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಮಿಕರಿಗೆ ಪಾಸ್ ಅಗತ್ಯವಿಲ್ಲ. ಕೈಗಾರಿಕೆಗಳ ಆರಂಭಕ್ಕೆ ಎಲ್ಲ ರೀತಿಯ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ.
ಸಣ್ಣ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಚರ್ಚೆ ನಡೆದಿದ್ದು, ಆದಷ್ಟು ಬೇಗನೆ ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ.
ವಿಶೇಷ ಪ್ಯಾಕೇಜ್ ಘೋಷಣೆಗೆ ಈಗಾಗಲೇ ಪ್ರಸ್ತಾವ ಕೂಡ ಸಲ್ಲಿಸಲಾಗಿದೆ. ಪ್ರಧಾನಮಂತ್ರಿಗಳು ಇದರ ಬಗ್ಗೆ ಘೊಷಣೆ ಮಾಡಬಹುದು.
ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿಕೊಂಡರು.
ಕೋವಿಡ್-೧೯ ಅನ್ನು ಸವಾಲಾಗಿ ಸ್ವೀಕರಿಸಿ ಎಲ್ಲರೂ ಒಟ್ಟಾಗಿ ಇದನ್ನು ಎದುರಿಸಬೇಕಿದೆ. ವಿದ್ಯುತ್ ಬಿಲ್ ಭರಿಸಲು ಕಾಲಾವಕಾಶ ನೀಡಲಾಗುತ್ತದೆ ಎಂದು ಸಚಿವ ಶೆಟ್ಟರ್ ಹೇಳಿದರು.
ಲಾಕ್ ಡೌನ್ ಯಶಸ್ಸಿಗೆ ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ಸಾಮಾನ್ಯ ಜನ ಸೇರಿದಂತೆ ಎಲ್ಲರೂ ಸಹಕಾರ ನೀಡಿದ್ದಾರೆ.
ಲಾಕ್ ಡೌನ್ ಮುಂದುವರಿಸಿದ್ದರೂ ಹಂತ ಹಂತವಾಗಿ ವಿವಿಧ ಬಗೆಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಝೋನ್ ಗಳ ಆಧಾರದ ಮೇಲೆ ಕೈಗಾರಿಕೆ ಮತ್ತಿತರ ಚಟುವಟಿಕೆಗಳಿಗೂ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಮಾತನಾಡಿ, ಸಕ್ಕರೆ ಕಾರ್ಖಾನೆ ಸೇರಿದಂತೆ ಕೆಲವು ಕಾರ್ಖಾನೆಗಳು ೨೪ ಗಂಟೆ ಕಾರ್ಯನಿರ್ವಹಿಸಬೇಕಾಗುತ್ತದೆ. ಆದ್ದರಿಂದ ನಿರಂತರ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ಕಾರ್ಮಿಕರಿಗೆ ಪಾಸ್ ಗಳ ಅಗತ್ಯವಿಲ್ಲದಿರುವುದರಿಂದ ದ್ವಿಚಕ್ರ ವಾಹನಗಳಲ್ಲಿ ಒಬ್ಬರೆ ಬರಬಹುದು. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆಗಳಿಂದ ಕಾರ್ಮಿಕರು ಮುಕ್ತವಾಗಿ ಸಂಚರಿಸಬಹುದು ಎಂದರು.
ಸ್ಟೀಲ್ ಮತ್ತು ಸಿಮೆಂಟ್ ಮುಕ್ತ ಮಾರುಕಟ್ಟೆಯಾಗಿರುವುದರಿಂದ ದರ ನಿಗದಿಪಡಿಸುವುದು ಸಾಧ್ಯವಿಲ್ಲ. ಸಂಚಾರ ಆರಂಭಗೊಂಡರೆ ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀಧರ ಉಪ್ಪಿನ ಮಾತನಾಡಿ, ಕೈಗಾರಿಕಾ ಕಾರ್ಮಿಕರಿಗೆ ಅಗತ್ಯವಿರುವ ಪಾಸ್ ಗಳನ್ನು ವಿತರಿಸಬೇಕು ಹಾಗೂ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಕೆಲಸದ ಅವಧಿಯೆ ನಾಲ್ಕು ಗಂಟೆಗಳ ಕಾಲ ವಿಸ್ತರಿಸಬೇಕು ಎಂದು ಮನವಿ ಮಾಡಿಕೊಂಡರು.
ಉದ್ಯಮಿಗಳಿಗೆ ಶೇ.೩ ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲಸೌಲಭ್ಯ ನೀಡಬೇಕು ಎಂದು ಕೋರಿದರು.
ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ ಜವಳಿ ಮಾತನಾಡಿ, ಕೈಗಾರಿಕೆಗಳ ಜತೆಗೆ ಕಚ್ಚಾಸಾಮಗ್ರಿ ಪೂರೈಕೆ ಘಟಕಗಳನ್ನು ಆರಂಭಿಸಿದರೆ ಮಾತ್ರ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
ಕೈಗಾರಿಕೆಗಳು ಸರಾಗವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಜಿಲ್ಲಾಮಟ್ಟದಲ್ಲಿ ಒಬ್ಬ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು; ಸಿಮೆಂಟ್ ಮತ್ತಿತರ ವಸ್ತುಗಳ ಬೆಲೆ ದಿಢೀರ್ ಏರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಮನವಿ ಮಾಡಿಕೊಂಡರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳ ಆರಂಭಕ್ಕೆ ಅಗತ್ಯವಿರುವ ಎಲ್ಲ ನೆರವುಗಳನ್ನು ನೀಡಲಾಗುವುದು ಎಂದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ, ಶಾಸಕರಾದ ಪಿ.ರಾಜೀವ, ಅನಿಲ್ ಬೆನಕೆ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಕೋವಿಡ್-೧೯ ಉಸ್ತುವಾರಿ ಅಧಿಕಾರಿ ರಾಜೇಂದ್ರ ಚೋಳನ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತರಾದ ಬಿ.ಎಸ್. ಲೋಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರಾದ ದೊಡ್ಡಬಸವರಾಜ್, ಕೃಷಿ ಮತ್ತಿತರ ಅವಶ್ಯಕ ಕೈಗಾರಿಕೆಗಳಿಗೆ ಈಗಾಗಲೇ ಮಾರ್ಗಸೂಚಿ ಅನ್ವಯ ಕೈಗಾರಿಕೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ