ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಡೆದ ಭಾರಿ ಪ್ರತಿಭಟನೆ ಹಾಗೂ ಹಿಂಸಾಚಾರದ ಹಿಂದೆ ಹಣದ ನಂಟು ಇರುವುದು ಪತ್ತೆಯಾಗಿದೆ.
ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಕೇರಳ ಮೂಲದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸೇರಿದ ವಿವಿಧ ಖಾತೆಗಳಿಗೆ ಒಂದೇ ತಿಂಗಳ ಅವಧಿಯಲ್ಲಿ 120 ಕೋಟಿ ರೂ. ಹಣ ಜಮೆಯಾಗಿರುವುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಯಲಾಗಿದೆ. ಪಿಎಫ್‌ಐ ಹಿಂಸಾಚಾರಕ್ಕೆ ಹಣ ಸಂಗ್ರಹಿಸಿ, ಬಳಸಿಕೊಂಡಿದೆ ಎಂಬ ಶಂಕೆ ದಟ್ಟವಾಗಿದೆ. ಆದರೆ ಈ ಆರೋಪವನ್ನು ಪಿಎಫ್ಐ ತಳ್ಳಿಹಾಕಿದೆ.
ಪೌರತ್ವ ತಿದ್ದುಪಡಿ ಕಾಯಿದೆ ಸಂಸತ್ತಿನಲ್ಲಿ ಅಂಗೀಕಾರವಾದ ಸಮಯದಲ್ಲೇ ಈ ಶಂಕಿತ ಹಣದ ವಹಿವಾಟು ನಡೆದಿದೆ. ಹಿಂಸಾಚಾರ ನಡೆದ ದಿನಾಂಕಗಳು ಹಾಗೂ ಹಣ ವರ್ಗಾವಣೆಯಾದ ದಿನಾಂಕಗಳೂ ತಾಳೆಯಾಗುತ್ತಿದೆ ಎಂದು ಇ.ಡಿ. ವರದಿಯಲ್ಲಿ ತಿಳಿಸಿದೆ.
ಸಿಎಎ ವಿರುದ್ಧ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಸುಮಾರು 20 ಜನ ಬಲಿಯಾಗಿದ್ದರು. ಉತ್ತರ ಪ್ರದೇಶ ಪೊಲೀಸರು ಈಗಾಗಲೇ ಪಿಎಫ್‌ಐ ನಿಷೇಧಿಸಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮಂಗಳೂರಿನ ಹಿಂಸಾಚಾರದ ಹಿಂದೆಯೂ ವ್ಯವಸ್ಥಿತ ಸಂಚಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಬಯಲಾಗಿದೆ ಎಂದು ರಾಜ್ಯ ಸರಕಾರ ಹೇಳಿತ್ತು.
ದೆಹಲಿಯಲ್ಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ತಿಂಗಳ ಅವಧಿಯಲ್ಲಿ ಪಿಎಫ್‌ಐ 7 ಕಚೇರಿಗಳನ್ನು ತೆರೆದಿರುವುದು ಬೆಳಕಿಗೆ ಬಂದಿದೆ. ಪಿಎಫ್‌ಐ ಮತ್ತು ಅದರ ಜತೆ ನಂಟು ಹೊಂದಿರುವ ಸಂಸ್ಥೆಗಳ ಒಟ್ಟು 9 ಕಚೇರಿಗಳನ್ನು ಇ.ಡಿ ಪತ್ತೆ ಮಾಡಿದೆ
ಹಿರಿಯ ವಕೀಲರಾದ ಕಪಿಲ್ ಸಿಬಲ್, ದುಷ್ಯಂತ್ ದವೆ, ಇಂದಿರಾ ಜೈಸಿಂಗ್ ಸೇರಿದಂತೆ ಹಲವು ವಕೀಲರಿಗೆ ಲಕ್ಷಾಂತರ ರೂ. ಹಣ ಪಾವತಿಸಲಾಗಿದೆ ಎಂದೂ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದ ತನಿಖಾ ವರದಿಯಲ್ಲಿ ಇ.ಡಿ. ತಿಳಿಸಿದೆ. ಕಪಿಲ್ ಸಿಬಲ್ 77 ಲಕ್ಷ ರೂ., ಇಂದಿರಾ ಜೈಸಿಂಗ್ 4 ಲಕ್ಷ ರೂ., ದುಷ್ಯಂತ್ ದವೆ 11 ಲಕ್ಷ ರೂ. ಮತ್ತು ಅಬ್ದುಲ್ ಸಮದ್ 3.10 ಲಕ್ಷ ರೂ. ಸ್ವೀಕರಿಸಿಗದ್ದಾರೆ ಎಂದು ಇ.ಡಿ. ಮೂಲಗಳು ತಿಳಿಸಿವೆ. ವಕೀಲರು ಈ ಆರೋಪ ತಳ್ಳಿಹಾಕಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಎಫ್ ಐ ಇವೆಲ್ಲ ಆಧಾರಹಿತ ಆರೋಪಗಳು. ಪಿಎಫ್‌ಐಗೆ ಕುಖ್ಯಾತಿ ತರುವ ಷಡ್ಯಂತ್ರ ಇದರ ಹಿಂದಿದೆ. ಇಂತಹ ಕ್ಷುಲ್ಲಕ ಪ್ರಚಾರ ತಂತ್ರಗಳಿಗೆ ನಾವು ಬಗ್ಗುವುದಿಲ್ಲ ಎಂದು ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ