ಪ್ರಗತಿವಾಹಿನಿ ಸುದ್ದಿ: ವಿಚಾರಣೆ ನೆಪದಲ್ಲಿ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆಸಿ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಪಿಎಸ್ಐ ಅಮಾನತು ಮಾಡಲಾಗಿದೆ.
ಮಂಡ್ಯದ ಪೂರ್ವ ಠಾಣಾ ಪೊಲೀಸರು ಅಶೋಕ ನಗರದ ಮಹಿಳೆ ರೂಪಾದೇವಿ ಎಂಬುವವರನ್ನು ಠಾಣೆಗೆ ಕರೆಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆಯ ತಾಯಿ ದೂರು ನೀಡಿದ್ದಾರೆ.
ರೂಪಾದೇವಿ ಎಂಬ ಮಹಿಳೆಯ ಹಸು ಮಹಿಳಾ ಪೊಲೀಸ್ ಪೇದೆಯ ಸ್ಕೂಟರ್ ಗೆ ಅಡ್ಡ ಬಂದಿತ್ತಂತೆ. ಇದರಿಂದ ಮಹಿಳಾ ಪೊಲೀಸ್ ಸಿಬ್ಬಂದಿ ಸ್ಕೂಟರ್ ನಿಂದ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಮಹಿಳಾ ಪೊಲೀಸ್ ಪೇದೆ ರೂಪಾದೇವಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಪರಿಹಾರ ಹಣ ನೀಡದ ಹಿನ್ನೆಲೆಯಲ್ಲಿ ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ.
ಠಾಣೆಗೆ ಕರೆಸಿ ವಿಚಾರಣೆ ನೆಪದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಪೊಲೀಸ್ ಸಿಬ್ಬಂದಿ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ.
ಘಟನೆ ಸಂಬಂಧ ಪಿಎಸ್ಐ ಅಮಾನತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ