
ಮೇಕೆದಾಟು ಯೋಜನೆ ಮರುಪರಿಶೀಲನೆ, ಕೇಂದ್ರದ ವಿರುದ್ಧ ಡಿಕೆಶಿ ಆಕ್ರೋಶ
ಪ್ರಗತಿವಾಹಿನಿ ಸುದ್ದಿ – ಬೆಂಗಳೂರು : ಮೇಕೆದಾಟು ಯೋಜನೆ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಕೇಂದ್ರ ಸರಕಾರವು ರಾಜ್ಯಕ್ಕೆ ಸೂಚನೆ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ. ಇದರ ವಿರುದ್ಧ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.
ಈ ಯೋಜನೆಗೆ ಈಗಾಗಲೇ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಅಲ್ಲದೇ, ವಿಸ್ತೃತ ಯೋಜನೆ ವರದಿ (ಡಿಪಿಆರ್) ಸಲ್ಲಿಸುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಈಗಾಗಲೇ ಡಿಪಿಆರ್ ಸಲ್ಲಿಸಲಾಗಿದೆ. ಯೋಜನೆ ಅನುಷ್ಠಾನ ಅಂತಿಮ ಹಂತದಲ್ಲಿರುವಾಗ ಮರುಪರಿಶೀಲನೆ ಮಾಡುವಂತೆ ಕೇಂದ್ರವು ಸೂಚಿಸಿರುವುದರ ಹಿಂದೆ ರಾಜಕೀಯ ಹುನ್ನಾರವಿದೆ ಎಂದು ಅವರು ಹೇಳಿಕೆಯಲ್ಲಿ ಆಪಾದಿಸಿದ್ದಾರೆ.
ಮೇಕೆದಾಟು ಸಮತೋಲನ ಅಣೆಕಟ್ಟೆ ಯೋಜನೆ ಇವತ್ತು-ನಿನ್ನೆ ರೂಪಿತವಾದುದಲ್ಲ. 40 ವರ್ಷಗಳ ಹಿಂದೆಯೇ ರಾಜ್ಯ ಸರಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ. ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೂ ಅನುಕೂಲವಾಗುವ ಈ ಯೋಜನೆಗೆ ಈಗಾಗಲೇ ಸ್ಥಳವನ್ನೂ ಗುರುತಿಸಲಾಗಿದೆ.
ವಿನಾಕಾರಣ ಸಮುದ್ರದ ಪಾಲಾಗಲಿರುವ ನೀರನ್ನು ಯೋಜಿತ ಆಣೆಕಟ್ಟೆಯಲ್ಲಿ ಸಂಗ್ರಹಿಸಿಟ್ಟುಕೊಂಡು ವಿದ್ಯುತ್ ಉತ್ಪಾದನೆ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಘನ ಉದ್ದೇಶವನ್ನು ಹೊಂದಲಾಗಿದೆ. ಕಾವೇರಿ ನ್ಯಾಯಾಧೀಕರಣ ತೀರ್ಪಿನಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರಿನ ಪರಿಮಿತಿಯಲ್ಲೇ ಯೋಜನೆ ರೂಪಿಸಲಾಗಿದೆ. ಹೀಗಿರುವಾಗ ಏಕಾಏಕಿ ಯೋಜನೆ ಮರುಪರಿಶೀಲನೆಗೆ ಸೂಚನೆ ನೀಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಈ ಯೋಜನೆ ರದ್ದುಪಡಿಸಲಾಗಲಿ, ಸ್ಥಳಾಂತರ ಮಾಡಲಾಗಲಿ ಅವಕಾಶ ನೀಡುವುದಿಲ್ಲ. ಪಕ್ಷಬೇಧ ಮರೆತು ಎಲ್ಲ ಸಂಸದರು ಹಾಗೂ ಶಾಸಕರು ಹೋರಾಟಕ್ಕೆ ಅಣಿಯಾಗಬೇಕಿದೆ. ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಮಂತ್ರಿಗಳು ಈ ಬಗ್ಗೆ ಗಮನ ಹರಿಸಬೇಕು. ಈ ಮೊದಲು ನಿರ್ಣಯವಾಗುರುವಂತೆ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ