ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆಯ ಮಾಡಲು ಕಾಂಗ್ರೆಸ್ ತೀವ್ರ ತಿಣಕಾಟ ನಡೆಸಿದೆ. ತಮ್ಮ ಶಾಸಕರೆಲ್ಲ ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ 12 ಕ್ಷೇತ್ರಗಳಿಗೆ ಹೊಸಬರನ್ನು ಹುಡುಕಬೇಕಾದ ಅನಿವಾರ್ಯತೆ ಇದೆ.
ಇದರಲ್ಲಿ 8 ಕ್ಷೇತ್ರಗಳಿಗೆ ಈಗಾಗಲೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಇನ್ನು ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಸಿಗಬೇಕಿದ್ದರೆ, ಕೆಲವೆಡೆ ಹಲವು ಆಕಾಂಕ್ಷಿಗಳಿದ್ದಾರೆ. ಗೋಕಾಕ ಕ್ಷೇತ್ರಕ್ಕೆ ಲಖನ್ ಜಾರಕಿಹೊಳಿ ಅವರನ್ನೇ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ.
ಅಥಣಿ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದ್ದು, ಕಾಗವಾಡದ ರಾಜು ಕಾಗೆಯನ್ನು ಅಥಣಿಯಿಂದ ಕಣಕ್ಕಿಳಿಸಲು ನಿರ್ಧರಿಸುವ ಸಾಧ್ಯತೆ ಇದೆ. ಹಾಗಾದಲ್ಲಿ ಕಾಗವಾಡ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ ಕಣಕ್ಕಿಳಿಯಲಿದ್ದಾರೆ. ಪ್ರಕಾಶ ಹುಕ್ಕೇರಿ ಈ 2018ರ ಚುನಾವಣೆಯಲ್ಲಿಯೇ ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಆಗ ಶ್ರೀಮಂತ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿತ್ತು.
ಶುಕ್ರವಾರ ಅಥವಾ ಶನಿವಾರ ಕಾಂಗ್ರೆಸ್ ಬೆಳಗಾವಿ ಜಿಲ್ಲೆಯ 3 ಕ್ಷೇತ್ರ ಸೇರಿದಂತೆ ಉಳಿದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಗೋಕಾಕದಿಂದ ರಮೇಶ ಜಾರಕಿಹೊಳಿ, ಅಥಣಿಯಿಂದ ಮಹೇಶ ಕುಮಟಳ್ಳಿ ಹಾಗೂ ಕಾಗವಾಡದಿಂದ ಶ್ರೀಮಂತ ಪಾಟೀಲ ಬಿಜೆಪಿ ಅಭ್ಯರ್ಥಿಗಳೆಂದು ಈಗಾಗಲೆ ಘೋಷಣೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ