ಪ್ರಗತಿ ವಾಹಿನಿ ಸುದ್ದಿ; ಕಾರವಾರ: ಪೊಲೀಸರ ಕಿರುಕುಳಕ್ಕೆ ಮನನೊಂದು ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆಯನ್ನು ಇಡೀ ದೇಶವೇ ಖಂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಏ.2 ರಂದು ಎಲ್ಲರೂ ತಮ್ಮ ಕರ್ತವ್ಯದ ಸ್ಥಳದಲ್ಲೇ ಕಪ್ಪು ಪಟ್ಟಿಗಳನ್ನು ಧರಿಸುವ ಮೂಲಕ ಖಂಡನೆ ವ್ಯಕ್ತಪಡಿಸಿ, ಮೃತ ವೈದ್ಯೆಯ ಆತ್ಮಕ್ಕೆ ಶಾಂತಿ ಕೋರಲು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ವಿನಂತಿಸಿದ್ದಾರೆ.
ರಾಜಸ್ಥಾನದ ದೌಸಾದಲ್ಲಿ ಗರ್ಭಿಣಿಯೊಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದರು. ಮೃತಳ ಕುಟುಂಬ ಮೃತದೇಹವನ್ನು ಕೊಂಡೊಯ್ದಿದ್ದರೂ, ಸ್ಥಳೀಯ ಕೆಲ ಮುಖಂಡರುಗಳು ಮೃತದೇಹದೊಂದಿಗೆ ಡಾ.ಅರ್ಚನಾ ಅವರ ಆಸ್ಪತ್ರೆಯ ಎದುರು ಪ್ರತಿಭಟಿಸಿ, ಪೊಲೀಸರನ್ನು ಕರೆಯಿಸಿದ್ದಾರೆ. ಪೊಲೀಸರು ಪ್ರಕರಣದ ಹಿನ್ನೆಲೆ ತಿಳಿಯದೆ ವೈದ್ಯೆಯ ವಿರುದ್ಧ ಐ ಪಿ ಸಿ ಕಲಂ 302ರ ಅಡಿ ಕೊಲೆ ಆರೋಪದ ಪ್ರಕರಣ ದಾಖಲಿಸಿ, ಆಕೆಗೆ ಕಿರುಕುಳ ನೀಡಿದ್ದಾರೆ. ಇದರಿಂದಾಗಿ ಮನನೊಂದ ಡಾ.ಅರ್ಚನಾ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರಗತಿ ವಾಹಿನಿ ಗುರುವಾರ ವರದಿ ಪ್ರಕಟಿಸಿತ್ತು.
ವೈದ್ಯಗೆ ಪೊಲೀಸರು ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣವಾಗಿರುವುದು ಇಡೀ ದೇಶವೇ ತಲೆತಗ್ಗಿಸುವಂಥ ಘಟನೆಯಾಗಿದೆ ಎಂದು ಜನಶಕ್ತಿ ವೇದಿಕೆ ಅಭಿಪ್ರಾಯಪಟ್ಟಿದೆ.
ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಒಬ್ಬ ಅಪರಿಚಿತ ರೋಗಿಯ ಪ್ರಾಣ ಉಳಿಸಲು ಹೋರಾಡುತ್ತಾರೆ. ಆದರೆ ಯಾವುದೋ ಸಂದರ್ಭದಲ್ಲಿ ಏನೋ ಘಟನೆ ನಡೆಯಿತೆಂದು ವೈದ್ಯರನ್ನೇ ಪ್ರಕರಣಗಳಲ್ಲಿ ಆರೋಪಿಗಳನ್ನಾಗಿ ಮಾಡುವುದು ಸರಿಯಾದುದಲ್ಲ. ಇದು ಉಳಿದ ವೈದ್ಯರ ಮೇಲೆ ಪರಿಣಾಮ ಬೀರುತ್ತದೆ. ವೈದ್ಯರು ತಮ್ಮ ಜೀವ ರಕ್ಷಣೆ ಕಾರ್ಯದಲ್ಲಿ ವಿಫಲವಾದಾಗ ಇಂಥ ಘಟನೆಗಳು ಆಗಾಗ ಮರುಕಳಿಸುತ್ತಿರುತ್ತದೆ. ಇದು ಮಾನವೀಯತೆಗೆ ವಿರುದ್ಧವಾದುದು. ಕಾನೂನು ಚೌಕಟ್ಟಿನಲ್ಲಿ ಎಲ್ಲವನ್ನೂ ವಿಚಾರಣೆ ನಡೆಸಬೇಕು ಹೊರತು, ರಾಜಕೀಯ ಅಥವಾ ಸ್ವಹಿತಾಸಕ್ತಿಗೆ ವೈದ್ಯರ ಮೇಲೆ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ. ಹೀಗಾಗಿ ಇಂದು ಹಿಂದೂಗಳ ಹೊಸ ವರ್ಷವಾದ ಯುಗಾದಿಯಂದೇ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವ ಮೂಲಕ ಇಂಥ ಘಟನೆಗಳನ್ನು ಖಂಡಿಸಿ, ಮೃತಳ ಆತ್ಮಕ್ಕೆ ಶಾಂತಿ ಕೋರಲು ಸಂಘಟನೆ ಮನವಿ ಮಾಡಿದೆ.
ಈ ಖಂಡನಾ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಒಕ್ಕೂಟ (ಐಎಂಎ)ದ ಉತ್ತರ ಕನ್ನಡ ಜಿಲ್ಲಾ ಶಾಖೆಯೂ ಬೆಂಬಲ ಸೂಚಿಸಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಕೈಜೋಡಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಭಾರತೀಯರ ಹೊಸ ವರ್ಷ – ‘ಯುಗಾದಿ’ : ಶಾಸ್ತ್ರೋಕ್ತ ಆಚರಣೆ ಹೇಗೆ ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ