*ಬೆಳಗಾವಿಗೆ ಬಜೇಟ್ ನಲ್ಲಿ ಸಿಕ್ಕಿದ್ದೇನು..?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಗಡಿ ಜಿಲ್ಲೆ ಬೆಳಗಾವಿ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಹಾಗಾದರೆ, ಬೆಳಗಾವಿಗೆ ಸಿಕ್ಕಿದ್ದೇನು ಎಂಬ ಕುರಿತು ಇಲ್ಲಿದೆ ಮಾಹಿತಿ.
ಬೆಳಗಾವಿ ನಗರದಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡ ನಿರ್ಮಾಣ. ಬೆಳಗಾವಿ, ಮೈಸೂರು, ಮಂಗಳೂರು-ಉಡುಪಿ-ಮಣಿಪಾಲ್, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ ಅಭಿವೃದ್ಧಿ. ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ವಲಯದಲ್ಲಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲು, ಕಿಯೋನಿಕ್ಸ್ ಮೂಲಕ ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಟ್ ಅನ್ನು ಮೈಸೂರು, ಬೆಳಗಾವಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾಗುವುದು.
ಕಿಯೋನಿಕ್ಸ್ ವತಿಯಿಂದ ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪ್ಲಗ್-ಅಂಡ್-ಪ್ಲೇ ಸೌಲಭ್ಯಗಳನ್ನೊಳಗೊಂಡ ಮೂರು ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ (GTC) ಗಳನ್ನು ಸ್ಥಾಪಿಸಲಾಗುವುದು. ಸೇವಾದಳ ಸಂಸ್ಥಾಪಕ ಹಾಗೂ ಸ್ವಾತಂತ್ರ್ಯ ಸೇನಾನಿ ಪದ್ಮಭೂಷಣ ಡಾ.ಎನ್.ಎಸ್.ಹರ್ಡೀಕರ ಅವರ ಸ್ಮಾರಕವನ್ನು ಬೆಳಗಾವಿ ಜಿಲ್ಲೆಯ ಘಟಪ್ರಭಾದ ಆರೋಗ್ಯ ಧಾಮದಲ್ಲಿ ನಿರ್ಮಿಸಲು ಎರಡು ಕೋಟಿ ರೂ. ಒದಗಿಸಲಾಗುವುದು.
ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳವಾದ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಹಾಗೂ ಬೆಂಗಳೂರಿನಲ್ಲಿರುವ ದೇವಿಕಾರಾಣಿ ರೋರಿಚ್ ಎಸ್ಟೇಟ್ ವಿಶೇಷ ಬಂಡವಾಳ ಯೋಜನೆಯಡಿ ಒಟ್ಟು 199 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಬೆಳಗಾವಿ ಮತ್ತು ಮೈಸೂರಿನಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು 7 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
ರಾಜ್ಯದಲ್ಲಿ ವಾಹನ ಸಂಚಾರವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಚಿತ್ರದುರ್ಗ, ಹಾವೇರಿ, ಹೊಸಪೇಟೆ, ಬಳ್ಳಾರಿ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 60 ಸ್ಥಳಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಎಐ ಆಧಾರಿತ ವಿದ್ಯುನ್ಮಾನ ಕ್ಯಾಮರಾಗಳನ್ನು ಅಳವಡಿಸಲಾಗುವುದು.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಒಟ್ಟಾರೆ 3,000 ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆ, ಸಮರ್ಪಕ ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆ ಮತ್ತು ಸಮತೋಲನ ಪೋಷಕಾಂಶ ನಿರ್ವಹಣೆಯನ್ನು ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ ಜಾರಿಗೊಳಿಸಲಾಗುವುದು.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹೊಸ ಕೃಷಿ ಕಾಲೇಜನ್ನು ಸ್ಥಾಪಿಸಲು ತಜ್ಞರಿಂದ ಪಡೆದುಕೊಳ್ಳಲಾಗುವುದು. ಕಳಸಾ-ಬಂಡೂರಾ ನಾಲಾ ತಿರುವು ಯೋಜನೆಯಡಿ 3.9 ಟಿಎಂಸಿ ನೀರಿನ ಬಳಕೆಗಾಗಿ ಕೇಂದ್ರ ಸರ್ಕಾರದಿಂದ ತೀರುವಳಿಗಳನ್ನು ನಿರೀಕ್ಷಿಸಿ ಈಗಾಗಲೇ ಯೋಜನಾ ಕಾಮಗಾರಿಗಳನ್ನು ಕೆಲವು ಷರತ್ತುಗಳೊಂದಿಗೆ ಗುತ್ತಿಗೆ ವಹಿಸಲಾಗಿದೆ. ಕೇಂದ್ರ ಸರ್ಕಾರದ ಆಯವ್ಯಯ 2025-26 ಅನುಮೋದನೆ ದೊರೆತ ಕೂಡಲೇ ಪ್ರಾರಂಭಿಸಲಾಗುವುದು.
ಅಥಣಿ, ಹುನಗುಂದ ಮತ್ತು ಮುಧೋಳದಲ್ಲಿ 50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪನೆ ಮಾಡಲು ಅನುಮೋದನೆ ನೀಡಲಾಗಿದೆ. ರಾಮದುರ್ಗ, ಸವದತ್ತಿ, ಮಾಲೂರು, ಮಾಗಡಿ, ಕುಶಾಲನಗರ, ಕೊರಟಗೆರೆ, ಜಗಳೂರು, ಸವಣೂರು, ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು ಹಾಗೂ ದಾವಣಗೆರೆ ಜಿಲ್ಲಾ ಆಸ್ಪತ್ರೆ ಮತ್ತು ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗಳನ್ನು ಒಟ್ಟು 650 ಕೋಟಿ ಮಾಡಲಾಗುವುದು.
ಬೆಳಗಾವಿ ಮತ್ತು ಮೈಸೂರಿನಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು ಐದು ಕೋಟಿ ರೂ. ನೀಡಲಾಗುವುದು. ಇವುಗಳ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗುವುದು.