ಪ್ರಗತಿವಾಹಿನಿ ಸುದ್ದಿ; ರಾಯಚೂರು: ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಳಗಾವಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತಿದೆ ಭಾರೀ ಪ್ರವಾಹದ ನಡುವೆಯೂ ತೆಪ್ಪದಲ್ಲಿ ವಾಪಸ್ ಆಗುತ್ತಿದ್ದ ನಾಲ್ವರು ನೀರಿನ ಸೆಳವಿಗೆ ಸಿಲುಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಭಾರೀ ಮಳೆಯಿದ್ದರೂ ರಾಯಚೂರಿನ ಕುರ್ವಾಕುಲದಿಂದ 13 ಜನರು ತೆಲಂಗಾಣದ ನಾರಾಯಣಪೇಟೆಯ ಪಂಚಾದಿಪಾಡಕ್ಕೆ ವಾರದ ಸಂತೆಗಾಗಿ ಹೋಗಿದ್ದರು. ಹೋದವರು ಸಂತೆ ಮಾಡಿಕೊಂಡು ವಾಪಸ್ಸು ಬರುವಾಗ ಅವರು ಪ್ರಯಾಣಿಸುತ್ತಿದ್ದ ತೆಪ್ಪ ನೀರಿನ ಸೆಳೆತಕ್ಕೆ ಸಿಲುಕಿದ್ದು, ನಾಲ್ವರು ನಾಪತೆಯಾಗಿದ್ದರೆ ಉಳಿದ 9 ಜನರು ದಡ ಸೇರಿದ್ದಾರೆ.
ಪಾರ್ವತಿ, ನರಸಮ್ಮ, ರೋಜಾ ಹಾಗೂ ನರಸಮ್ಮ ನಾಪತ್ತೆಯಾಗಿರುವ ಮಹಿಳೆಯರು. ನಾರಾಯಣಪುರಪೇಟೆ ಹಾಗೂ ರಾಯಚೂರು ಜಿಲ್ಲಾಡಳಿತ ನಾಪತ್ತೆಯಾಗಿರುವವರ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದೆ. ಆದರೆ ಪ್ರವಾಹ ಹೆಚ್ಚಿರುವುದರಿಂದ ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ ರಾಯಚೂರಿನಲ್ಲಿ ಎನ್ ಡಿಆರ್ಎಫ್ ತಂಡ ಹಾಗೂ ಎಸ್ ಡಿ ಆರ್ಎಫ್ ತಂಡಗಳು ಕಾರ್ಯಾಚರಣೆ ಆರಂಭಿಸಿವೆ.
ಕೃಷ್ಣಾ ನದಿಗೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ 2.80 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿತ್ತು. ಇದರೊಂದಿಗೆ ಭೀಮಾ ನದಿಯಿಂದಲೂ ಒಂದಿಷ್ಟು ನೀರು ಹರಿದು ಬರುತ್ತಿರುವುದರಿಂದ ಪ್ರವಾಹ ಅಧಿಕವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ